

ಚನ್ನರಾಯಪಟ್ಟಣ: ಗ್ರಾಮದೇವತೆ ವಳಗೇರಮ್ಮ ದೇವಿಯ ಮಹಾರಥೋತ್ಸವ ಗುರುವಾರ ನರಕ ಚತುರ್ದಶಿಯಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಪಟ್ಟಣದಲ ಅಮಾನಿಕೆರೆ ಮುಂಭಾಗದಲ್ಲಿರುವ ವಳಗೇರಮ್ಮ ದೇವಾಲಯದಲ್ಲಿ ಬೆಳಗ್ಗಿನಿಂದಲೇ ಅಮ್ಮನವರಿಗೆ ಅಭಿಷೇಕ, ಅಲಂಕಾರ, ವಿಶೇಷ ಪೂಜೆಗಳು ಸಂಪನ್ನಗೊಂಡ ನಂತರ ಲಲಿತಾ ಸಹಸ್ರನಾಮ ಪಾರಾಯಣ ಹಾಗೂ ಮಹಾಮಂಗಳಾರತಿ ನಡೆಯಿತು. ಉತ್ಸವಮೂರ್ತಿಯ ಅಡ್ಡೆ ಉತ್ಸವ ನಡೆಸಿ ಅಲಂಕೃತ ರಥದ ಸಮೀಪ ಕರೆತರಲಾಯಿತು. ರಥಕ್ಕೆ ಪ್ರದಕ್ಷಿಣೆ ನಂತರ ಮೂರ್ತಿಯನ್ನು ರಥದಲ್ಲಿ ಕೂರಿಸಿ ದೇವಿಯನ್ನು ಪ್ರತಿಷ್ಠಾಪಿಸಲಾಯಿತು. ಬಾಳೆಕಂದು ಕಡಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಜಯ ಘೋಷಣೆ ಮೊಳಗಿಸುತ್ತ ಭಕ್ತರು ತೇರನ್ನು ಎಳೆದರು.
ರಥ ಸಾಗುವ ರಸ್ತೆಯನ್ನು ತಳಿರು ತೋರಣದಿಂದ ಸಿಂಗರಿಸಲಾಗಿತ್ತು. ರಂಗೋಲಿ ಇಟ್ಟು ಬರಮಾಡಿಕೊಳ್ಳಲಾಯಿತು. ಭಕ್ತರು ಹೂವು, ಕಾಯಿ, ಹಣ್ಣು ಅರ್ಪಿಸಿ ಭಕ್ತಿಯಿಂದ ನಮಿಸಿದರು.
ವಾದ್ಯದ ನಾದ ಮತ್ತು ಸೋಮನ ಕುಣಿತದೊಂದಿಗೆ ಮೆರವಣಿಗೆ ದೇವಸ್ಥಾನದ ಆವರಣಕ್ಕೆ ಸಾಗಿತು. ಪಟ್ಟಣದ ಸುತ್ತಲಿನ ಗ್ರಾಮಗಳಲ್ಲಿ ರೈತರು ಬೆಳೆದ ದವಸ, ಧಾನ್ಯವನ್ನು ಎತ್ತಿನಗಾಡಿ, ಎತ್ತುಗಳಿಗೆ ಸಿಂಗರಿಸಿ ಗೂರಮಾರನಹಳ್ಳಿ, ಗುಂಡಶೆಟ್ಟಿಹಳ್ಳಿ, ಗಾಣಿಗರ ಬೀದಿ, ತಗ್ಯಮ್ಮಬಡಾವಣೆ, ಬೆಲಸಿಂದ, ಕೆರೆಚಿಕ್ಕೇನಹಳ್ಳಿ, ಡಿ. ಕಾಳೇನಹಳ್ಳಿ ಮತ್ತು ಗೂರನಹಳ್ಳಿ ಬಡಾವಣೆಯಿಂದ ಹಸಿರು ಬಂಡಿಗಳು ಆಗಮಿಸಿದವು.
ಹರಕೆ ಹೊತ್ತ ಮಹಿಳೆಯರು ಬಾಯಿಬೀಗ ಧರಿಸಿ ದೇವರ ದರ್ಶನ ಪಡೆದರು. ರಥ ಮತ್ತು ಹಸಿರು ಬಂಡಿಗಳು ದೇವಸ್ಥಾನದ ಸುತ್ತ ಮೂರು ಪ್ರದಕ್ಷಿಣೆ ಹಾಕಿದ ಬಳಿಕ ದೇವರ ಉಯ್ಯಲೋತ್ಸವ, ಕೆಂಡೋತ್ಸವ ಹಾಗೂ ಸಿಡಿ ಉತ್ಸವ ಜರುಗಿತು. ಉತ್ಸವಕ್ಕೆ ಸಾವಿರರು ಭಕ್ತರು ಸಾಕ್ಷಿಯಾದರು. ಶುಕ್ರವಾರ ಚಂದ್ರಮಂಡಲೋತ್ಸವ ಮತ್ತು ದೀಪಾವಳಿ ಹಬ್ಬದಂದು ದೇವರ ಉತ್ಸವ ಜರುಗಲಿದೆ.
ವೀರಭದ್ರಸ್ವಾಮಿ, ವಳಗೇರಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ವೀರಭದ್ರೇಶ್ವರ ಬಡಾವಣೆಯಲ್ಲಿ ವೀರಭದ್ರಸ್ವಾಮಿ, ಭದ್ರಕಾಳಮ್ಮ, ಗೊಬ್ಬಳಯ್ಯ ದೇವರ ಉತ್ಸವ ಗುರುವಾರ ಇಡೀ ರಾತ್ರಿ ಜರುಗಿತು. ಸಂಗೀತ ರಸಸಂಜೆ ಕಾರ್ಯಕ್ರಮವನ್ನು ಮೈಸೂರಿನ ಪೊಲೀಸ್ ಮಂಜು ಮತ್ತು ಪಟ್ಟಣದ ಸಿ.ಜಿ. ಸೋಮಶೇಖರ್ ಮತ್ತು ಕಲಾವಿದರು ನಡೆಸಿಕೊಟ್ಟರು.