

ಕಿಕ್ಕೇರಿ: ಭಾರತೀಪುರ ಕ್ರಾಸ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಗ್ರಾಮಸ್ಥರು ಆರೋಪಿಸಿ ಪ್ರತಿಭಟನೆ ನಡೆಸಿದರು.
ಗ್ರಾಪಂ ಕಚೇರಿ ಮುಂದೆ ಬುಧವಾರ ಪಿಡಿಒ ದಿನೇಶ್ ವಿರುದ್ಧ ಗ್ರಾಪಂ ಸದಸ್ಯರು, ಬೆಡದಹಳ್ಳಿ, ಕುಂದೂರು, ಭಾರತೀಪುರ ಸೇರಿದಂತೆ ಹಲವು ಗ್ರಾಮಗಳ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಮೂಲ ಸೌಲಭ್ಯ ಕಲ್ಪಿಸಲು ಸ್ಪಂದಿಸುತ್ತಿಲ್ಲ, ಇದರಿಂದ ಗ್ರಾಮದಲ್ಲಿ ಬದುಕಲು ಕಷ್ಟವಾಗುತ್ತಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ರಾಸುಗಳ ಕೊಟ್ಟಿಗೆ ನಿರ್ಮಿಸಿ ಸಾಲ ಮಾಡಿಕೊಂಡಿದ್ದೇವೆ, ಇದುವರೆವಿಗೂ ಹಣ ಪಾವತಿಸಿಲ್ಲ ಎಂದು ಕಿಡಿಕಾರಿದರು.
ಗ್ರಾಮ ಮುಖಂಡ ರಾಮೇಗೌಡ ಮಾತನಾಡಿ, ಪಿಡಿಒ ಗ್ರಾಮಸ್ಥರು ಸೂಕ್ತ ದಾಖಲೆ ನೀಡಿದರೂ ಇ-ಸ್ವತ್ತು ಮಾಡುತ್ತಿಲ್ಲ. ದಾಖಲೆಗಳಿದ್ದರೂ ಸಂಬಂಧಪಟ್ಟ ಕೆಲಸ ಮಾಡಲು ಅಲೆದಾಡಿಸುತ್ತಿದ್ದಾರೆ. ಒಳಚರಂಡಿ ಗಬ್ಬೆದಿದೆ. ರಸ್ತೆಗಳು ಗುಂಡಿಬಿದ್ದು ಹಾಳಾಗಿವೆ. ವಿದ್ಯುತ್ ದೀಪಗಳಿಲ್ಲದೆ ಕತ್ತಲೆಯಲ್ಲಿ ಓಡಾಡಬೇಕಿದೆ. ಸಾರ್ವಜನಿಕರು ಜನಪ್ರತಿನಿಧಿಗಳ ಮೇಲೆ ಎಗರಿ ಬೀಳುವಂತಾಗಿದೆ. ಕಳಪೆ ಕಾಮಗಾರಿ, ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪಿಡಿಒ ವಿರುದ್ಧ ಸಂಬಂಧಪಟ್ಟ ಮೇಲಧಿಕಾರಿಗಳು ಶಿಸ್ತುಕ್ರಮ ತೆಗೆದುಕೊಳ್ಳಬೇಕು ಎಂದು ಪಟ್ಟು ಹಿಡಿದರು. ತಾಲೂಕು ಯೋಜನಾಧಿಕಾರಿ ಶ್ರೀನಿವಾಸ್ ಮೇಲಧಿಕಾರಿಗಳಿಗೆ ತಿಳಿಸಿ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.
ಮುಖಂಡರಾದ ರಾಮೇಗೌಡ, ಸುನೀಲ್, ಕುಬೇರ, ಶಶಿಕಲಾ, ಶಿವಕುಮಾರ್, ಶಿವರಾಮು, ಮಂಜುನಾಥ್, ಬಲರಾಮು, ದೇವರಾಜು, ಲೋಕೇಶ್, ಕುಮಾರ್ ಹಾಜರಿದ್ದರು.