ಕೆಂಪೇಗೌಡ ಸ್ಮಾರಕದಿಂದ ಜ್ಯೋತಿ ಕೊಂಡೊಯ್ಯಲು ಗ್ರಾಮಸ್ಥರ ವಿರೋಧ

FotoJet (3)
Published on

ಮಾಗಡಿ: ತಾಲೂಕಿನ ಕೆಂಪಾಪುರದಲ್ಲಿರುವ ಕೆಂಪೇಗೌಡ ಸ್ಮಾರಕದಿಂದ ಜೂ.27 ರಂದು ವಿಧಾನಸೌಧಕ್ಕೆ ಜ್ಯೋತಿ ತೆಗೆದುಕೊಂಡು ಹೋಗದಂತೆ ಪ್ರತಿಭಟನೆ ನಡೆಸಲು ಗ್ರಾಮಸ್ಥರು ಮುಂದಾಗಿದ್ದಾರೆ. ಬೆಂಗಳೂರು ವಿಧಾನ ಸೌಧ ಬ್ಲಾಂಕ್ವೆಟ್ ಹಾಲ್ನಲ್ಲಿ ನಡೆಯುವ ಕೆಂಪೇಗೌಡ ಜಯ್ಯಂತ್ಯುತ್ಸವ ಕಾರ್ಯಕ್ರಮಕ್ಕೆ ಕಳೆದ 10 ವರ್ಷದಿಂದ ಕೆಂಪಾಪುರ ಕೆಂಪೇಗೌಡ ಸಮಾಧಿಯಿಂದ ಜ್ಯೋತಿ ಕೊಂಡೊಯ್ಯಲು ಗ್ರಾಮಸ್ಥರು ಸಹಕರಿಸುತ್ತಿದ್ದು, ಈ ಬಾರಿ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಸರ್ಕಾರ ಕೆಂಪೇಗೌಡರ ಸ್ಮಾರಕವನ್ನು ಅಭಿವೃದ್ದಿಪಡಿಸುವುದಾಗಿ ಶಾಸಕರು, ಮಠಾಧೀಶರು, ಮಹಾನಗರ ಪಾಲಿಕೆ, ಜಿಲ್ಲಾಡಳಿತ, ತಾಲೂಕು ಆಡಳಿತ ಅಧಿಕಾರಿಗಳು ಸ್ಮಾರಕದ ಸುತ್ತ ಮತ್ತಲಿನ ಜಾಗವನ್ನು ನೀಡುವಂತೆ ಗ್ರಾಮದ ಜನರಲ್ಲಿ ಮನವಿ ಮಾಡಿದರು. ಕೆಂಪೇಗೌಡ ಅವರ ಮೇಲಿನ ಗೌರವಕ್ಕೆ ಗ್ರಾಮಸ್ಥರೆಲ್ಲ ಸೇರಿ ಎ್ಲ ಗ್ರಾಮಠಾಣಾದ ಮನೆ ಸಹಿತ ಜಾಗ ಹಾಗೂ ಹೆಚ್ಚುವರಿಯಾಗಿ ಖುಷ್ಕಿ ಜಮೀನನ್ನು ಬಿಟ್ಟುಕೊಟ್ಟಿದ್ದಲ್ಲದೆ, ಉಳಿದ 10ರಿಂದ 20 ಗುಂಟೆ ಜಾಗವನ್ನು ಪಡೆಯಲು ಸರ್ಕಾರ ಮುಂದಾಗಿದೆ. ಇದರಿಂದ ರೈತರಿಗೆ ವಾಸಮಾಡಲೂ ಜಾಗ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸರ್ಕಾರ ಇತ್ತೀಚೆಗೆ ಹೆಚ್ಚುವರಿಯಾಗಿ 10 ಸಾವಿರ ಎಕರೆ ಜಾಗವನ್ನು ಭೂಸ್ವಾಧೀನಗೊಳಿಸಲು ಮುಂದಾಗಿದ್ದು, ಗ್ರಾಮದ ಜನರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಮುಂದಾಗಿದೆ. ಇದರಿಂದ ಗ್ರಾಮಸ್ಥರು ಬೀದಿಗೆ ಬೀಳುವ ಆತಂಕ ಎದುರಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಭೂ ಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಆದೇಶ ಹೊರಡಿಸಬೇಕು. ಇಲ್ಲವಾದ್ದಲ್ಲಿ ಮುಂದಾಗುವ ಅನಾಹುತಕ್ಕೆ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಕೆಂಪೇಗೌಡ ಅವರ ಸಮಾಧಿ ಪತ್ತೆಯಾಗಿ 10 ವರ್ಷಕಳೆದಿದೆ. ಅದನ್ನು ವಿಶ್ವಪಾರಂಪರಿಕ ಸ್ಥಳ ಮಾಡುವುದಾಗಿ ಹೇಳಿ 10 ವರ್ಷ ಕಳೆದರೂ ಸರ್ಕಾರ ಇನ್ನೂ ಅಭಿವೃದ್ಧಿಪಡಿಸಿಲ್ಲ. ಕೆಂಪೇಗೌಡ ಜಯಂತಿ ಬಂದಾಗ ಮಾತ್ರ ಸರ್ಕಾರಕ್ಕೆ ಕೆಂಪಾಪುರ ನೆನಪಿಗೆ ಬಂದು ಜ್ಯೋತಿ ಕೊಂಡೊಯ್ಯುತ್ತಾರೆ. ಮುಂದೆಯೂ ಇದೇ ರೀತಿ ನಡೆಯದೆ ಅಭಿವೃದ್ಧಿಗೆ ಒತ್ತು ನೀಡಲಿ ಎಂದು ಎಚ್ಚರಿಸಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಹರೀಶ್, ಗ್ರಾಮದ ಮುಖಂಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net