ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ ಗ್ರಾಮಸ್ಥರ ವಿರೋಧ

manavi
ಕಾಪು ಪುರಸಭೆಯ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣ ವಿರೋಧಿಸಿ ಮೂಳೂರು ಗ್ರಾಮಸ್ಥರು ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಮೂಳೂರಿನ ಜನವಸತಿ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಾಪು ಪುರಸಭೆಯ ಕೊಳಚೆ ನೀರು ಶುದ್ಧೀಕರಣ ಘಟಕ(ಎಸ್‌ಟಿಪಿ)ಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ತಹಸೀಲ್ದಾರ್ ಪ್ರತಿಭಾ ಆರ್. ಅವರಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದರು.

ಘಟಕ ನಿರ್ಮಾಣಕ್ಕೆ ಗುರುತಿಸಿರುವ ಜಾಗ ಕೃಷಿ, ಜನವಸತಿ ಪ್ರದೇಶವಾಗಿರುವುದಲ್ಲದೆ ದೈವ, ದೇವಸ್ಥಾನ ಸಹಿತ ನಾಗಬನಗಳ ಸಾನ್ನಿಧ್ಯವಾಗಿದೆ. ಅಂತರ್ಜಲ ಮಟ್ಟ ಮೇಲ್ಭಾಗದಲ್ಲಿದ್ದು, ಮಲಿನ ನೀರು, ರಾಸಾಯನಿಕ ಮಿಶ್ರಿತ ನೀರಿನಿಂದ ಜಲಮೂಲಕ್ಕೆ ಕುತ್ತು ಬರಲಿದೆ. ಸಮುದ್ರ ತೀರಕ್ಕೆ ಹತ್ತಿರವಾಗಿರುವ ಈ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ರೆಸಾರ್ಟ್, ಹೋಮ್ ಸ್ಟೇಗಳು ಕಾರ್ಯನಿರ್ವಹಿಸುತ್ತಿದ್ದು, ದೇಶ-ವಿದೇಶಗಳ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ. ಇಲ್ಲಿ ಘಟಕ ನಿರ್ಮಾಣದಿಂದ ನೈಸರ್ಗಿಕವಾಗಿ ಮಲಿನಗೊಳ್ಳುವ ಭೀತಿಯಿದೆ ಎಂದು ಗ್ರಾಮಸ್ಥರು ದೂರಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಪ್ರತಿಭಾ, ಎಸ್‌ಟಿಪಿ ರಚನೆಗೆ ಮೂಳೂರು ಗ್ರಾಮದ 1.78 ಎಕರೆ ಜಮೀನನ್ನು ಗುರುತಿಸಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ಘಟಕ ಸ್ಥಾಪನೆಗೆ ರಾಜ್ಯ ಸರ್ಕಾರದಿಂದ ಪುರಸಭೆಗೆ ನಿರ್ದೇಶನ ನೀಡಲಾಗಿದೆ. ಅದರಂತೆ ಪುರಸಭೆ ವ್ಯಾಪ್ತಿಯ 4 ಗ್ರಾಮಗಳಲ್ಲಿ ಜಮೀನು ಗುರುತಿಸಿ ಪಟ್ಟಿ ನೀಡಲಾಗಿತ್ತು. ಈ ಪೈಕಿ ಮೂಳೂರು ಜಾಗ ಘಟಕ ನಿರ್ಮಾಣಕ್ಕೆ ಸೂಕ್ತವೆಂದು ಮಂಜೂರು ಮಾಡುವಂತೆ ಪುರಸಭೆ ತಾಂತ್ರಿಕ ವಿಭಾಗದ ಇಂಜಿನಿಯರ್ ಕೋರಿದ್ದರು. ಅದರಂತೆ ಅವರಿಗೆ ನೀಡಲಾಗಿದೆ. ಒಂದು ವೇಳೆ ಇಂಜಿನಿಯರ್ ಬೇರೆ ಜಾಗವನ್ನು ಮಂಜೂರು ಮಾಡುವಂತೆ ಕೋರಿಕೆ ಸಲ್ಲಿಸಿದರೆ, ಮೂಳೂರು ಜಾಗ ರದ್ದುಗೊಳಿಸಿ ಹೊಸ ಜಾಗ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.

ಪುರಸಭೆ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಗ್ರಾಮಸ್ಥರಾದ ಎಂ.ಎ.ಗಪೂರು, ಮನೋಹರ ಅಡ್ಯಂತಾಯ, ಪುರಸಭೆ ಸದಸ್ಯರಾದ ಸತೀಶ್ಚಂದ್ರ ಮೂಳೂರು, ಮೊಹಮ್ಮದ್ ಆಸಿಫ್, ಪ್ರಕಾಶ್ ಅಂಚನ್, ಚಂದ್ರ ಗುರಿಕಾರ, ಪುರುಷೋತ್ತಮ ಸಾಲ್ಯಾನ್, ಪ್ರಭಾತ್ ಶೆಟ್ಟಿ, ನವೀನಚಂದ್ರ ಸಾಲ್ಯಾನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net