ಪಾಳು ಬಿದ್ದಿದೆ ಸೋಂದಾ ಕೋಟೆ

SIRSI STORY
Published on

ವಿಜಯವಾಣಿ ವಿಶೇಷ ಶಿರಸಿ
ವಿಜಯನಗರ ಸಾಮ್ರಾಜ್ಯದ ಸಾಮಂತ ದೊರೆ ಸದಾಶಿವರಾಯ ನಿರ್ಮಿಸಿದ ಸೋಂದಾ ಕೋಟೆ ಜೀರ್ಣಾವಸ್ಥೆಯಲ್ಲಿದೆ. ಐತಿಹಾಸಿಕ ಮಹತ್ವವನ್ನು ಮುಂದಿನ ಜನಾಂಗಕ್ಕೆ ತಲುಪಿಸಲು ಈ ಕೋಟೆಯ ಸ್ಮಾರಕಗಳನ್ನು ರಕ್ಷಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

ಇಲ್ಲಿಯ ಸೋಂದಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೋಟೆ ಸುಮಾರು 24 ಎಕರೆ ಪ್ರದೇಶ ವ್ಯಾಪ್ತಿಯನ್ನು ಒಳಗೊಂಡಿದೆ. ಸೋದೆ ಅರಸು ಮನೆತನದ ಪ್ರಮುಖ ಕೇಂದ್ರವಾಗಿದ್ದ ಈ ಕೋಟೆಯನ್ನು ಕ್ರಿ.ಶ.1542ರಲ್ಲಿ ನಿರ್ಮಿಸಲಾಗಿದೆ ಎನ್ನಲಾಗಿದೆ. ಸೋದೆ ಸುಂಕೇರಿಯಿಂದ ಕಾರವಾರಕ್ಕೆ ಮುತ್ತಿಗೆ ಹಾಕಲು ಬಂದ ಬ್ರಿಟಿಷರನ್ನು ಸೋಲಿಸಿದ ಮಹಾನ್ ಪರಾಕ್ರಮಿ ಎಂದೇ ಸದಾಶಿವರಾಯ ಖ್ಯಾತಿ ಪಡೆದಿದ್ದಾರೆ. ಇಂಥ ಐತಿಹಾಸಿಕ ಪುರುಷರು ಶಾಲ್ಮಲಾ ನದಿಯ ದಡದಲ್ಲಿ ನಿರ್ಮಿಸಿದ್ದ ಕೋಟೆಯಲ್ಲಿ ಈಗಲೂ ರಾಜಮನೆತನದ ಅವಶೇಷಗಳಾದ ಸಣ್ಣ ದೇವಾಲಯ, ಕೆಲವು ಫಿರಂಗಿಗಳು ಮತ್ತು ಅಲಂಕರಿಸಲ್ಪಟ್ಟ ಒಂದು ಕಲ್ಲಿನ ಮಂಚವನ್ನು ಸಂರಕ್ಷಿಸಲಾಗಿದೆ. ಉಳಿದಂತೆ ಇಡೀ ಕೋಟೆ ಆವರಣ ಕಾಡಿನಂತೆ ಭಾಸವಾಗುತ್ತಿದ್ದು, ನೂರಾರು ಸ್ಮಾರಕಗಳು ರಕ್ಷಣೆಯಿಲ್ಲದೆ ಸೊರಗಿವೆ.

ಸೋಂದಾ ಕೋಟೆ ಮಹತ್ವ ಅರಿತ ಅರಣ್ಯ ಇಲಾಖೆ ಬ್ರಿಟಿಷ್ ಸರ್ಕಾರ ಅವಧಿಯಾದ 1906ರಲ್ಲಿ ಈ ಸ್ಥಳವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಿದೆ. 1941ರಲ್ಲಿ ಪ್ರಾಚ್ಯವಸ್ತು ಇಲಾಖೆ ವ್ಯಾಪ್ತಿಗೆ ಸೋಂದಾ ಕೋಟೆ ಸೇರಿಸಲಾಗಿದೆ. ಆದರೆ, ಕೋಟೆಯ ಸಂರಕ್ಷಣೆಯ ಬಗ್ಗೆ ಕೈಗೊಂಡ ಕ್ರಮಗಳು ಮಾತ್ರ ಅತಿ ಕಡಿಮೆ. ಇಲ್ಲಿಯ ಜಾಗೃತ ವೇದಿಕೆ 1999ರಲ್ಲಿ ಸರ್ಕಾರಕ್ಕೆ ಈ ಕೋಟೆ ಸಂರಕ್ಷಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಪ್ರಾಚ್ಯವಸ್ತು ಇಲಾಖೆ ಇಲ್ಲಿಯ ಈಶ್ವರ ಗುಡಿ ಹಾಗೂ ಕೆಲ ಸ್ಮಾರಕಗಳಿಗೆ ರಕ್ಷಣೆ ಒದಗಿಸಿದೆ. ಆದರೆ, ಆ ಬಳಿಕ ಯಾವುದೇ ರೀತಿಯ ಸಂರಕ್ಷಣಾ ಯತ್ನವಾಗಿಲ್ಲ.

