ಒಂದೇ ಕಡೆ ತಳವೂರಿದ ವಿಎಗಳು

VA_Deputation_01
Published on

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಜಿಲ್ಲೆಯ ಆಯಕಟ್ಟಿನ ಜಾಗದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು (ವಿಎ) ತಳವೂರಿರುವ ಹಿನ್ನೆಲೆಯಲ್ಲಿ ಕಂದಾಯ ಪಾವತಿ, ಖಾತೆ, ಪಿಂಚಣಿ, ಜನನ-ಮರಣ ಪ್ರಮಾಣ ಪತ್ರ, ಆದಾಯ ಪತ್ರ ಪಡೆಯಲು ಗ್ರಾಮೀಣಭಾಗದಲ್ಲಿ ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಾಲೂಕು ಕಚೇರಿ, ಭೂಮಿ ಕೇಂದ್ರ ಸೇರಿದಂತೆ ಮತ್ತಿತರರ ಆಯಕಟ್ಟಿನ ಜಾಗಗಳಲ್ಲಿ ಬೀಡುಬಿಟ್ಟಿರುವ ವಿಎಗಳು ಕಂದಾಯ ಇಲಾಖೆಯಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರದ ಮೂಲವಾಗಿದ್ದಾರೆ ಎನ್ನಲಾಗಿದೆ. ಜಿಲ್ಲೆಯ ಎಲ್ಲಾ 10 ತಾಲೂಕುಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳನ್ನು (ಗ್ರಾಮ ಲೆಕ್ಕಾಧಿಕಾರಿ) ನಿಯೋಜನೆ ಹೆಸರಲ್ಲಿ ಮೂಲಕರ್ತವ್ಯ ಸ್ಥಳದಿಂದ ಆಯಕಟ್ಟಿನ ಜಾಗಗಳಿಗೆ ಸ್ಥಳಾಂತರಿಸಿರುವುದು ಸಾರ್ವಜನಿಕ ಸಮಸ್ಯೆಗೆ ಕಾರಣವಾಗಿದೆ.

ಹೊಸ ಸಮಸ್ಯೆ ಸೃಷ್ಟಿ: ವಿಎಗಳ ನಿಯೋಜನೆಯೇ ದೊಡ್ಡ ದಂಧೆಯಾಗಿ ಮಾರ್ಪಟ್ಟಿದೆ. ಗ್ರಾಮ ಆಡಳಿತ ಅಧಿಕಾರಿಗಳು ಸಂಬಂಧಪಟ್ಟ ವೃತ್ತಗಳಲ್ಲಿ ಇಲ್ಲದಿರುವುದರಿಂದ ಕಂದಾಯ ಪಾವತಿಗೆ, ಖಾತೆ, ಜನನ-ಮರಣ ಪ್ರಮಾಣ, ಜಾತ್ರಿ, ಆದಾಯ ಪ್ರಮಾಣ ಪತ್ರ ಇನ್ನಿತರೆ ದಾಖಲಾತಿ ಪಡೆಯಲು ಪರುದಾಡುವಂತಾಗಿದೆ. ಸಣ್ಣಪುಟ್ಟ ಕೆಲಸಗಳಿಗು ಹಳ್ಳಿಗಳಿಂದ ವಿಎಗಳನ್ನು ಹುಡುಕುತ್ತಾ ತಾಲೂಕು ಕಚೇರಿಗೆ ಮತ್ತಿತರರ ಕಡೆ ಗ್ರಾಮೀಣಭಾಗದವರು ಪ್ರತಿನಿತ್ಯ ಅಲೆದಾಡುವಂತಾಗಿದೆ.

8-10 ವರ್ಷಗಳಿಂದ ಒಂದೇ ಕಡೆ ತಳವೂರಿರುವರನ್ನು ಏನೇ ಆರೋಪ, ದೂರುಗಳು ಕೇಳಿಬಂದರು ಯಾರೊಬ್ಬರು ಮುಟ್ಟುವಂತಿಲ್ಲ. ಎಲ್ಲ ರೀತಿಯಲ್ಲೂ ಸದೃಢರಾಗಿರುವ ವಿಎಗಳನ್ನು ನಿಯೋಜನೆಗೊಂಡಿರುವ ಸ್ಥಳದಿಂದ ಅಲುಗಾಡಿಸಲು ಆಗುತ್ತಿಲ್ಲ. ಒಂದುವೇಳೆ ವರ್ಗಾವಣೆ ಆದರೂ ಅಕ್ಕಪಕ್ಕದ ಆಯಕಟ್ಟಿನ ಸ್ಥಳಗಳಲ್ಲೇ ಗಿರಕಿ ಹೊಡೆಯುತ್ತಿರುತ್ತಾರೆ. ಪ್ರಭಾವಿಗಳು, ಭ್ರಷ್ಟರಿಗೆ ಯಾವುದೇ ಕಾರಣಕ್ಕೂ ಮೇಲಧಿಕಾರಿಗಳು ಬಿಸಿಮುಟ್ಟಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಭ್ರಷ್ಟಾಚಾರದ ಕೂಪವಾಗಿ ಕಂದಾಯ ಇಲಾಖೆ ಮಾರ್ಪಾಡಾಗಿಬಿಟ್ಟಿದೆ.

