

ಶಿವಮೊಗ್ಗ: ‘ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಬೇಕು’ ಎಂಬುದು ಅಲ್ಲಿನ ಕಾರ್ಯಕರ್ತರ ಅಪೇಕ್ಷೆಯಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
‘ಆದರೆ ಮುಂಬರುವ ಈ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಯಾರು ಸ್ಪರ್ಧೆ ಮಾಡಬೇಕು ಎಂಬುದನ್ನು ಪಕ್ಷದ ನಾಯಕರು ನಿರ್ಧರಿಸಲಿದ್ದಾರೆ. ಪಕ್ಷದ ತೀರ್ಮಾನದಂತೆ ನಡೆದುಕೊಳ್ಳಲು ನಾನು ಬದ್ಧನಿದ್ದೇನೆ. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.
‘ಬಸವ ಕಲ್ಯಾಣ ಮತ್ತು ಮಸ್ಕಿ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಾಕಷ್ಟು ಆಕಾಂಕ್ಷಿಗಳಿದ್ದಾರೆ. ಯಾರೇ ಸ್ಪರ್ಧೆ ಮಾಡಿದರೂ ಶಿರಾ ಮತ್ತು ಆರ್.ಆರ್. ನಗರ ಉಪ ಚುನಾವಣೆ ಮಾದರಿಯಲ್ಲಿ ಒಗ್ಗೂಡಿ ಅವರ ಗೆಲುವಿಗೆ ಕೆಲಸ ಮಾಡಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.