

ಪಿ.ಮಂಜುನಾಥರೆಡ್ಡಿ ಬಾಗೇಪಲ್ಲಿ
ಪುರಸಭೆ ಪ್ರದೇಶಕ್ಕೆ ಗಡಿ ಗುರುತಿಸುವ ಹಾಗೂ ಗಡಿ ರೇಖೆಯೊಳಗಿನ ಆಸ್ತಿ ವಹಿಗಳನ್ನು ಪುರಸಭೆಗೆ ವರ್ಗಾಯಿಸುವ ವಿಚಾರದಲ್ಲಿ ತಹಸೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳ ವಿಳಂಬ ನೀತಿಯಿಂದಾಗಿ ಬಾಗೇಪಲ್ಲಿಯ ಹಲವು ವಾರ್ಡ್‌ಗಳು ಮೂಲಸೌಕರ್ಯ ವಂಚಿತರಾಗಿದ್ದು, ಅಲ್ಲಿನ ನಿವಾಸಿಗಳ ಗೋಳು ಕೇಳುವವರೇ ಇಲ್ಲದಂತಾಗಿದೆ.
ತೆರಿಗೆ ಸಂಗ್ರಹಕ್ಕೆ ಪೈಪೋಟಿ
ಪುರಸಭೆ 5, 6, 7, 8, 9, 16 ಹಾಗೂ 18ನೇ ವಾರ್ಡ್ ವ್ಯಾಪ್ತಿಯಲ್ಲಿರುವ ಪರಗೋಡು, ಘಂಟಂವಾರಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನಿವೇಶನ, ಮನೆ ಹಾಗೂ ವಾಣಿಜ್ಯ ಕಟ್ಟಡಗಳಿಗೆ ಕುಡಿಯುವ ನೀರು, ನೈರ್ಮಲ್ಯ, ಬೀದಿದೀಪ, ರಸ್ತೆ, ಚರಂಡಿ ವ್ಯವಸ್ಥೆ ಕಲ್ಪಿಸುವ ಹೊಣೆ ಪುರಸಭೆಯದಾದರೆ, ಆಸ್ತಿ ತೆರಿಗೆ ಸಂಗ್ರಹಿಸುವ ವಿಚಾರದಲ್ಲಿ ನಾ ಮುಂದು, ತಾ ಮುಂದು ಎಂಬಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪೈಪೋಟಿಗಿಳಿದಿದ್ದಾರೆ. ಆದರೆ, ಈ ಪ್ರದೇಶಗಳ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ಪುರಸಭೆ ಅಧಿಕಾರಿಗಳು, ಸದಸ್ಯರು ನಿರ್ಲಕ್ಷ್ಯ ತೋರಿದ್ದು, ಅಲ್ಲಿನ ನಿವಾಸಿಗಳ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ.
ಪತ್ರಕ್ಕೆ ಉತ್ತರವಿಲ್ಲ
ಕರ್ನಾಟಕ ರಾಜ್ಯಪತ್ರ 2006ರ ಆದೇಶದಲ್ಲಿ ಸೂಚಿಸಿರುವಂತೆ ಬಾಗೇಪಲ್ಲಿ ಪುರಸಭೆ ವ್ಯಾಪ್ತಿಗೆ ಒಳಪಡುವ ಪ್ರದೇಶಗಳ ಆಸ್ತಿಗಳನ್ನು ಹಸ್ತಾಂತರ ಮಾಡದೆ ಸರ್ಕಾರದ ಆದೇಶ ಉಲ್ಲಂಘಿಸಿರುವ ಪರಗೋಡು, ಘಂಟಂವಾರಪಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿ ನೀಡುವಂತೆ ಅಂದಿನ ಬಾಗೇಪಲ್ಲಿ ಪುರಸಭೆ ಮುಖ್ಯಾಧಿಕಾರಿಗಳು 2021ರ ನವೆಂಬರ್‌ನಲ್ಲಿ ಜಿಲ್ಲಾಧಿಕಾರಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ.
ಬಾಗೇಪಲ್ಲಿ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಿ, ಪುರಸಭೆ ಯೋಜನಾ ಪ್ರದೇಶವನ್ನು ಗುರುತಿಸಿ ಗ್ರಾಪಂ ಆಸ್ತಿಗಳನ್ನು ಹಸ್ತಾಂತರ ಮಾಡುವಂತೆ ಸರ್ಕಾರ 2006ರಲ್ಲಿ ಅಧಿಸೂಚನೆ ಹೊರಡಿಸಿ 18 ವರ್ಷಗಳೇ ಕಳೆದರೂ ಪರಗೋಡು, ಘಂಟಂವಾರಪಲ್ಲಿ ಗ್ರಾಪಂ ಅಧಿಕಾರಿಗಳು ಸರ್ಕಾರದ ಆದೇಶಕ್ಕೆ ಕವಡೆ ಕಿಮ್ಮತ್ತು ನೀಡುತ್ತಿಲ್ಲ.
