ಪಂಚಕಲೆಗಳ ಸೇವೆಯೇ ವಿಶ್ವಕರ್ಮ ಸಮಾಜದ ವೈಶಿಷ್ಟೃ

61
Published on

ಹರಿಹರ: ನಾಗರಿಕತೆ ಆರಂಭವಾಗುವ ಮೊದಲಿನಿಂದಲೂ ಪಂಚಕಲೆಗಳ ಸೇವೆ ಸಲ್ಲಿಸುತ್ತಿರುವುದು ವಿಶ್ವಕರ್ಮ ಸಮಾಜದ ವೈಶಿಷ್ಟ್ಯವಾಗಿದೆ ಎಂದು ಅರೇಮಾದನಹಳ್ಳಿ ಸುಜ್ಞಾನಪ್ರಭು ಸಂಸ್ಥಾನ ಮಠದ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕು ಆಡಳಿತ ಹಾಗೂ ವಿಶ್ವಕರ್ಮ ಸಮಾಜದಿಂದ ನಗರದ ಗುರು ಮೌನೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಭಗವಾನ್ ಶ್ರೀ ವಿಶ್ವಕರ್ಮ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಇರುವ ಹಿಂದು ದೇವಸ್ಥಾನಗಳು, ಜೈನ ಬಸದಿಗಳು, ಬೌದ್ಧರ ಸ್ತೂಪಗಳು, ಚರ್ಚ್‌ಗಳು, ಮಸೀದಿ-ದರ್ಗಾ ನಿರ್ಮಾಣದಲ್ಲಿ ವಿಶ್ವಕರ್ಮರ ಕೈಚಳಕವಿದೆ. ಪಾಶ್ಚಿಮಾತ್ಯ ದೇಶಗಳ ಪ್ರವಾಸಿಗರು ಇಲ್ಲಿನ ಶಿಲ್ಪಗಳಲ್ಲಿನ ಕುಸುರಿ ಕೆತ್ತನೆಗೆ ಮಾರುಹೋಗಿದ್ದಾರೆ ಎಂದರು.

ಶಾಸಕ ಬಿ.ಪಿ.ಹರೀಶ್ ಮಾತನಾಡಿ, ವಿಶ್ವಕರ್ಮ ಸಮುದಾಯವು ನಾಡಿಗೆ ತನ್ನದೆ ವಿಶಿಷ್ಟ ಕೊಡುಗೆ ನೀಡುತ್ತ ಬಂದಿದೆ. ತಮ್ಮ ಹಿಂದಿನ ಅವಧಿಯಲ್ಲಿ ಹಲವು ಕಾಮಗಾರಿಗಳಿಗೆ ಅನುದಾನ ನೀಡಿದ್ದು, ಈಗಲೂ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ 5 ಲಕ್ಷ ನೀಡುವುದಾಗಿ ತಿಳಿಸಿದರು.

ಮಾಜಿ ಶಾಸಕ ಎಸ್. ರಾಮಪ್ಪ ಮಾತನಾಡಿ, ದೇವಸ್ಥಾನ ರಸ್ತೆಗೆ ಜಕಣಾಚಾರಿ ಹೆಸರಿಡಲು ನಗರಸಭೆಯಲ್ಲಿ ತೀಮಾನಿಸಬಹುದು. ಹರಿಹರೇಶ್ವರ ದೇವಸ್ಥಾನದ ಆವರಣದಲ್ಲಿ ಜಕಣಾಚಾರಿ ಮೂರ್ತಿ ಸ್ಥಾಪಿಸಲು ಕೋರಿ ಅರ್ಜಿ ನೀಡಿದರೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮುಖ್ಯಮಂತ್ರಿ ಜತೆ ಚರ್ಚಿಸಿ ಮೂರ್ತಿ ಸ್ಥಾಪನೆಗೆ ಪ್ರಯತ್ನಿಸುತ್ತೇನೆ ಎಂದರು.

ಮಾಜಿ ಶಾಸಕ ಎಚ್.ಎಸ್ ಶಿವಶಂಕರ್ ಮಾತನಾಡಿ, ಮುಖ್ಯಮಂತ್ರಿ, ಸಚಿವರೊಂದಿಗೆ ಚರ್ಚಿಸಿ ಹರಿಹರೇಶ್ವರ ದೇವಸ್ಥಾನದ ಆವರಣದಲ್ಲಿ ಜಕಣಾಚಾರಿ ಅವರ ಮೂರ್ತಿ ಸ್ಥಾಪಿಸುವುದು ಕಷ್ಟ ಸಾಧ್ಯ. ಏಕೆಂದರೆ ಹರಿಹರೇಶ್ವರ ದೇವಸ್ಥಾನ ಪ್ರಾಚ್ಯ ವಸ್ತು ಇಲಾಖೆಯಡಿ ಇದ್ದು, ಅವರ ಅನುಮತಿ ಇಲ್ಲದೆ ಒಂದು ಕಲ್ಲು ಸಹ ಅಲುಗಾಡಲು ಸಾಧ್ಯವಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net