

ಮಾಗಡಿ: ಭಾರತೀಯ ಸನಾತನ ಸಂಸ್ಕೃತಿಯಲ್ಲಿ ದೇವಾಲಯಗಳ ಪಾತ್ರ ಅನನ್ಯ ಎಂದು ಕೆಂಗೇರಿ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಶ್ರೀ ನಿಶ್ಚಾಲಾನಂದ ನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಕೋರಮಂಗಲ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಶ್ರೀರಾಮಾಂಜನೇಯ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವಾಲಯಗಳು ಗ್ರಾಮದ ಆಚಾರ, ಸಂಸ್ಕೃತಿ ಕೇಂದ್ರಗಳು. ಹಿಂದು ಸಮಾಜವನ್ನು ಒಗ್ಗೂಡಿಸುವ ಕೇಂದ್ರಗಳು. ಗ್ರಾಮಗಳಲ್ಲಿ ದೇವಾಲಯಗಳಿದ್ದರೆ ಸಂಸ್ಕಾರ, ಸಂಸ್ಕೃತಿ ಬೆಳೆಯುತ್ತದೆ ಎಂದರು.
ಬೇರೆ ಧರ್ಮದವರು ಒಗ್ಗಟ್ಟಾಗಿದ್ದು, ದಾರಿಯಲ್ಲಿ ನಿಂತು ನಮಾಜ್ ಮಾಡಿ ಅವರ ಧರ್ಮಕ್ಕೆ ಭಕ್ತಿ ತೋರಿಸುತ್ತಾರೆ. ಅವರು ಮತಾಂಧರು, ಮೂಲಭೂತ ವಾದಿಗಳು, ದೇಶದ ಏಕತೆಯನ್ನು ಒಡೆಯಲು ಪ್ರಶ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜಮ್ಮು - ಕಾಶ್ಮೀರಕ್ಕೆ ಯಾವ ಹಿಂದುಗಳು ಬರಬೇಕಿಲ್ಲ ಎಂಬ ಮೂಲಭೂತವಾದ ಇದ್ದು, ಅದನ್ನು ದೂರಮಾಡಲು ಅನ್ಯಧರ್ಮಿಯರಿಗೆ ಪ್ರೀತಿ ತೋರಿಸಿ ನಮ್ಮ ಧರ್ಮ, ಸಂಸ್ಕೃತಿಯನ್ನು ರಕ್ಷಣೆ ಮಾಡುವ ಜವಾಬ್ದಾರಿ ವಹಿಸಬೇಕು ಎಂದರು.
ಸರ್ದಾರ್ ವಲ್ಲಭಾಯಿ ಪಟೇಲರ ಎತ್ತರದ ಪ್ರತಿಮೆ ಭಾರತದ ಏಕತೆಯ ಸಂಕೇತ, ಅವರು ಗೃಹ ಮಂತ್ರಿಯಾಗದಿದ್ದರೆ ದೇಶ ಚಿದ್ರವಾಗುತ್ತಿತ್ತು. ಎಲ್ಲ ಸಂಸ್ಥಾನವನ್ನು ಒಗ್ಗೂಡಿಸಿ ಒಕ್ಕೂಟ ಭಾರತ ರಚನೆ ಮಾಡಿದಕ್ಕೆ ಭಾರತೀಯರು ಎಂದು ದೈರ್ಯವಾಗಿ ದೇಶಕ್ಕೆ ಗೌರವಿಸಲು ಸಾಧ್ಯವಾಯಿತು. ಧರ್ಮದ ರಕ್ಷಣೆಗೆ ಹೋದವರ ಬಗ್ಗೆ ಎತ್ತಿಹಿಡಿದವರ ಬಗ್ಗೆ ಕೊಂಕುಮಾತನಾಡುತ್ತಾರೆ ಅದು ಸರಿಯಲ್ಲ. ನಮ್ಮ ಧರ್ಮದವರು ಎಲ್ಲರನ್ನೂ ಪ್ರೀತಿಸಿ ಎನ್ನುತ್ತದೆ. ಎಲ್ಲರನ್ನು ಮನುಷ್ಯರಂತೆ ಕಂಡು, ಗೌರವಿಸುವುದು ನಮ್ಮ ಧರ್ಮದ ಹೆಗ್ಗುರುತು ಎಂದರು.
