ಕ್ಷೇತ್ರದ ಹತ್ತು ಗ್ರಾಮಗಳಿಗೆ ಸಾರಿಗೆ ಸೌಲಭ್ಯ: ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಭರವಸೆ

22
Published on

ಹೊನ್ನಾಳಿ: ಸ್ವಾತಂತ್ರೃ ಬಂದು 78 ವರ್ಷಗಳಾದರೂ ಬಳ್ಳೇಶ್ವರ ಗ್ರಾಮದವರು ಸರ್ಕಾರಿ ಬಸ್ ಕಾಣಲಿಲ್ಲ ಎಂದರೆ ಜನಪ್ರತಿನಿಧಿಗಳಾದ ನಾವು ನಿಜಕ್ಕೂ ಗಂಭೀರವಾಗಿ ಯೋಚಿಸಬೇಕು ಹಾಗೂ ಬೇಸರದ ಸಂಗತಿ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ತಾಲೂಕಿನ ಬಳ್ಳೇಶ್ವರ ಗ್ರಾಮದಲ್ಲಿ ಸೋಮವಾರ ಸರ್ಕಾರಿ ಬಸ್‌ಗೆ ಚಾಲನೆ ನೀಡಿ, ಮಾತನಾಡಿದರು.

ಹೊನ್ನಾಳಿ- ನ್ಯಾಮತಿ ತಾಲೂಕಿನ ಹತ್ತು ಗ್ರಾಮಗಳಿಗೆ ಸರ್ಕಾರಿ ಬಸ್ ಓಡಾಟ ಇಲ್ಲ. ಮುಂದಿನ ದಿನಗಳಲ್ಲಿ ಆ ಗ್ರಾಮಗಳಿಗೂ ಬಸ್ ಓಡಿಸಲಾಗುವುದು. ಈ ಬಗ್ಗೆ ಅಧಿಕಾರಿಗಳಲ್ಲಿ ಚರ್ಚಿಸಿದ್ದೇನೆ ಎಂದ ಅವರು, ನಮಗೆ ಬಸ್‌ಗಳ ಕೊರತೆ ಇಲ್ಲ. ಆದರೆ, ನಿರ್ವಾಹಕರು ಹಾಗೂ ಚಾಲಕರ ಕೊರತೆ ಇದೆ. ಈ ಕೊರತೆ ನೀಗಿದ ತಕ್ಷಣ ಎಲ್ಲ ಗ್ರಾಮಗಳಿಗೂ ಬಸ್‌ಗಳನ್ನು ಕಳುಹಿಸಲಾಗುವುದು ಎಂದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಬಸ್ ಉಚಿತ ಪ್ರಯಾಣಕ್ಕೆ ಚಾಲನೆ ನೀಡಿತು. ನಂತರ ಬಸ್‌ಗಳ ಕೊರತೆ ಉಂಟಾದಾಗ ಶೀಘ್ರವೇ ಮುಖ್ಯಮಂತ್ರಿ ಸಿದ್ದರಾಮಯ್ಯ 3 ಸಾವಿರ ಬಸ್‌ಗಳನ್ನು ತರಿಸಿದರು.

ಈಗಾಗಲೇ 2000 ಬಸ್‌ಗಳು ಓಡುತ್ತಿವೆ. ಒಂದು ಸಾವಿರ ಬಸ್‌ಗಳು ಸಿದ್ಧವಾಗಿವೆ. ಆದರೆ, ಆ ಬಸ್‌ಗಳಿಗೆ ಚಾಲಕರು, ನಿರ್ವಾಹಕರು ಹೆಚ್ಚುವರಿ ಬೇಕಾಗಿರುವುದರಿಂದ ಹತ್ತು ಗ್ರಾಮಗಳಿಗೆ ಬಸ್ ಬಂದಿಲ್ಲ ಎಂದರು.

ಗ್ರಾಪಂ ಅಧ್ಯಕ್ಷೆ ಶ್ರುತಿ ಮಂಜುನಾಥ್ ಮಾತನಾಡಿ, ಸ್ವಾತಂತ್ರೃ ಬಂದು ಸುಮಾರು 78 ವರ್ಷಗಳ ಬಳಿಕ ನಮ್ಮೂರಿಗೆ ಬಸ್ ಬಂದಿರುವುದಕ್ಕೆ ನಾವೆಲ್ಲರೂ ಸಂತಸಪಡಬೇಕು. ಇದಕ್ಕೆ ಕಾರಣಕರ್ತರಾದ ಶಾಸಕರಿಗೆ ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಅಭಿವೃದ್ಧಿ ವಿಚಾರಕ್ಕೆ ಪಕ್ಷ ನೋಡದೆ ಎಲ್ಲರೂ ಶಾಸಕರಿಗೆ ಬೆಂಬಲ ವ್ಯಕ್ತಪಡಿಸೋಣ. ಚುನಾವಣೆಗೆ ಬಂದಾಗ ಮಾತ್ರ ನಾವು ನಮ್ಮ ಪಕ್ಷದ ಪರ ಕೆಲಸ ಮಾಡೋಣ. ಆಗ ಮಾತ್ರ ಗಾಂಧಿ ಅವರ ಗ್ರಾಮ ರಾಜ್ಯದ ಕನಸು ನನಸಾಗುತ್ತದೆ ಎಂದರು.

ಹೊನ್ನಾಳಿ ಉಪವಿಭಾಗಾಧಿಕಾರಿ ವಿ.ಅಭಿಷೇಕ್, ತಹಸೀಲ್ದಾರ್ ಪಟ್ಟರಾಜಗೌಡ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ರಾಮಚಂದ್ರಪ್ಪ, ಗ್ರಾಪಂ ಉಪಾಧ್ಯಕ್ಷ ಸುಭಾಶ್, ಗ್ರಾಮದ ಮುಖಂಡರಾದ ಶ್ರೀಪಾಲ್, ಪದ್ಮರಾಜ್, ಆನಂದಪ್ಪ, ರವಿ, ಪ್ರಮೋದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net