

ಎಚ್.ಡಿ.ಕೋಟೆ: ಸಮೀಪದ ತುಂಬಸೋಗೆ, ನಿಲುವಾಗಿಲು, ಚೌಡಹಳ್ಳಿ, ಶಿರಮಹಳ್ಳಿ ಗ್ರಾಮಗಳ ಸುತ್ತಮುತ್ತ ಕಾಣಿಸಿಕೊಳ್ಳುತ್ತಿರುವ ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು, ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘಟನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ) ಬಣದ ಕಾರ್ಯಕರ್ತರು ವಲಯ ಅರಣ್ಯಾಧಿಕಾರಿ ಕಚೇರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.
ನಮ್ಮೂರಿನಲ್ಲಿ ಎರಡು ವರ್ಷಗಳಿಂದ ಹುಲಿ ಕಾಣಿಸಿಕೊಳ್ಳುತ್ತಿದೆ. ಹಲವು ಜಾನುವಾರುಗಳನ್ನು ಬಲಿ ಪಡೆದಿದೆ. ಇದರ ಓಡಾಟದಿಂದ ರೈತರು ಜಮೀನುಗಳತ್ತ ಸುಳಿಯಲು ಸಾಧ್ಯವಾಗುತ್ತಿಲ್ಲ. ಇದೀಗ ಹೈಸ್ಕೂಲ್ ಬಳಿ ಹುಲಿ ಕಾಣಿಸಿಕೊಂಡಿದೆ. ಮಾಹಿತಿ ನೀಡಿದ ತಕ್ಷಣ ಸಿಬ್ಬಂದಿ ಸ್ಥಳಕ್ಕೆ ಬರುತ್ತಾರೆ ಅಷ್ಟೇ. ಹುಲಿ ಸೆರೆ ಹಿಡಿಯಲು ಕ್ರಮ ಕೈಗೊಂಡಿಲ್ಲ ಎಂದು ರೈತರಾದ ಅಂಕನಾಯಕ, ರಾಮಚಂದ್ರ, ಶಿವರಾಜು ಅಸಮಾಧಾನ ವ್ಯಕ್ತಪಡಿಸಿದರು.
ಸಿಬ್ಬಂದಿ ಹೊರತುಪಡಿಸಿ ಈವರೆಗೂ ಇಲಾಖೆಯ ಯಾವ ಅಧಿಕಾರಿಯೂ ಗ್ರಾಮಕ್ಕೆ ಆಗಮಿಸಿಲ್ಲ. ಪ್ರಾಣಹಾನಿ ಸಂಭಸಿದರೆ ಹೊಣೆ ಯಾರು?. ಇಲಾಖೆ ನೀಡುವ ಪರಿಹಾರದಿಂದ ಪ್ರಯೋಜನವಿದೆಯೇ ಎಂದು ಪ್ರಶ್ನಿಸಿದಿರಲ್ಲದೆ, ಕಾರ್ಯಾಚರಣೆ ಮೂಲಕ ಹುಲಿ ಸೆರೆ ಹಿಡಿಯಬೇಕು. ಇಲ್ಲದಿದ್ದಲ್ಲಿ ಕುಟುಂಬ ಸಮೇತ ಅರಣ್ಯಾಧಿಕಾರಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ರೈತ ಕಲ್ಯಾಣ ಸಂಘಟನೆ ತಾಲೂಕು ಅಧ್ಯಕ್ಷ ಉಮೇಶ್ ಮಾತನಾಡಿ, ಇತ್ತೀಚೆಗೆ ಬಡಗಲಪುರ ಗ್ರಾಮದಲ್ಲಿ ಹುಲಿ ಉಪಟಳದಿಂದ ಒಬ್ಬ ರೈತ ಕಣ್ಣು ಕಳೆದುಕೊಂಡು ಶಾಸ್ವತ ಅಂಧತ್ವಕ್ಕೆ ಒಳಗಾಗಿದ್ದಾನೆ. ಮತ್ತೊಂದು ಘಟನೆ ನಡೆಯುವ ಒಳಗಾಗಿ ಹುಲಿ ಸೆರೆ ಹಿಡಿಯುವಂತೆ ಆಗ್ರಹಿಸಿದರು.
ರೈತರು ಬೆಳೆ ಮುಸುಕಿನ ಜೋಳ, ಹತ್ತಿ ಬೆಳೆಗಳನ್ನು ಮಾರಾಟ ಮಾಡುವ ಕಾಲವಾಗಿದ್ದು, ಜಮೀನುಗಳಲ್ಲಿ ರೈತರು ಬೆಳೆ ತೆಗೆಯಲು ಜೀವಭಯದಿಂದ ಹೊಲಗಳತ್ತ ತೆರಳದೆ ಹಿಂಜರಿಯುತ್ತಿದ್ದಾರೆ. ರೈತರಿಗೆ ಕಣ್ಣೊರೆಸುವ ತಂತ್ರ ಬಿಟ್ಟು, ಈ ಕೂಡಲೇ ಹುಲಿ ಸೆರೆ ಹಿಡಿಯಲು ಮುಂದಾಗಬೇಕು ಎಂದು ಆಗ್ರಹಿಸಿದರು.
ರಾಜ್ಯ ರೈತ ಸಂಘಟನೆ ಮೈಸೂರು ಜಿಲ್ಲಾ ಕಾರ್ಯಧ್ಯಕ್ಷ ಶಂಕಹಳ್ಳಿ ಶಿವು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಗರೆ ಸತೀಶ್, ಹಂಪಾಪುರ ಹೋಬಳಿ, ಗೌರವಾಧ್ಯಕ್ಷ ಪುರ ಮಹೇಶ್, ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ನವೀನ್, ತಾಲೂಕು ಸಂಘಟನಾ ಕಾರ್ಯದರ್ಶಿ ನಾಗೇಶ್, ಕರವೇ(ಪ್ರವೀಣ್ ಶೆಟ್ಟಿ) ಬಣದ ತಾಲೂಕು ಅಧ್ಯಕ್ಷ ಕುಮಾರ್, ಉಪಾಧ್ಯಕ್ಷ ಚನ್ನ(ಸೋಮಣ್ಣ), ಟೌನ್ ಅಧ್ಯಕ್ಷ ಎನ್.ಮಹೇಶ್, ಗೌರವಾಧ್ಯಕ್ಷ ಸೋಮಣ್ಣ, ಟೌನ್ ಅಧ್ಯಕ್ಷ ಎನ್.ಮಹೇಶ್, ಉಪಾಧ್ಯಕ್ಷ ಎಚ್.ಸಿ. ಚಲುವರಾಜು, ಗೌರವ ಸಲಹೆಗಾರ ಆರ್.ಚಲುವರಾಜ್, ಗ್ರಾಮಸ್ಥರಾದ ನಾಗೇಶ್, ಸುರೇಶ್, ಬಸವರಾಜು, ರೂಪೇಶ್, ನಾಗರಾಜು, ಚಂದ್ರ, ಶಿವಲಿಂಗಯ್ಯ, ನಾಗಣ್ಣ ಇದ್ದರು.