

ಹಾವೇರಿ: ಮಳೆಯಿಂದ ಹಾನಿಯಾಗಿ ಅನಾಹುತ ಸಂಭವಿಸಿದ್ದರೂ ಜನರ ಸಮಸ್ಯೆಗೆ ಸ್ಪಂದಿಸದ್ದರಿಂದ ಸಿಟ್ಟಾದ ಗ್ರಾಮಸ್ಥರು ಗ್ರಾಮ ಪಂಚಾಯತ್ ಅಧ್ಯಕ್ಷನಿಗೇ ಬಾರಿಸಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಶಿಶುವಿನಹಾಳ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ.
ನಿಂಗಪ್ಪ ಬೆಂತೂರಗೆ ಗ್ರಾಮಸ್ಥರಿಂದ ಏಟು ತಿಂದ ಗ್ರಾಮಪಂಚಾಯತ್ ಅಧ್ಯಕ್ಷ. ನಿನ್ನೆ ರಾತ್ರಿ ಗ್ರಾಮದಲ್ಲಿ ಮನೆ ಕುಸಿದು ಬಸನಗೌಡ ಪಾಟೀಲ ಎಂಬ ಯುವಕ ಮೃತಪಟ್ಟಿದ್ದಾನೆ. ಯುವಕನ ಸಾವಿನ ಜತೆಗೆ ಗ್ರಾಮದಲ್ಲಿ ಮನೆಗಳು ಬಿದ್ದಿರುವ ಪ್ರಕರಣಗಳು ನಡೆದಿದ್ದರೂ ಜನರ ಸಮಸ್ಯೆ ಆಲಿಸದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಈ ಕೃತ್ಯವೆಸಗಿದ್ದಾರೆ.
ಗ್ರಾಮಕ್ಕೆ ತಹಶೀಲ್ದಾರ ಶಿವಾನಂದ ರಾಣೆ ಆಗಮಿಸಿದ್ದ ವೇಳೆ ತಹಶೀಲ್ದಾರರ ಮುಂದೆಯೇ ಗ್ರಾಮ ಪಂಚಾಯಿತಿ ಅಧ್ಯಕ್ಷನನ್ನು ಎಳೆದಾಡಿದ ಗ್ರಾಮಸ್ಥರು, ಆತನಿಗೆ ಏಟು ಕೊಟ್ಟಿದ್ದಾರೆ. ಆತನನ್ನು ಬಚಾವ್ ಮಾಡಲು ಬಂದ ಸದಸ್ಯ ನಿಂಗಯ್ಯ ಪೂಜಾರ ಎಂಬಾತನ ಮೇಲೂ ಹಲ್ಲೆಗೆ ಮುಂದಾಗಿದ್ದರು. ಮಳೆಗೆ ಮನೆಗಳು ಬಿದ್ದಾಗ ಸಮಸ್ಯೆ ಬಗ್ಗೆ ಸ್ಪಂದಿಸದೆ ಬೇಜವಾಬ್ದಾರಿ ಪ್ರದರ್ಶನ ಮಾಡಿದ್ದಕ್ಕೆ ಅಧ್ಯಕ್ಷನಿಗೆ ಏಟು ಕೊಟ್ಟಿದ್ದಾರೆ. ಬಳಿಕ ಗ್ರಾಮದ ಇತರರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಶಿಗ್ಗಾಂವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.