

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಜಿಎಸ್‌ಟಿ ಕಾನೂನು ಅನುಷ್ಠಾನಕ್ಕೆ ತಂದು ಬಡವರ, ಜನ ಸಾಮಾನ್ಯರ ರಕ್ತಹೀರುವಂತಹ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಆರೋಪಿಸಿದರು.
ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ವಿವಿಧ ಘಟಕಗಳ ಸಹಭಾಗಿತ್ವದಲ್ಲಿ ಕಾಪುವಿನಲ್ಲಿ ಗುರುವಾರ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬೆಲೆ ಏರಿಕೆ ಮಾಡಿರುವುದಲ್ಲದೆ, ತಾನು ಕೊಟ್ಟ ಯಾವುದೇ ಆಶ್ವಾಸನೆ ಅನುಷ್ಠಾನಕ್ಕೆ ತಂದಿಲ್ಲ. ಕರ್ನಾಟಕ ರಾಜ್ಯದಿಂದ ಜಿಎಸ್‌ಟಿ ಮೂಲಕ 4.5 ಲಕ್ಷ ಕೋಟಿ ರೂ. ಸಂಗ್ರಹ ಮಾಡಲಾಗುತ್ತಿದ್ದರೂ, ನಮಗೆ ಬರಬೇಕಾದ 50 ಸಾವಿರ ಕೋಟಿ ರೂ. ಕೊಡುತ್ತಿಲ್ಲ. ಇಲ್ಲಿ ಸಂಗ್ರಹವಾಗುವ ಹಣವನ್ನು ಬಿಜೆಪಿ ಸರ್ಕಾರವಿರುವ ರಾಜ್ಯಗಳಿಗೆ ವಿನಿಯೋಗಿಸಲಾಗುತ್ತಿದೆ. ಐಟಿ, ಇಡಿ, ಸಿಬಿಐ ದುರ್ಬಳಕೆ ಮಾಡಿ ರಾಜ್ಯ ಸರ್ಕಾರವನ್ನು ಶಿಥಿಲಗೊಳಿಸುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಮಾಜಿ ಶಾಸಕ ಗೋಪಾಲ ಪೂಜಾರಿ, ಸುಧೀರ್‌ಕುಮಾರ್ ಮರೋಳಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿದರು. ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಳ ಬಳಿಯಿಂದ ಪೇಟೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.
ಪಕ್ಷದ ಪ್ರಮುಖರಾದ ಉದಯ ಕುಮಾರ್ ಶೆಟ್ಟಿ ಮುನಿಯಾಲು, ದಿನೇಶ್ ಹೆಗ್ಡೆ ಮೊಳಹಳ್ಳಿ, ಪ್ರಸಾದ್‌ರಾಜ್ ಕಾಂಚನ್, ಹರೀಶ್ ಕಿಣಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಅಣ್ಣಯ್ಯ ಸೇರಿಗಾರ್, ನೀರೆ ಕೃಷ್ಣ ಶೆಟ್ಟಿ, ಮಂಜುನಾಥ್ ಪೂಜಾರಿ, ಶಿವಾಜಿ ಸುವರ್ಣ, ವಿಕ್ರಂ ಕಾಪು, ಸರಸು ಬಂಗೇರ, ರಮೇಶ್ ಕಾಂಚನ್, ರಾಜು ಪೂಜಾರಿ, ಎಂ.ಎ.ಗಫೂರ್, ಕೃಷ್ಣ ಶೆಟ್ಟಿ ಬಜಗೋಳಿ, ಕಿರಣ್, ಶರ್ಫುದ್ದೀನ್ ಶೇಖ್, ನಿಯಾಝ್ ಪಡುಬಿದ್ರಿ, ಶಾಂತಲತಾ ಶೆಟ್ಟಿ, ಅಬ್ದುಲ್ ಅಜೀಲ್ ಮತ್ತಿತರರು ಉಪಸ್ಥಿತರಿದ್ದರು.