ಸೆಕ್ಷನ್ 144 ತೆರವಿಗೆ ಗ್ರಾಮಸ್ಥರ ಒತ್ತಾಯ

29BTP004
Published on

ಬೆಟ್ಟದಪುರ
ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಗುರುವಾರ ತಹಸೀಲ್ದಾರ್ ನಿಸರ್ಗ ಪ್ರಿಯ ನೇತೃತ್ವದಲ್ಲಿ ಶಾಂತಿ ಸಭೆ ನಡೆಯಿತು.
ಸಭೆಯಲ್ಲಿ ಬೆಟ್ಟದಪುರದ ಬಸವೇಶ್ವರ ಕಾಲನಿಯ ಬಂಡೆ ಬಸಪ್ಪ ಗುಡಿಯ ಜಾಗದ ವಿಚಾರವಾಗಿ ಚರ್ಚಿಸಲಾಯಿತು. ಬಂಡೆ ಬಸಪ್ಪ ದೇಗುಲದ ಜಾಗವನ್ನು ಹಲವು ವರ್ಷಗಳ ಹಿಂದೆ ಸ್ಥಳೀಯ ಗ್ರಾಮಸ್ಥರ ಗಮನಕ್ಕೆ ತರದೆ ಈದ್ಗಾ ಮೈದಾನಕ್ಕೆ ಎಂದು ಮಂಜೂರು ಮಾಡಿ ಆದೇಶವಾಗಿದೆ. ಈ ವಿಚಾರವಾಗಿ ಹಲವು ತಿಂಗಳಿಂದ 144 ಸೆಕ್ಷನ್ ಜಾರಿ ಮಾಡಿದ್ದು ಪೂಜೆ ಮಾಡಲು ಅವಕಾಶವಿಲ್ಲವಾಗಿದೆ. 144 ಸೆಕ್ಷನ್ ತೆರವುಗೊಳಿಸಿ ಪೂಜೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.
ನಂತರ ಮಾತನಾಡಿದ ಗ್ರಾಮದ ವಿಶ್ವಕರ್ಮ ಸಮುದಾಯದವರು, ಶವ ಸಂಸ್ಕಾರ ಮಾಡಲು ಸ್ಮಶಾನವಿಲ್ಲದಂತಾಗಿದೆ. ನಮಗೆ ಸೂಕ್ತ ಸ್ಮಶಾನ ಜಾಗ ಗುರುತಿಸಿಕೊಡಬೇಕು ಎಂದು ತಹಸೀಲ್ದಾರ್‌ಗೆ ಮನವಿ ಮಾಡಿದರು.
ತಹಸೀಲ್ದಾರ್ ನಿಸರ್ಗ ಪ್ರಿಯ ಮಾತನಾಡಿ, ಸರ್ಕಾರ ಮಂಜೂರು ಮಾಡಿರುವ ಜಾಗವನ್ನು ಹಿಂಪಡೆಯಲು ನಮಗೆ ಅಧಿಕಾರವಿಲ್ಲ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿ ತಡೆಯಾಜ್ಞೆ ತರಬಹುದೆ ಹೊರತು ಜಿಲ್ಲಾ ಹಾಗೂ ತಾಲೂಕು ಆಡಳಿತಕ್ಕೆ ಯಾವುದೆ ಅಧಿಕಾರವಿಲ್ಲ. ಅಲ್ಲದೆ, 144 ಸೆಕ್ಷನ್ ತೆಗೆಯಲು ಆಗುವುದಿಲ್ಲ. ಇದರಿಂದ ಶಾಂತಿ ಸುವ್ಯವಸ್ಥೆ ಹದಗೆಡಬಹುದು. ಹಾಗಾಗಿ ಎಲ್ಲರೂ ಸಹಕಾರ ನೀಡಬೇಕು. ಮುಂಬರುವ ದಿನಗಳಲ್ಲಿ ಮತ್ತೆ ಸಭೆ ನಡೆಸಲಾಗುವುದು. ವಿಶ್ವಕರ್ಮ ಸಮುದಾಯದ ಸ್ಮಶಾನ ಜಾಗಕ್ಕೆ ಸಂಬಂಧಪಟ್ಟಂತೆ ಸೂಕ್ತ ಜಾಗ ಗುರುತಿಸಿ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಶೇಖರ್, ವೃತ್ತನಿರೀಕ್ಷಕ ದೀಪಕ್, ಸಬ್ ಇನ್‌ಸ್ಪೆಕ್ಟರ್‌ಗಳಾದ ಶಿವಶಂಕರ್, ಸ್ವಾಮಿನಾಯಕ್, ಉಪ ತಹಸೀಲ್ದಾರ್ ಶಶಿಧರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net