ಅವಸಾನದತ್ತ ಅವಶೇಷಗಳು

ಕೋಟೆಯ ಕಲ್ಲು ಗೋಡೆಗಳೆಲ್ಲ ಮಣ್ಣಿನಡಿ ಸಿಲುಕಿವೆ. ಅವಶೇಷಗಳ ಸುತ್ತೆಲ್ಲ ಜೀಡು, ಕಾಡು ಬೆಳೆದಿವೆ. ಕಲ್ಲಿನ ದೋಣಿಗಳು, ಎರಡು ಫಿರಂಗಿಗಳು, ವೀರಗಲ್ಲುಗಳು, ರಾಣಿಯರ ಸ್ನಾನ ಗೃಹ, ದೇವರ ಸ್ಥಳ, ಕುದುರೆ ಲಾಯ, ನಕ್ಷತ್ರ ಬಾವಿ, ರಾಟಾಳ ಬಾವಿ, ರಾಜರಕಾಲದ ಗೋಪುರ, ಅಡುಗೆ ಮನೆ ಯ ಸೇರಿ ಹಲವು ಸ್ಮಾರಕಗಳು ಅಲ್ಲಲ್ಲಿ ಬಿದ್ದು, ಮೂಲ ಸ್ವರೂಪ ಕಳೆದುಕೊಳ್ಳುತ್ತಿವೆ. ಕೋಟೆ ಆವರಣದಲ್ಲಿರುವ ಶಿವಮಂದಿರ ಜೀರ್ಣಗೊಳ್ಳುತ್ತಿದೆ. ಕೋಟೆಯ ಒಂದು ಭಾಗದಲ್ಲಿ ಶಾಲ್ಮಲಾ ನದಿ ಮತ್ತು ತುಡುಗುಣಿ ಹೊಳೆ ಸಂಗಮದ ಬಳಿ ನಿರ್ಮಿಸಿರುವ ಪಿಚ್ಚಿಂಗ್ ಕುಸಿಯುತ್ತಿದೆ.

ಕೋಟೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಅವಕಾಶವಿತ್ತು. ಸ್ಥಳೀಯರಿಗೆ ಆದಾಯದ ಜತೆಗೆ ಹೆಮ್ಮೆಯ ರಾಜರ ಬಗ್ಗೆ ಹೊರಗಿನವರಿಗೂ ತಿಳಿಸಿಕೊಡುವ ಮಾದರಿಯಲ್ಲಿ ಈ ಸ್ಥಳವನ್ನು ಅಭಿವೃದ್ಧಿಪಡಿಸಬಹುದಾಗಿತ್ತು. ಆದರೆ, ಪ್ರಾಚ್ಯವಸ್ತು ಇಲಾಖೆ ಈ ಬಗ್ಗೆ ಗಮನ ಹರಿಸಿಲ್ಲ ಎಂದು ಸ್ಥಳೀಯರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಸ್ಮಾರಕಗಳು ಎಲ್ಲಿವೆಯೋ ಅಲ್ಲಿಯೇ ಕಟ್ಟೆ, ಶೆಡ್ ನಿರ್ಮಿಸಿ ರಕ್ಷಿಸುವ ಕೆಲಸ ಆಗಬೇಕು. ಇವುಗಳ ವೀಕ್ಷಣೆಗೆ ಪೂರಕ ಫುಟ್ ಪಾತ್ ನಿರ್ಮಿಸಬೇಕು. ಮಾರ್ಗಸೂಚಿ ಫಲಕಗಳನ್ನು ಅಳವಡಿಸಬೇಕು. ಕಾಯಂ ಕಾವಲುಗಾರರನ್ನು ನೇಮಿಸಬೇಕು. ಕೋಟೆ ಬಗ್ಗೆ ಪ್ರವಾಸಿಗರಿಗೆ ಸೂಕ್ತ ಮಾಹಿತಿ ನೀಡಲು ಗೈಡ್ ನೇಮಿಸಬೇಕು. ಜತೆಗೆ ವಿಶ್ರಾಂತಿ, ಶೌಚಗೃಹ ನಿರ್ಮಿಸಬೇಕು. ಶಾಲ್ಮಲಾ ನದಿ ಪಕ್ಕದಲ್ಲಿ ನೇರವಾಗಿ ಕೋಟೆಗೆ ಹೋಗುವ ರಸ್ತೆಗೆ ಸಂಪರ್ಕಿಸಲು ತೂಗು ಸೇತುವೆ ನಿರ್ಮಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಸೋಂದಾ ಕೋಟೆಯ ಬಗ್ಗೆ ಸೂಕ್ತ ಅಧ್ಯಯನ ನಡೆಸಬೇಕಲ್ಲದೆ, ಕೋಟೆ ಜಾಗದಲ್ಲಿ ಪರಿಸರ ಪ್ರವಾಸೋದ್ಯಮ ಯೋಜನೆ ಜಾರಿ ಮಾಡಬೇಕು. ಕೋಟೆಯನ್ನು ಜೀವ ವೈವಿಧ್ಯ ಪಾರಂಪರಿಕ ತಾಣವಾಗಿ ಘೋಷಿಸಬೇಕು.

ರತ್ನಾಕರ ಹೆಗಡೆ ಬಾಡಲಕೊಪ್ಪ, ಜಾಗೃತ ವೇದಿಕೆ, ಸ್ವರ್ಣವಲ್ಲೀ ಸಂಸ್ಥಾನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net