

ಶ್ರೀರಂಗಪಟ್ಟಣ: ತಾಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಬುಧವಾರ ರಾತ್ರಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಕಾರಣ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಗ್ರಾಮದ ಸಮೀಪದಲ್ಲೇ ರಾಜಕೀಯ ಮುಖಂಡ ಲಾರಿ ರೇವಣ್ಣ ಅವರಿಗೆ ಸೇರಿದ ಕ್ರಷರ್ ಘಟಕವಿದ್ದು ಬೆಳಗ್ಗೆ-ರಾತ್ರಿ ಎನ್ನದೆ ಘಟಕವನ್ನು ನಿರಂತರವಾಗಿ ನಡೆಸುವ ಕಾರಣ ಕಲ್ಲಿನ ಪುಡಿಗಳಿಂದ ಅಪಾರ ಪ್ರಮಾಣದ ಧೂಳು ಹೊರಬೀಳುವ ಜತೆಗೆ ರಾತ್ರಿಯ ವೇಳೆ ಉಂಟಾಗುವ ಶಬ್ಧ ಹಾಗೂ ಟಿಪ್ಪರ್ ಲಾರಿಗಳ ಸಂಚಾರದಿಂದ ರೋಸಿಹೋದ ಗ್ರಾಮಸ್ಥರು ಬುಧವಾರ ರಾತ್ರಿ ಗ್ರಾಮದಲ್ಲಿ ಟಿಪ್ಪರ್ ಲಾರಿಗಳನ್ನು ತಡೆದರು. ಚಾಲನೆಯಲ್ಲಿದ್ದ ಕ್ರಷರ್ ಘಟಕಗಳನ್ನು ಸ್ಥಗಿತಗೊಳಿಸಿ ಭೂ ಮತ್ತು ಗಣಿ ವಿಜ್ಞಾನ ಇಲಾಖೆ, ಅರಣ್ಯ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ದೌಡಾಯಿಸಿದರು. ಈ ವೇಳೆ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆದು ಗಣಿ ಅಕ್ರಮಗಳಿಗೆ ಕಡಿವಾಣ ಹಾಕುವಂತೆ ಗ್ರಾಮಸ್ಥರು ಆಗ್ರಹಿಸಿದರು.
ಟಿ.ಎಂ.ಹೊಸೂರು ಗ್ರಾಮ ಪಂಚಾಯಿತಿ ಸದಸ್ಯ ಶಿವಸ್ವಾಮಿ ಮಾತನಾಡಿ, ಗ್ರಾಮ ವ್ಯಾಪ್ತಿಯಲ್ಲಿ 15ಕ್ಕೂ ಹೆಚ್ಚು ಕ್ರಷರ್ ಘಟಕಗಳು ಚಾಲ್ತಿಯಲ್ಲಿವೆ. ಇದರಲ್ಲಿ 4 ಘಟಕಗಳಿಗೆ ಪರವಾನಿಗೆ ಇಲ್ಲ. ಅರಣ್ಯ ಇಲಾಖೆಗೆ ಸೇರಿದ ಭೂಮಿಯಲ್ಲಿ ಕೆಲ ಪ್ರಭಾವಿಗಳು ಅಕ್ರಮ ಕಲ್ಲಿನ ಕ್ವಾರೆ ನಡೆಸುವ ಜತೆಗೆ ಕಾನೂನು ನಿಯಮ ಉಲ್ಲಂಘಿಸಿ ರಿಗ್‌ಬೋರ್ ಮಾಡಿಸುವ ಜತೆಗೆ ರಾತ್ರಿವೇಳೆ ಭಾರಿ ಸ್ಫೋಟ ಮಾಡುತ್ತಿದ್ದಾರೆ. ರಸ್ತೆಗಳನ್ನು ಹಾಳು ಮಾಡುವುದಲ್ಲದೆ ಗ್ರಾಮಸ್ಥರಿಗೆ ನೆಮ್ಮದಿ ಇಲ್ಲದಂತಾಗಿದೆ ಎಂದು ದೂರಿದರು.
ರೈತ ಮುಖಂಡ ರಮೇಶ್ ಮಾತನಾಡಿ, ಗ್ರಾಮದ ಹಲವು ಮನೆಗಳು ಹಾಗೂ ಸರ್ಕಾರಿ ಶಾಲೆಗಳ ಕಟ್ಟಡಗಳು ಬಿರುಕು ಬಿಟ್ಟು ಸಾಕಷ್ಟು ಹಾನಿಗೊಂಡಿವೆ. ಕ್ರಷರ್ ಘಟಕಗಳ ಧೂಳು ಶಾಲೆಗೂ ವ್ಯಾಪಿಸುವ ಕಾರಣ ವಿದ್ಯಾರ್ಥಿಗಳು, ಗ್ರಾಮಸ್ಥರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಕಲ್ಲಿನ ಪುಡಿಗಳ ಧೂಳಿನಿಂದ ಬೆಳೆಗಳು ಹಾನಿಗೊಂಡಿವೆ. ಇಷ್ಟು ಸಮಸ್ಯೆ ಇದ್ದರೂ ಅರಣ್ಯ, ಗಣಿ, ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಪ್ರಭಾವಿಗಳು ನೀಡುವ ಲಂಚದ ಆಮಿಷ, ರಾಜಕೀಯ ಪ್ರಭಾವಕ್ಕೆ ಮಣಿದಿದ್ದಾರೆ. ಸರ್ಕಾರ ತಕ್ಷಣ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಿ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.
ಗ್ರಾಮಸ್ಥರಾದ ಮುರಳಿ, ಮಹೇಶ್, ಪ್ರಮೋದ್, ಸಂತೋಷ್, ಕಿರಣ್, ಅಭಿ , ಪ್ರಶಾಂತ್, ನವೀನ್ ಇತರರಿದ್ದರು.