ಕೈಪಾಳಯದಲ್ಲಿ ಎಲ್ಲವೂ ಸರಿಯಿಲ್ಲ

VJP Ravindra
Published on

ವಿಜಯಪುರ: ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಚುನಾವಣೆಗೆ ಮುನ್ನವೇ ಸಿಎಂ ಕುರ್ಚಿಗಾಗಿ ಕಚ್ಚಾಡುತ್ತಿದ್ದರೆ ಜಿಲ್ಲೆಯಲ್ಲೂ ಶಾಸಕರಿಬ್ಬರು ಬಹಿರಂಗವಾಗಿಯೇ ವೈಮನಸ್ಸು ಪ್ರದರ್ಶಿಸುತ್ತಿದ್ದಾರೆ. ಈ ಎಲ್ಲ ಬೆಳವಣಿಗೆ ಕಾಂಗ್ರೆಸ್ ಅವಸಾನದತ್ತ ಸಾಗುತ್ತಿದೆ ಎಂಬುದನ್ನು ಎತ್ತಿ ತೋರಿಸುತ್ತಿದೆ ಎಂದು ಬಿಜೆಪಿ ಜಿಲ್ಲಾ ಸಹ ವಕ್ತಾರ ರವೀಂದ್ರ ಲೋಣಿ ವ್ಯಂಗ್ಯವಾಡಿದರು.

ಕಾರ್ಪೋರೇಟರ್‌ಗಳು ಪಾಲಿಕೆ ಸಭೆಯಲ್ಲಿ ಹೇಳಿಕೆ-ಪ್ರತಿ ಹೇಳಿಕೆ ಮೊಳಗಿಸಿದಂತೆ ಜಿಲ್ಲೆಯ ಇಬ್ಬರು ಕಾಂಗ್ರೆಸ್ ನಾಯಕರು ಹೇಳಿಕೆ-ಪ್ರತಿಹೇಳಿಕೆ ನೀಡುತ್ತಾ ಸಾಗಿದ್ದಾರೆ. ಇದು ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಲೇವಡಿ ಮಾಡಿದರು.

ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮತ್ತು ಸಂಸದ ರಮೇಶ ಜಿಗಜಿಣಗಿ ಅವರ ಕೊಡುಗೆ ಅಪಾರವಾಗಿದೆ. ಇದೀಗ ನಮ್ಮದೇ ಸರ್ಕಾರ 16 ಕೆರೆಗಳಿಗೆ ನೀರು ತುಂಬುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದು ನಮ್ಮ ಸರ್ಕಾರದ ಸಾಧನೆ ಎಂದರು.

ಕರೊನಾ ಪರಿಸ್ಥಿತಿಯಲ್ಲಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವೃಥಾ ಆರೋಪ ಮಾಡಿತು. ರಾಜ್ಯ ಮತ್ತು ಕೇಂದ್ರ ಸರ್ಕಾರ ಕರೊನಾ ನಿಯಂತ್ರಿಸುವಲ್ಲಿ ಸಾಕಷ್ಟು ಶ್ರಮವಹಿಸಿವೆ. ಅದರ ಅಂಕಿ ಅಂಶಗಳ ಸಮೇತ ಮಾಹಿತಿ ನೀಡಿದೆ. ಆದರೂ, ಕಾಂಗ್ರೆಸ್ ಆಧಾರ ರಹಿತವಾಗಿ ಟೀಕೆ ಮಾಡುತ್ತಿದೆ. ಟೀಕೆ ಮಾಡುವ ಮುನ್ನ ಕಾಂಗ್ರೆಸ್ ನಾಯಕರು ಹೋಂ ವರ್ಕ್ ಮಾಡಿಕೊಂಡು ಬರಬೇಕೆಂದು ಕಿಡಿಕಾರಿದರು.

ಸಂಸದ ರಮೇಶ ಜಿಗಜಿಣಗಿ, ಡಿಸಿಎಂ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರ ಸಮರ್ಥ ಅಭಿವೃದ್ಧಿಪರ ದೃಷ್ಟಿಕೋನದಲ್ಲಿ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳ ಪರ್ವ ಆರಂಭಗೊಂಡಿದೆ. ನಗರ ಶಾಸಕರು ಸಹ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಅಟಲ್‌ಜೀ ಮಾರ್ಗ ಅತ್ಯಂತ ಮಾದರಿಯಾಗಿ ರೂಪುಗೊಂಡಿದೆ, ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬೇಕು ಎಂದು ಅವರು ಕೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಮಹಾನಗರ ಪಾಲಿಕೆ ಆಡಳಿತ ಇಲ್ಲದಿರುವುದರಿಂದ ನಗರದಲ್ಲಿ ಕೆಲವೊಂದು ಅಭಿವೃದ್ಧಿ ಕಾಮಗಾರಿ ಕುಂಠಿತವಾಗಿರಬಹುದು, ಶಾಸಕರು ತಮ್ಮ ವ್ಯಾಪ್ತಿಯಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net