

ವಿಜಯಪುರ: ಯಾವುದೇ ಪಕ್ಷ, ಯಾವುದೇ ಕ್ಷೇತ್ರದಿಂದ ಪರಸ್ಪರ ಸ್ಪರ್ಧಿಸೋಣ ಬನ್ನಿ. ಯಾರು ಗೆಲ್ಲುತ್ತಾರೋ ಜನ ತೀರ್ಮಾನ ಮಾಡಲಿ. ಆ ಬಳಿಕ ರಾಜಕೀಯ ಭವಿಷ್ಯದ ನಿರ್ಧಾರವಾಗಲಿ ಎಂಬ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲರ ಸವಾಲು ಸ್ವೀಕರಿಸುವ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ನೀಡಲಿಲ್ಲ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತ ಪ್ರಶ್ನೆಗೆ ಸಿಡಿಮಿಡಿಗೊಂಡ ಶಾಸಕ ಯತ್ನಾಳ, ಬ್ಲಾೃಕ್ ಮೇಲ್ ಲೀಡರ್‌ಗಳಿಗೆ ನಾನು ಉತ್ತರಿಸಲ್ಲ. ಚುನಾವಣೆ ಬಂದರೆ ಸಾಕು ದಂಧೆ ಶುರುಮಾಡುತ್ತಾರೆ. ಮುದ್ದೇಬಿಹಾಳ, ಬಬಲೇಶ್ವರ, ವಿಜಯಪುರ, ಸಿಂದಗಿ ಹೀಗೆ ಒಂದೊಂದು ಕ್ಷೇತ್ರದಿಂದ ನಿಲ್ಲುತ್ತೇನೆ ಎನ್ನುವುದು. ವಸೂಲಿ ಮಾಡೋದು ಚುನಾವಣೆಗೆ ನಿಲ್ಲೋದು ಮಾಡುತ್ತಾರೆ. ಇಂಥವರಿಗೆಲ್ಲ ಉತ್ತರ ಕೊಡಲ್ಲ ಎಂದರು.
ಅದೇನೇ ಇರಲಿ. ಶಿವಾನಂದ ಪಾಟೀಲರು ಸವಾಲಂತೂ ಹಾಕಿದ್ದಾರೆ. ಅದನ್ನು ಸ್ವೀಕರಿಸುತ್ತೀರೋ ಇಲ್ಲವೋ ಸ್ಪಷ್ಟಪಡಿಸಿ ಎಂಬ ಪ್ರಶ್ನೆಗೆ ನಾಯಿ, ನರಿಗಳ ಪ್ರಶ್ನೆಗೆ ಉತ್ತರ ಕೊಡುವ ಅಗತ್ಯವಿಲ್ಲ ಎಂಬ ಕೀಳು ಪದಬಳಕೆ ಮಾಡಿದರೆ ವಿನಃ ಸವಾಲು ಎದುರಿಸುವ ಬಗ್ಗೆ ಸ್ಪಷ್ಟತೆ ನೀಡಲಿಲ್ಲ.