

ತುಮಕೂರು: ದಸರಾ ವೈಭವಕ್ಕೆ ಮತ್ತಷ್ಟು ಮೆರಗು ತಂದಿದ್ದು ವಿಂಟೇಜ್ ಕಾರು ಪ್ರದರ್ಶನ. ಬೆಂಗಳೂರಿನ ವಿಧಾನಸೌಧದ ಮುಂಭಾಗದಿಂದ ತುಮಕೂರು ದಸರಾ ವಸ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಹೊರಟ ವಿಂಟೇಜ್ ಕಾರುಗಳ ಯಾತ್ರೆಗೆ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಶುಕ್ರವಾರ ಬೆಳಗ್ಗೆ ಚಾಲನೆ ನೀಡಿದರು.
ಬೆಂಗಳೂರಿನಿಂದ ಹೊರಟ ಕಾರುಗಳ ಯಾತ್ರೆಯನ್ನು ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಒ ಜಿ.ಪ್ರಭು, ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಸ್ವಾಗತಿಸಿದರು. ವಿಂಟೇಜ್ ಕಾರುಗಳನ್ನು ಏರಿ ಒಂದು ಸುತ್ತು ನಗರ ಪ್ರದಕ್ಷಿಣೆ ಹಾಕಿದರು.
ನಂತರ ಸರ್ಕಾರಿ ಜೂನಿಯರ್ ಕಾಲೇಜು ಮೈದಾನ ವಸ್ತು ಪ್ರದರ್ಶನದ ಸಭಾಂಗಣದಲ್ಲಿ ಈ ಕಾರುಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಹಳೇ ಮಾಡೆಲ್ ಕಾರುಗಳನ್ನು ಮೊಬೈಲ್ನಲ್ಲಿ ಸೆರೆಹಿಡಿದಿದ್ದಲ್ಲದೆ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ ದೃಶ್ಯ ಸಾಮಾನ್ಯವಾಗಿತ್ತು.
ಎಲ್ಸಿಎಚ್ ಹೆಲಿಕ್ಯಾಪ್ಟರ್
ದಸರಾ ವಸ್ತು ಪ್ರದರ್ಶನದ ಪ್ರಮುಖ ಆಕರ್ಷಣೆ ಎಚ್ಎಎಲ್ ಹೆಲಿಕಾಪ್ಟರ್ ಘಟಕದಿಂದ ಪ್ರದರ್ಶನಕ್ಕಿಟ್ಟಿರುವ ಹೆಲಿಕ್ಯಾಪ್ಟರ್. ಈ ಹೆಲಿಕ್ಯಾಪ್ಟರ್ ಆಕರ್ಷಣೆಯ ಕೇಂದ್ರಬಿಂದುವೆನಿಸಿದೆ. ಇದರ ಜತೆಗೆ ಹೆಲಿಕ್ಯಾಪ್ಟರ್ ನಿರ್ಮಾಣ, ಅದರ ಉತ್ಪಾದನೆಗೆ ಬಳಸುವ ಉಪಕರಣಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದು ಸಹಜವಾಗಿ ಕಾಲೇಜು ವಿದ್ಯಾರ್ಥಿಗಳು, ಯುವಜನತೆಯಲ್ಲಿ ಆಸಕ್ತಿ ಕೆರಳಿಸಿದೆ. ಇದರ ಜತೆಗೆ ಕೃಷಿ ಇಲಾಖೆ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಅರಣ್ಯ ಇಲಾಖೆಯ ಮಳಿಗೆಗಳು ವಿಶೇಷವೆನಿಸಿದ್ದು ಜನಾಕರ್ಷಣೆ ಮಾಡಿವೆ.
ಜಟ್ಟಿ ಕಾಳಗ
ಮೈಸೂರು ಮಾದರಿಯಲ್ಲೇ ಹಮ್ಮಿಕೊಂಡಿದ್ದ ದೇಸಿ ಕ್ರೀಡೆ ಕುಸ್ತಿ ಪಂದ್ಯಾವಳಿಗೆ ಸಚಿವರಾದ ಡಾ. ಜಿ. ಪರಮೇಶ್ವರ್ ಹಾಗೂ ಸಹಕಾರ ಸಚಿವ ಕೆ.ಎನ್. ರಾಜಣ್ಣ ಚಾಲನೆ ನೀಡಿದರು. ಜಟ್ಟಿ ಕಾಳಗದಲ್ಲಿ ಚಿತ್ ಮಾಡುವ ಪೈಲ್ವಾನರ ಸಾಹಸಕ್ಕೆ ಕುಸ್ತಿ ಅಖಾಡ ಸುತ್ತಲೂ ನೆರೆದಿದ್ದ ಜನರ ಹರ್ಷೋದ್ಘಾರ ಮುಗಿಲು ಮುಟ್ಟಿತು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ರಾಜಣ್ಣ, ಇತ್ತೀಚೆಗೆ ಕಣ್ಮರೆಯಾಗುತ್ತಿರುವ ಇಂತಹ ದೇಸಿ ಕ್ರೀಡೆಗಳನ್ನು ನೋಡಲು ಸಾಧ್ಯವಾಗದೆ ಇದ್ದ ತುಮಕೂರು ಜಿಲ್ಲೆಯ ಜನ ಕುಸ್ತಿ ಪಂದ್ಯಾವಳಿಯನ್ನು ಕಣ್ತುಂಬಿಕೊಳ್ಳಲು ಈ ಮೂಲಕ ಅವಕಾಶ ಕಲ್ಪಿಸಲಾಗಿದೆ. ತುಮಕೂರಿನಲ್ಲಿಯು ಸಾಕಷ್ಟು ಗರಡಿ ಮನೆಗಳಿದ್ದು ಪೈಲ್ವಾನರ ಸೆಣಸಾಟ ನೋಡುವುದೇ ಒಂದು ರೋಚಕವೆನಿಸುತ್ತಿತ್ತು ಎಂದರು.
ಲೇಸರ್ ಶೋನಲ್ಲಿ ತುಮಕೂರಿನ ಇತಿಹಾಸ
ಸಾಂಸತಿಕ ವೈಭವದ ಕಾರ್ಯಕ್ರಮದ ಮಧ್ಯದಲ್ಲಿ ತೋರಿಸಿದ ಲೇಸರ್ ಶೋ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ತುಮಕೂರಿನ ಇತಿಹಾಸವನ್ನು ಲೇಸರ್ ಶೋನಲ್ಲಿ ನೀಡಿ ನೆರದಿದ್ದವರನ್ನು ಸೂಜಿಗಲ್ಲಿನಂತೆ ಸೆಳಯಲಾಯಿತು.