ಮುಳ್ಳಿನ ಗಿಡವಿಟ್ಟು ಪ್ರತಿಭಟಿಸಿದ ಗ್ರಾಮಸ್ಥ

18 HANUR 5
ಸಮಸ್ಯೆಯನ್ನು ಬಗೆಹರಿಸದ ಹಿನ್ನಲೆಯಲ್ಲಿ ಹನೂರು ತಾಲೂಕಿನ ಅಜ್ಜೀಪುರದಲ್ಲಿ ಮನ್ನಾದೆಗೌಡ ಎಂಬುವರು ಗ್ರಾಮ ಪಂಚಾಯಿತಿ ಮುಂಭಾಗ ಮುಳ್ಳಿನ ಗಿಡ ಇರಿಸಿ ಪ್ರತಿಭಟನೆ ನಡೆಸಿದರು.
Published on

ಹನೂರು: ತಾಲೂಕಿನ ಅಜ್ಜೀಪುರ ಗ್ರಾಮದಲ್ಲಿ ಗುರುವಾರ ವ್ಯಕ್ತಿಯೊಬ್ಬರೂ ಅಗತ್ಯ ಮೂಲ ಸೌಕರ್ಯ ಸಂಬಂಧ ಸಮಸ್ಯೆಯನ್ನು ಬಗೆಹರಿಸದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಮುಳ್ಳಿನ ಗಿಡವನ್ನು ಇರಿಸಿ ವಿನೂತವಾಗಿ ಪ್ರತಿಭಟನೆ ನಡೆಸಿದರು.

ಗ್ರಾಮದ ಕೆಲವು ಕಡೆಗಳಲ್ಲಿ ಹೂಳು ತುಂಬಿದ್ದು, ಕೊಳಚೆ ನೀರು ನಿಂತಲ್ಲೇ ನಿಂತು ದುರ್ವಾಸನೆ ಬೀರುವಂತಾಗಿತ್ತು. ಇದರಿಂದ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಜನರಲ್ಲಿ ರೋಗ ರುಜಿನಗಳ ಭೀತಿ ಆವರಿಸಿತ್ತು. ಜತೆಗೆ ಗ್ರಾಮದಿಂದ ಎಲ್ಲೇಮಾಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಬಹುತೇಕ ಕಡೆಗಳಲ್ಲಿ ಗುಂಡಿ ನಿರ್ಮಾಣವಾಗಿದ್ದು, ಸಂಚಾರಕ್ಕೆ ತುಂಬ ತೊಡಕಾಗಿ ಪರಿಣಮಿಸಿತ್ತು. ಇದರಿಂದ ಜನರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದರು. ಚರಂಡಿ ನಿರ್ವಹಣೆಗೆ ಅಗತ್ಯ ಕ್ರಮವಹಿಸುವಂತೆ ಹಾಗೂ ರಸ್ತೆಯ ಗುಂಡಿಗಳಿಗೆ ತಾತ್ಕಲಿಕವಾಗಿ ಮಣ್ಣು ಹಾಕಿಸಿ ಮುಚ್ಚಿಸುವಂತೆ ಗ್ರಾಮದ ಮನ್ನಾದೆಗೌಡ ಕಳೆದ 3 ತಿಂಗಳಿಂದಲೂ ಹಲವು ಬಾರಿ ಗ್ರಾಪಂ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ ಈ ಬಗ್ಗೆ ಅಗತ್ಯ ಕ್ರಮವಹಿಸದ ಹಿನ್ನೆಲೆಯಲ್ಲಿ ಮನ್ನಾದೆಗೌಡ ಮುಳ್ಳಿನ ಗಿಡವನ್ನು ತಂದು ಗ್ರಾಪಂ ಮುಂಭಾಗ ಇಟ್ಟು ಕಚೇರಿ ಬಾಗಿಲು ತೆರೆಯದಂತೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಕಚೇರಿಗೆ ಆಗಮಿಸಿದ ಅಧಿಕಾರಿಗಳು ಹಾಗೂ ನೌಕರರು ಪೊಲೀಸರ ಗಮನಕ್ಕೆ ತಂದರು. ಸ್ಥಳಕ್ಕಾಗಮಿಸಿದ ಪೊಲೀಸರು ಸಮಸ್ಯೆಯನ್ನು ಆಲಿಸಿದರು. ಈ ವೇಳೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಸಮಸ್ಯೆಯನ್ನು ಬಗೆಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಮುಳ್ಳಿನ ಗಿಡವನ್ನು ತೆರೆವುಗೊಳಿಸಲಾಯಿತು. ಬಳಿಕ ಗ್ರಾಪಂನಲ್ಲಿ ಎಂದಿನಂತೆ ಕೆಲಸ ಕಾರ್ಯ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net