ಕಾಳಸಂತೆಗೆ ಸಾಗಿಸುತ್ತಿದ್ದ 512 ಚೀಲ ಪಡಿತರ ಅಕ್ಕಿ ವಶ

ಸಿಂದಗಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ಕಾಳಸಂತೆಗೆ ಮಾರಾಟ ಮಾಡಲು ಹೊರಟಿದ್ದ ಎರಡು ಲಾರಿಗಳನ್ನು ಆಹಾರ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿರುವುದು.
ಸಿಂದಗಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ಕಾಳಸಂತೆಗೆ ಮಾರಾಟ ಮಾಡಲು ಹೊರಟಿದ್ದ ಎರಡು ಲಾರಿಗಳನ್ನು ಆಹಾರ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿರುವುದು.
Published on: 

ಸಿಂದಗಿ : ನಗರದ ಎಂಸಿ ಗೇಟ್ ಬಳಿಯ ಶಹಾಪೂರ ರಸ್ತೆಯಲ್ಲಿ ಅಕ್ರಮವಾಗಿ 512 (256 ಕ್ವಿಂಟಾಲ್) ಚೀಲ ಪಡಿತರ ಅಕ್ಕಿ ಸಂಗ್ರಹಿಸಿ ಕಾಳಸಂತೆಗೆ ಹೊರಟಿದ್ದ ಎರಡು ಲಾರಿಗಳನ್ನು ಆಹಾರ ಇಲಾಖೆ ಅಧಿಕಾರಿಗಳು ಬುಧವಾರ ವಶಕ್ಕೆ ಪಡೆದ ಘಟನೆ ನಡೆದಿದೆ.

ಚಾಲಕರಾದ ಕಲಬುರಗಿ ನಗರದ ರಫೀಕ್ ಅಹ್ಮದ್ ಅಕ್ಬರ್ ಮಿಯಾ ನದ್ಾ, ಅಜಲಪೂರ ತಾಲೂಕಿನ ಅತನೂರ ಗ್ರಾಮದ ಅಬ್ದುಲ್ಮುಖೀದ್ ಬಾಬುಮಿಯಾ ಬೇಕರಿ ಮತ್ತು ಆಲಮೇಲ ತಾಲೂಕಿನ ಸೋಹೆಲ್ ಎಂಬ ವ್ಯಕ್ತಿಗಳು.

ಶಹಾಪೂರ ಕಡೆಯಿಂದ ಸಿಂದಗಿಯತ್ತ ಹೊರಟಿದ್ದ ಎರಡು ಲಾರಿಗಳನ್ನು ತಾಲೂಕು ಆಹಾರ ನಿರೀಕ್ಷಕಿ ವಿದ್ಯಾ ಹಿಪ್ಪರಗಿ, ಆಹಾರ ಇಲಾಖೆಯ ಶಿರಸ್ತೇದಾರ ಬಸವರಾಜ ಭೋವಿ ಹಾಗೂ ಕಂಪ್ಯೂಟರ್ ಆಪರೇಟರ್ ಅನುಮಲ್ಲೀಕ್ ನಾಟೀಕಾರ ಸಂಶಯದಿಂದ ತಡೆದು, ಪರಿಶೀಲಿಸಿದಾಗ ಲಾರಿಗಳಲ್ಲಿ ವಿವಿಧ ಯೋಜನೆಯ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ಮೂಟೆಗಳು ಕಂಡು ಬಂದಿವೆ. ತಕ್ಷಣವೇ ಎರಡು ಲಾರಿ ಚಾಲಕರನ್ನು ವಿಚಾರಣೆ ನಡೆಸಿದಾಗ ಪಡಿತರ ಅಕ್ಕಿಯಿದೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಆಲಮೇಲದ ಸೋಹೇಲ್ ಎಂಬ ವ್ಯಕ್ತಿ ಹೇಳಿದಂತೆ ಜೇವರ್ಗಿ ತಾಲೂಕಿನ ಮಲ್ಲಾ (ಬಿ) ಕ್ರಾಸ್‌ನಿಂದ ಸಿಂದಗಿಯತ್ತ ಸಾಗಿಸುವುದಾಗಿ ತಿಳಿಸಿದ್ದಾರೆ. ಲಾರಿಯಲ್ಲಿ 50 ಕೆಜಿ ತೂಕದ ಪ್ಲಾಸ್ಟಿಕ್ ಹಾಗೂ ಗೋಣಿ ಚೀಲದಲ್ಲಿದ್ದ ಅಕ್ಕಿ ಒಂದರಲ್ಲಿ 211 ಚೀಲ ಹಾಗೂ ಮತ್ತೊಂದು ಲಾರಿಯಲ್ಲಿ 301 ಚೀಲಗಳು ಕಂಡು ಬಂದಿವೆ. ಕೆಜಿಗೆ 23.34 ರೂ. ದರದಂತೆ ಒಟ್ಟು ಅಕ್ಕಿ ಬೆಲೆ 5,98,437 ಇದ್ದು, ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸಲಾಗುತ್ತಿತು ಎಂದು ಅಧಿಕಾರಿಗಳಿಂದ ತಿಳಿದು ಬಂದಿದೆ.

ಸಿಂದಗಿ ಠಾಣೆಯಲ್ಲಿ ಆಹಾರ ನಿರೀಕ್ಷಕಿ ವಿದ್ಯಾ ಮಲ್ಲಪ್ಪ ಹಿಪ್ಪರಗಿ ಗುರುವಾರ ಪ್ರಕರಣ ದಾಖಲಿಸಿದ್ದಾರೆ.