ಕಾರವಾರ ಸೇರಿದ ವಿಕ್ರಾಂತ ನೌಕೆ

Ins vikrant
Published on

ಕಾರವಾರ : ಇಲ್ಲಿನ ಕದಂಬ ನೌಕಾನೆಲೆ ಭಾರತೀಯ ನೌಕಾಸೇನೆಯ ಪ್ರಮುಖ ಕಾರ್ಯಾಚರಣೆಯ ಕೇಂದ್ರವಾಗಿ ಮಾರ್ಪಡುತ್ತಿದೆ. ಎರಡು ವರ್ಷ ಪೂರ್ವ ಕರಾವಳಿಯಲ್ಲಿದ್ದ ನೌಕಾಸೇನೆಯ ದೈತ್ಯ ಯುದ್ಧ ಹಡಗು ಐಎನ್‌ಎಸ್ ವಿಕ್ರಾಂತ್ ಕೂಡ ಕಾರವಾರ ಕೇಂದ್ರಿತವಾಗಿದೆ.
ಭಾರತೀಯ ನೌಕಾಸೇನೆಯ ಪಶ್ಚಿಮ ವಿಭಾಗ ತನ್ನ ಎಕ್ಸ್ ಖಾತೆಯಲ್ಲಿ ಇದನ್ನು ತಿಳಿಸಿದೆ. ಐಎನ್‌ಎಸ್ ವಿಕ್ರಾಂತ ಶುಕ್ರವಾರ ಕಾರವಾರ ತಲುಪಿದ್ದು, ಶನಿವಾರ ಅರಬ್ಬಿ ಸಮುದ್ರದಲ್ಲಿ ಕಾರ್ಯಾಚರಣೆ ಆರಂಭಿಸಿದೆ. ಯುದ್ಧ ವಿಮಾನ ವಾಹಕ ದೈತ್ಯ ನೌಕೆ ಐಎನ್‌ಎಸ್ ವಿಕ್ರಮಾದಿತ್ಯ ನೇತೃತ್ವದ `ಸ್ವರ್ಡ್ ಆರ್ಮ್' ಗ್ರೂಪ್‌ನ್ನು ವಿಕ್ರಾಂತ ಸೇರಿದೆ ಎಂದು ವಿವರಿಸಲಾಗಿದೆ.
ರಷ್ಯಾದಿಂದ ಖರೀದಿಸಿರುವ ಭಾರತದ ಮೊದಲ ಯುದ್ಧ ವಿಮಾನ ವಾಹಕ ನೌಕೆ ಐಎನ್‌ಎಸ್ ವಿಕ್ರಮಾದಿತ್ಯ 2013 ರಿಂದಲೂ ಕಾರವಾರದಿಂದ ಕಾರ್ಯಾಚರಣೆ ನಡೆಸುತ್ತಿದೆ. 2022 ರಲ್ಲಿ ಭಾರತೀಯ ನೌಕಾಸೇನೆಗೆ ಸಮರ್ಪಣೆಗೊಂಡಿರುವ ವಿಕ್ರಾಂತ ನೌಕೆ ಸಂಪೂರ್ಣ ಭಾರತೀಯ ತಂತ್ರಜ್ಞಾನದಿಂದ ಕೊಚ್ಚಿ ಶಿಪ್ ಯಾರ್ಡ್ನನಲ್ಲಿ ತಯಾರಿಸಿರುವುದಾಗಿದೆ

ಸದ್ಯ ಎರಡೂ ಯುದ್ಧ ವಿಮಾನ ವಾಹನ ನೌಕೆಗಳ ಮಿಗ್ 29ಕೆ ಯುದ್ಧ ವಿಮಾನಗಳು ಕಾರ್ಯಾಚರಿಸುತ್ತಿವೆ. ರಫೆಲ್ ಯುದ್ಧ ವಿಮಾನಗಳನ್ನು ನೌಕೆಯಲ್ಲಿ ಇಳಿಸಲು ಸಿದ್ಧತೆ ನಡೆಸಲಾಗುತ್ತಿದೆ. ಈಗ ಎರಡೂ ಯುದ್ಧ ನೌಕೆಗಳು ಒಂದೇ ಕಡೆ ಕಾರ್ಯಾಚರಿಸುತ್ತಿರುವುದು ಅರಬ್ಬಿ ಸಮುದ್ರದ ನೌಕಾ ರಕ್ಷಣಾ ಕಾರ್ಯದ ಕ್ಷಮತೆ ಹೆಚ್ಚಿದೆ ಎಂದು ನೌಕಾಸೇನೆ ಹೇಳಿಕೊಂಡಿದೆ.
ಅರಬ್ಬಿ ಸಮುದ್ರದಲ್ಲಿ ಕಾರ್ಯ:
ಐಎನ್‌ಎಸ್ ವಿಕ್ರಾಂತ ಈಗಷ್ಟೇ ಕೆಲ ತಿಂಗಳು ದುರಸ್ತಿಗೊಂಡು ಸಮುದ್ರಕ್ಕೆ ಇಳಿದಿದೆ. ಐಎನ್‌ಎಸ್ ವಿಕ್ರಮಾದಿತ್ಯ ನೌಕೆ ಸದ್ಯದಲ್ಲೇ ಕಾರ್ಯಾಚರಣೆಗೆ ಇಳಿಯುವ ಸಾಧ್ಯತೆ ಇದೆ. ವಿಕ್ರಮಾದಿತ್ಯ ನೌಕೆಯು ಏಕ ಕಾಲದಲ್ಲಿ ತನ್ನ ಮೇಲೆ 25 ಕ್ಕೂ ಹೆಚ್ಚು ಯುದ್ಧ ವಿಮಾನ, ಹೆಲಿಕಾಫ್ಟರ್‌ಗಳನ್ನು ಹೊತ್ತೊಯ್ಯಬಲ್ಲದು. ವಿಕ್ರಾಂತ ನೌಕೆಯ ಮೇಲೆ 12 ಯುದ್ಧ ವಿಮಾನಗಳು ಹಾಗೂ 6 ಹೆಲಿಕಾಫ್ಟರ್‌ಗಳನ್ನು ನಿಲ್ಲಿಸಬಹುದು. ಎರಡೂ ನೌಕೆಯ ಮೇಲಿರುವ ಡೆಕ್ ಮೇಲೆ ಯುದ್ಧ ವಿಮಾನಗಳನ್ನು ನಿಯಂತ್ರಿತ ವಿಧಾನದಲ್ಲಿ (ಅರೆಸ್ಟೆಡ್ ಲ್ಯಾಂಡಿಂಗ್) ಹಾಗೂ ಹಾರಿಸುವ (ಟೇಕಾಪ್) ವ್ಯವಸ್ಥೆ ಇದೆ. ಈ ನೌಕೆಗಳನ್ನು ತೇಲುವ ನಗರ ಎಂದೇ ಕರೆಯಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net