ಯುವಕರು ರಾಷ್ಟ್ರಕ್ಕಾಗಿ ದುಡಿಯುವಂತವರಾಗಬೇಕು. ಇದನ್ನು ಗ್ರಾಮದಿಂದ ಕಟ್ಟಬೇಕು, ಕುಟುಂಬ ಸಂಸ್ಕೃತಿ ಬೆಳೆಸಿ, ಕುಟುಂಬದಿಂದ ಸಮಾಜ, ಸಮಾಜದಿಂದ ಸಮಯುದಾಯ, ಹೆಣ್ಣು ಮಕ್ಕಳು, ರೈತರು ತಂದೆ, ತಾಯಿಯಂದಿರ ಬಗ್ಗೆ ಗೌರವ ಇರಲಿ ಎಂದರು.
ಪಟ್ಟನಾಯಕನಹಳ್ಳಿ ಸ್ಫಟಿಕಪುರಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ಮಾತನಾಡಿ, ದೇವಾಲಯಗಳು ಶಾಂತಿಯ ಸಂಕೇತ. ಗ್ರಾಮದಲ್ಲಿ ಐಕ್ಯತೆ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಲಿದ್ದು, ಇವುಗಳ ಸುಂದರವಾಗಿ ಮೂಡಿಬಂದಿದ್ದು, ಅದೇ ರೀತಿ ಗ್ರಾಮಸ್ಥರ ಭಾವನೆಗಳು ಮೂಡಿಬರಲಿ ಎಂದರು.
ಜೆಡಿಎಸ್ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಪ್ರಧಾನಿ ಮೋದಿ ಅವರು ದಶಕಗಳ ಕನಸಾಗಿದ್ದ ರಾಮ ಮಂದಿರ ನಿರ್ಮಿಸಿ ಎಲ್ಲರ ಭಕ್ತಿ, ಭಾವೈಕ್ಯತೆ ಎತ್ತಿಹಿಡಿದಿದ್ದಾರೆ. ಅದರಂತೆ ಗ್ರಾಮಸ್ಥರು ಸುಂದರವಾದ ಶ್ರೀರಾಮನ ಮೂರ್ತಿ ನಿರ್ಮಿಸಿ ಭಾವೈಕ್ಯತೆ ಮೂಡಿಸಿರುವುದು ಶ್ಲಾಘನೀಯ ಎಂದರು.
ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ, ಸಾಧುಮಾರನಹಳ್ಳಿ ಕಾಳಿ ಮಠದ ಶ್ರೀ ವಿಜಯ ಶಕ್ತಿ ಗುರೂಜಿ, ಆಂಕನಹಳ್ಳಿ ಮಠದ ಶ್ರೀ ಶಿವರುದ್ರ ಶಿವಾಚಾರ್ಯ ಸ್ವಾಮೀಜಿ, ಚಕ್ರಭಾವಿ ಜಂಗಮಮಠದ ಶ್ರೀ ಸಿದ್ದಲಿಂಗಸ್ವಾಮೀಜಿ, ಮಾಜಿ ಶಾಸಕ ಎ.ಮಂಜುನಾಥ್, ತಾಪಂ ಮಾಜಿ ಸದಸ್ಯೆ ರತ್ನಮ್ಮ ಶ್ರೀನಿವಾಸ್, ಶ್ರೀನಿವಾಸ್, ಟ್ರಸ್ಟ್ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಜಿ.ನಾರಾಯಣ, ನವೀನ್ ಪ್ರಸಾದ್, ಶ್ರೀಕಂಠಶಾಸ್ತ್ರಿ, ಮಂಜುನಾಥ್, ಅರುಣ್ ಕುಮಾರ್, ಪ್ರಶಾಂತ್, ಮಹೇಶ್, ಮಾರೇಗೌಡ, ಕುಳಯ್ಯ, ಬೆಟ್ಟಸಿಂಗರಯ್ಯ, ಜಯರಾಮು, ಲಕ್ಷ್ಮಿನರಸಿಂಹಯ್ಯ ಇತರರು ಇದ್ದರು.