ಕಾನೂನುಬಾಹಿರ ಹುದ್ದೆ ಬಡ್ತಿ?!: ಗ್ರಾಮ ಆಡಳಿತ ಅಧಿಕಾರಿಗಳಿಗೆ ಸರ್ಕಾರದ ಆದೇಶವೇ ಇಲ್ಲದಿದ್ದರೂ ಕಾನೂನು ಬಾಹಿರವಾಗಿ ಕಂದಾಯ ನಿರೀಕ್ಷಕ ಹುದ್ದೆಗೆ ಬಡ್ತಿ ನೀಡುತ್ತಿರುವುದು ಕಂಡುಬಂದಿದೆ. ಇದು ಸಾಕಷ್ಟು ಅಕ್ರಮಗಳಿಗೆ ದಾರಿ ಮಾಡಿಕೊಟ್ಟಿದೆ. ಈಗಾಗಲೇ ಇಂತಹ ಬಡ್ತಿ ಪಡೆದಿರುವ ಪ್ರಕ್ರಿಯೆ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವು ಸಹ ಕೇಳಿಬಂದಿದೆ.

ಸಚಿವರಿಗೂ ದೂರು ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೂ ಮೂಲಕರ್ತವ್ಯ ಸ್ಥಳದಿಂದ ಆಯಕಟ್ಟಿನ ಜಾಗಗಳಲ್ಲಿ ನಿಯೋಜನೆಗೊಂಡಿರುವ ಗ್ರಾಮ ಆಡಳಿತ ಅಧಿಕಾರಿಗಳ ನಿಯೋಜನೆ ಆದೇಶ ರದ್ದು ಪಡಿಸುವಂತೆ ಹಾಗೂ ಒಂದೇ ಕಡೆ ಬೇರುಬಿಟ್ಟಿರುವ ವಿಎಗಳನ್ನು ವರ್ಗಾವಣೆ ಮಾಡುವಂತೆ ಸಾಮಾಜಿಕ ಕಾರ್ಯಕರ್ತ ಬೆಳಗುಂಬ ವೆಂಕಟೇಶ್ ದೂರು ನೀಡಿದ್ದಾರೆ. ಪ್ರಾದೇಶಿಕ ಆಯುಕ್ತರಿಗೂ ದೂರು ನೀಡಿದ್ದು ಈ ಪತ್ರದ ಹಿನ್ನೆಲೆಯಲ್ಲಿ ಅಪರ ಪ್ರಾದೇಶಿಕ ಆಯುಕ್ತರು ಈ ಸಂಬಂಧ ಸೂಕ್ತವಾಗಿ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಬೇರು ಅಲುಗಾಡಿಸಲು ಸೂಕ್ತ ಸಮಯ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಇನ್ನಾದರೂ ಒಂದೇ ಕಡೆ ತಳವೂರಿರುವ ಗ್ರಾಮ ಆಡಳಿತ ಅಧಿಕಾರಿಗಳು, ಕಂದಾಯ ನಿರೀಕ್ಷಕರನ್ನೂ ವರ್ಗಾವಣೆ ಮಾಡಬೇಕೆಂಬ ಕೂಗು ಸಾರ್ವಜನಿಕವಲಯದಲ್ಲಿ ಎದ್ದಿದೆ. ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರಿಗೆ ಒಂದೆಡೆ ಬೇರುಬಿಟ್ಟಿರುವರನ್ನು ವರ್ಗಾವಣೆ ಮಾಡುವ ಅಧಿಕಾರವಿದ್ದು ಸೂಕ್ತ ಕ್ರಮಕೈಗೊಳ್ಳುವ ನಿರೀಕ್ಷೆ ಇದೆ. ಗ್ರಾಮ ಆಡಳಿತ ಅಧಿಕಾರಿಗಳು ಹೆಸರಿಗಷ್ಟೇ. ಒಂದು ದಿನವೂ ಹಳ್ಳಿಗಳಲ್ಲಿ ಕಾಣುವುದಿಲ್ಲ. ಡಿಸಿ, ಎಸಿ, ತಾಲೂಕು ಕಚೇರಿಗಳ ಆಯಕಟ್ಟಿನ ಸ್ಥಳಗಳಿಗೆ ವಿಎಗಳನ್ನು ನಿಯೋಜಿಸಿರುವುದರಿಂದ ಸಣ್ಣಪುಟ್ಟ ದಾಖಲೆಗಳಿಗೂ ಅವರನ್ನು ಹುಡುಕಿಕೊಂಡು ಓಡಾಡುವಂತಾಗಿದೆ. ಕೆಲವರಿಗೆ 2-3 ಸರ್ಕಲ್‌ಗಳನ್ನು ನೀಡಿದ್ದು ಜನನ-ಮರಣ, ಜಾತಿ, ಆದಾಯ ಪ್ರಮಾಣ ಪತ್ರ ಪಡೆಯಲಿಕ್ಕೂ ಪರದಾಡುವಂತಾಗಿದೆ. ಬೆಳಗುಂಬ ವೆಂಕಟೇಶ್ ಸಾಮಾಜಿಕ ಕಾರ್ಯಕರ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net