ಬಾಗೇಪಲ್ಲಿ ಪುರಸಭೆ ವ್ಯಾಪ್ತಿಯ ಬಿಜಿಎಸ್ ಶಾಲೆ, ಸಂಯಮ ಶಿಕ್ಷಣ ಸಂಸ್ಥೆ, ಸಬ್ ರಿಜಿಸ್ಟ್ರಾರ್ ಕಚೇರಿ ಸೇರಿ ಹಲವು ಕಚೇರಿ, ಮನೆ, ನಿವೇಶನಗಳ ಆಸ್ತಿಗಳು ಪರಗೋಡು ಗ್ರಾಮ ಪಂಚಾಯಿತಿಯಲ್ಲಿದ್ದರೆ, ಪುರಸಭೆಯಿಂದ ಮೂಲಸೌಕರ್ಯ ಕಲ್ಪಿಸಲಾಗಿದೆ. ರಸ್ತೆ, ಚರಂಡಿ ನಿರ್ಮಾಣ, ಕೊಳವೆಬಾವಿ ಕೊರೆಯಲು, ನೀರು ಸರಬರಾಜು ಪೈಪ್‌ಲೈನ್, ಬೀದಿದೀಪ ಅಳವಡಿಸಲು ಪುರಸಭೆಯಿಂದ ಅನುಮತಿ ಸಿಗುತ್ತಿಲ್ಲ. ವಾರ್ಡ್‌ನ ಪ್ರತಿಯೊಂದು ಸಮಸ್ಯೆಗೂ ಪುರಸಭೆಯನ್ನೇ ಜನ ಪ್ರಶ್ನೆ ಮಾಡುತ್ತಾರೆ. ತಾಲೂಕುಮಟ್ಟದ ಅಧಿಕಾರಿಗಳ ವಿಳಂಬ ಧೋರಣೆಯಿಂದಾಗಿ ಪುರಸಭೆ ಸದಸ್ಯರು ಜನರ ಸಮಸ್ಯೆಗೆ ಸ್ಪಂದಿಸಲು ಅಸಹಾಯಕರಾಗಿದ್ದೇವೆ.-ಎಸ್‌ಟಿಡಿ ಮೂರ್ತಿ, 9ನೇ ವಾರ್ಡ್ ಸದಸ್ಯ, ಬಾಗೇಪಲ್ಲಿ ಪುರಸಭೆ
ಪುರಸಭೆಗೆ ಹೊಂದಿಕೊಂಡಿರುವ ಪರಗೋಡು, ಘಂಟಂವಾರಪಲ್ಲಿ ಪಂಚಾಯಿತಿ ಅಧಿಕಾರಿಗಳು ಆಸ್ತಿ ವಹಿಗಳನ್ನು ಪುರಸಭೆಗೆ ತ್ವರಿತವಾಗಿ ಹಸ್ತಾಂತರ ಮಾಡುವಂತೆ ಮತ್ತೊಮ್ಮೆ ಸೂಚನೆ ನೀಡಲಾಗುವುದು. ವಿಳಂಬ ಮಾಡಿದರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕಾನೂನು ಕ್ರಮ ಕೈಗೊಳ್ಳಲಾಗುವುದು.- ಎಂ.ಶ್ರೀನಿವಾಸ್, ಪುರಸಭೆ ಮುಖ್ಯಾಧಿಕಾರಿ ಬಾಗೇಪಲ್ಲಿ
ಪಂಚಾಯಿತಿಗೆ ಆಸ್ತಿ ತೆರಿಗೆ ಪಾವತಿಸುತ್ತಿರುವ ಹಿನ್ನೆಲೆಯಲ್ಲಿ 9ನೇ ವಾರ್ಡ್‌ನ ಕೆಲ ನಿವಾಸಿಗಳು ಮೂಲಸೌಕರ್ಯಗಳಿಗಾಗಿ ಪುರಸಭೆಗೆ ಹೋದರೆ ಕಂದಾಯ ಪಾವತಿ ರಸೀದಿ ಕೇಳುತ್ತಾರೆ. ಮನೆ ದಾಖಲೆಗಳು ಪಂಚಾಯಿತಿಯಲ್ಲಿರುತ್ತದೆ. ಹಾಗಾಗಿ ಜನರ ಬದುಕು ದುಸ್ತರವಾಗಿದೆ. ಜಿಲ್ಲಾಧಿಕಾರಿಗಳು ಸಮಸ್ಯೆಗೆ ಪರಿಹಾರ ಒದಗಿಸಲಬೇಕಿದೆ.-ವಿ.ನಾರಾಯಣ, ವಕೀಲ, 9ನೇ ವಾರ್ಡ್, ಬಾಗೇಪಲ್ಲಿ