

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ, ನವಿಲು, ಮಂಗಗಳ ಹಾವಳಿ, 92 ಹೇರೂರು ಗ್ರಾಮದ ಪ್ಲಾಟಿಂಗ್ ಸಮಸ್ಯೆ ಹಾಗೂ ಪಾದೂರು ಗ್ರಾಮದಲ್ಲಿ ಜಲ್ಲಿ ಕ್ರಷರ್ ಕಾರ್ಯಾಚರಣೆ ಮತ್ತಿತರ ವಿಷಯಗಳ ಬಗ್ಗೆ ಮಜೂರು ಗ್ರಾಮಸಭೆಯಲ್ಲಿ ಗ್ರಾಮಸ್ಥರು ಗಂಭೀರ ಚರ್ಚೆ ನಡೆಸಿದರು. ಮಜೂರು ಗ್ರಾಮ ಪಂಚಾಯಿತಿಯ 2025-26 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಗ್ರಾಪಂ ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು. ಸಮಾಜ ಕಲ್ಯಾಣ, ಆರೋಗ್ಯ, ಅರಣ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ, ಹಿಂದುಳಿದ ವರ್ಗಗಳ, ಪೊಲೀಸ್, ಮಹಾತ್ಮಗಾಂಧಿ ನರೇಗಾ ಯೋಜನೆ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಇಲಾಖೆಯ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಮಸಭೆಯಲ್ಲಿ ನೋಡೆಲ್ ಅಧಿಕಾರಿಯಾಗಿ ಈವರೆಗೆ ಕರ್ತವ್ಯ ನಿರ್ವಹಿಸಿದ್ದ ಪಶು ವೈದ್ಯಾಧಿಕಾರಿ ಡಾ.ಅರುಣ್ ಹೆಗ್ಡೆ, ಪಾದೂರು ಗ್ರಾಮದಲ್ಲಿ ಗ್ರಾಮ ಸಹಾಯಕರಾಗಿ ನಿವೃತ್ತಿ ಹೊಂದಿರುವ ಲಕ್ಷಣ್ ಶೆಟ್ಟಿಗಾರ್, ಕರಂದಾಡಿ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ನಿವೃತ್ತಿ ಹೊಂದಿರುವ ಕುಸುಮಾ, ಚಂದ್ರನಗರ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ನಿವೃತ್ತಿ ಹೊಂದಿರುವ ಪುಷ್ಪಾ, ಮಜೂರು ಗ್ರಾಪಂ ಅಧಿಕೃತ ವೆಬ್‌ಸೈಟ್ ಉಚಿತವಾಗಿ ಮಾಡಿಕೊಟ್ಟಿರುವ ಅರುಣ್ ಶೆಟ್ಟಿ ಅಂಡೆಮಾರುಗುತ್ತು ಪಾದೂರು ಅವರನ್ನು ಸನ್ಮಾನಿಸಲಾಯಿತು. ಕಳೆದ 5 ವರ್ಷಗಳಿಂದ ಪಾರದರ್ಶಕ ಆಡಳಿತ, ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಿದ ನಿಕಟ ಪೂರ್ವ ಅಧ್ಯಕ್ಷೆ ಶರ್ಮಿಳಾ ಆಚಾರ್ಯ, ಉಪಾಧ್ಯಕ್ಷ ಮಧುಸೂದನ್ ಸಾಲ್ಯಾನ್, ಹಾಲಿ ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು ಹಾಗೂ ಉಪಾಧ್ಯಕ್ಷೆ ಮಂಜುಳಾ ಆಚಾರ್ಯ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಇಂಟರ್‌ನ್ಯಾಶನಲ್ ಆರ್ಗನೈಸೇಶನ್ ಆಫ್ ಸ್ಟ್ಯಾಂಡರ್ಡೈಸೇಶನ್ (ಐಎಸ್‌ಒ)ಗೆ ಮಜೂರು ಗ್ರಾಪಂ ಆಯ್ಕೆಯಾಗಿರುವ ಬಗ್ಗೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು. ಪಿಡಿಒ ವಿಲಾಸಿನಿ, ವಿವಿಧ ಇಲಾಖಾಧಿಕಾರಿಗಳಾದ ಬಸವರಾಜ ಎಚ್.ಎಲ್., ಚಂದ್ರಕಲಾ, ಮಲ್ಲಿಕಾರ್ಜುನ, ಪೂರ್ಣಿಮಾ, ಬಬಿತಾ, ಗಂಗಾಧರ್, ಮಂಜುನಾಥ ಅಡಿಗ, ಶ್ರೀಕಾಂತ್, ಕ್ಲಾರೆನ್ಸ್ ಲೆಸ್ಟರ್ನ್ ಕರ್ನೇಲಿಯೋ, ಅಕ್ಷಯ್ ಕೃಷ್ಣ, ಶಂಕರ್ ಉಪಸ್ಥಿತರಿದ್ದರು. ಮಾರ್ಗದರ್ಶಿ ಅಧಿಕಾರಿ ಕಾಪು ತಾಪಂ ಸಹಾಯಕ ಲೆಕ್ಕಾಧಿಕಾರಿ ಸುಗುಣಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಕಾರ್ಯದರ್ಶಿ ಪ್ರಸಾದ್ ಭಂಡಾರಿ ಸ್ವಾಗತಿಸಿ, ವಂದಿಸಿದರು. ಆಶಾ ರವೀಂದ್ರ ಆಚಾರ್ಯ ಸನ್ಮಾನ ನಿರೂಪಿಸಿದರು.
ನೂರಾರು ವರ್ಷಗಳಿಂದ ತನ್ನ ಪೂರ್ವಜರೊಂದಿಗೆ ಹುಟ್ಟಿ ಬೆಳೆದು ಜೀವನ ಸಾಗಿಸುತ್ತಿದ್ದ ಅನಿವಾರ್ಯ ಸಂದರ್ಭದಲ್ಲಿ ಐಎಸ್‌ಪಿಆರ್‌ಎಲ್ 2ನೇ ಹಂತದಲ್ಲಿ ನಿರ್ವಸಿತರಾಗಿ ಬೇರೆ ಕಡೆ ಹೋಗುತ್ತಿರುವ 50 ಕುಟುಂಬದವರಿಗೆ ಗ್ರಾಮಸಭೆಯಲ್ಲಿ ಭಾವನಾತ್ಮಕ ಬೀಳ್ಕೊಡುಗೆ ನಡೆಸಲಾಯಿತು.