

ಪಿರಿಯಾಪಟ್ಟಣ: ಗ್ರಾಮ ಆಡಳಿತ ಅಧಿಕಾರಿಗಳ ಮೂಲಭೂತ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಘಟಕದ ವತಿಯಿಂದ ಪಟ್ಟಣದ ತಾಲೂಕು ಕಚೇರಿಯ ಮುಂಭಾಗ ಸೋಮವಾರ ಎರಡನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಸಂಘದ ತಾಲೂಕು ಅಧ್ಯಕ್ಷ ನವೀನ್‌ರಾವ್ ಮಾತನಾಡಿ, ಈ ಹಿಂದೆ ಮುಷ್ಕರ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಇಟ್ಟಿದ್ದ ಗ್ರಾಮ ಆಡಳಿತ ಅಧಿಕಾರಿಗಳ ಯಾವುದೇ ಬೇಡಿಕೆಗಳನ್ನು ರಾಜ್ಯ ಸರ್ಕಾರವು ಇದುವರೆಗೂ ಈಡೇರಿಸದ ಕಾರಣ ರಾಜ್ಯ ವ್ಯಾಪ್ತಿ ಎರಡನೇ ಹಂತದ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದರು.
ನಮ್ಮ ಪ್ರಮುಖ ಬೇಡಿಕೆಗಳಾದ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಆದೇಶ ಹೊರಡಿಸಬೇಕು, ಅಧಿಕಾರಿಗಳಿಗೆ ಸುಸಜ್ಜಿತವಾದ ಕಚೇರಿ ಕಲ್ಪಿಸಬೇಕು, ಇತರ ಇಲಾಖೆಗಳಲ್ಲಿರುವಂತೆ ಕಂದಾಯ ಇಲಾಖೆಯಲ್ಲಿ ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು. ಕಂದಾಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಎಲ್ಲ ವೃಂದಗಳನ್ನು ಒಳಗೊಂಡಂತೆ ನೀಡುತ್ತಿರುವ ಅನುಕಂಪದ ನೇಮಕಾತಿ ಹುದ್ದೆಯ ತಿದ್ದುಪಡಿ ಮಾಡಬೇಕು. ಕ್ಷೇತ್ರ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವಾಗ ಜೀವ ಹಾನಿಯಾಗುವ ಗ್ರಾಮ ಆಡಳಿತ ಅಧಿಕಾರಿಗಳ ಕುಟುಂಬಕ್ಕೆ 50 ಲಕ್ಷ ರೂಗಳ ಪರಿಹಾರ ಮಂಜೂರು ಮಾಡಬೇಕು. ಪ್ರಯಾಣ ಭತ್ಯೆ ಮತ್ತು ಆಪತ್ತಿನ ಭತ್ಯೆಯನ್ನು ಹೆಚ್ಚಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಗಳಾಗಿದ್ದು ಅವುಗಳನ್ನು ಈಡೇರಿಸುವವರೆಗೂ ನಮ್ಮ ಮುಷ್ಕರ ನಿಲ್ಲದು ಎಂದರು.
ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಪ್ರದೀಪ್, ಉಪಾಧ್ಯಕ್ಷೆ ದೀಪಿಕಾ, ಗ್ರಾಮ ಆಡಳಿತ ಅಧಿಕಾರಿಗಳಾದ ಶಿವರಾಜ್, ಪವಿತ್ರಾ, ನಿರಂಜನ್, ಪ್ರಿಯಾಂಕಾ, ಭಾಗ್ಯಲಕ್ಷ್ಮೀ ಸೇರಿದಂತೆ ಇತರ ಗ್ರಾಮ ಆಡಳಿತ ಅಧಿಕಾರಿಗಳು ಭಾಗವಹಿಸಿದ್ದರು.