

ತುಮಕೂರು: ಬಿ.ಎಸ್.ಯಡಿಯೂರಪ್ಪ ಇವತ್ತು ಮುಖ್ಯಮಂತ್ರಿ ಅಲ್ಲ, ಪಕ್ಷದ ಅಧ್ಯಕ್ಷರೂ ಅಲ್ಲ. ಆದರೂ ಪಕ್ಷವನ್ನು ಅಧಿಕಾರಕ್ಕೆ ಮರಳಿ ತರಲು ರಾಜ್ಯ ಸುತ್ತುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಗುಬ್ಬಿ ಪಟ್ಟಣದಲ್ಲಿ ಮಂಗಳವಾರ ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇವಲ ನಗರಕ್ಕೆ ಸೀಮಿತವಾಗಿದ್ದ ಬಿಜೆಪಿ ಪಕ್ಷವನ್ನ ಗ್ರಾಮೀಣ ಭಾಗಕ್ಕೂ ಮುಟ್ಟಿಸಿದ ಕೀರ್ತಿ ಯಡಿಯೂರಪ್ಪ ಅವರದ್ದು, ಅವರು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವವರೆಗೆ ವಿಶ್ರಮಿಸುವುದಿಲ್ಲ ಎಂದರು.
ಬಿಎಸ್‌ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಕೂಡಲೇ ಮನೆಗೆ ಹೋಗಿ ಮಲಗಿಬಿಡ್ತಾರೆ ಎಂದು ವಿರೋಧ ಪಕ್ಷಗಳು ಅಂದುಕೊಂಡಿದ್ದರು. ಆದರೆ, ಬಿಎಸ್‌ವೈ ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಹೋರಾಟ ಮಾಡ್ತೀನಿ ಅಂದರು, ಇವತ್ತು ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ವಾತಾವರಣವಿದೆ ಎಂದರು.
ರಾಜ್ಯದಲ್ಲಿ ಹಿಂದೆ ಯಾವತ್ತೂ ಬಿಜೆಪಿ ಗೆದ್ದಿರದ ಮತ್ತು ಈ ಚುನಾವಣೆಯಲ್ಲಿ ಗೆಲ್ಲಬಹುದಾದ ಕ್ಷೇತ್ರಗಳನ್ನ ಪಟ್ಟಿ ಮಾಡಲಾಗಿದ್ದು ಗೆಲ್ಲಬಹುದಾದ ಕ್ಷೇತ್ರಗಳ ಪಟ್ಟಿಯಲ್ಲಿ ಗುಬ್ಬಿ ಕ್ಷೇತ್ರದ ಹೆಸರು ಮೊದಲಿದೆ. ಗುಬ್ಬಿ ಮತದಾರರೇನೋ ಬಿಜೆಪಿ ಗೆಲ್ಲಿಸಲು ಸಜ್ಜಾಗಿದ್ದಾರೆ ಆದರೆ, ನಮ್ಮ ಮುಖಂಡರು ಮೊದಲು ಒಂದಾಗಬೇಕು ಎಂದು ಸಲಹೆ ನೀಡಿದರು.