ಮತ ಗಳಿಕೆಯಲ್ಲಿ ಕಾಂಗ್ರೆಸ್ ಮೇಲುಗೈ

ಮತ ಗಳಿಕೆಯಲ್ಲಿ ಕಾಂಗ್ರೆಸ್ ಮೇಲುಗೈ
Published on

ಹೊಸಪೇಟೆ: ವಿಜಯನಗರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಿದ್ದರೂ, ಒಟ್ಟಾರೆ ಮತ ಗಳಿಕೆಯಲ್ಲಿ ಈ ಬಾರಿಯೂ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಶೇ.46.80 ಜನ ಮತ ಪಡೆದರೆ, ಬಿಜೆಪಿ ಶೇ.32.62 ಮತ ಗಳಿಸಿ ಎರಡನೇ ಸ್ಥಾನಕ್ಕೆ ಕುಸಿದಿದೆ.

ಕಾಂಗ್ರೆಸ್ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಇನ್ನೆರಡು ಕ್ಷೇತ್ರಗಳಲ್ಲಿ ಎರಡನೇ ಸ್ಥಾನ ಹಾಗೂ ಮತ್ತೊಂದರಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದರೂ ಮತ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. 2018ರ ಚುನಾವಣೆಗಿಂತ ಈ ಬಾರಿ 1 ಲಕ್ಷ ಮತಗಳನ್ನು ಹೆಚ್ಚಿಸಿಕೊಂಡಿದೆ. ಆದರೆ, ಕಳೆದ ಬಾರಿ ಮೂವರು ಶಾಸಕರನ್ನು ಹೊಂದಿದ್ದ ಬಿಜೆಪಿ ಈ ಬಾರಿ ಹೂವಿನಹಡಗಲಿಯಲ್ಲಿ ಮಾತ್ರ ಗೆಲುವು ದಾಖಲಿಸಲು ಸಾಧ್ಯವಾಗಿದೆ. ಒಟ್ಟಾರೆ ಮತಗಳಿಕೆಯಲ್ಲಿ 2768 ಮತಗಳನ್ನು ಕಳೆದುಕೊಂಡಿದೆ.

ವಿಜಯ ಪತಾಕೆ ಹಾರಿಸಿದ ಜೆಡಿಎಸ್

ಹಗರಿಬೊಮ್ಮನಹಳ್ಳಿಯಲ್ಲಿ ಅಚ್ಚರಿ ಎಂಬಂತೆ ವಿಜಯ ಪತಾಕೆ ಹಾರಿಸಿರುವ ಜೆಡಿಎಸ್‌ಗೆ ಶೇ.1 ಮತಗಳ ಬಲ ಹೆಚ್ಚಿದೆ. ಇನ್ನುಳಿದ ಪಕ್ಷಗಳು ಮತ್ತು ಪರಾಜಿತ ಪಕ್ಷೇತರರು ಶೇಕಡವಾರು ಮತಗಳಿಕೆಯಲ್ಲಿ ಸೊನ್ನೆ ಸುತ್ತಿವೆ.
ಲಕ್ಷ ಭೇದಿಸಿದ ‘ಕೈ’ ಕಲಿಗಳು: ಕಳೆದ ಚುನಾವಣೆ (2018)ಯಲ್ಲಿ 2,96,147 ಮತಗಳನ್ನು ಗಳಿಸಿದ್ದ ಕಾಂಗ್ರೆಸ್, ಈ ಬಾರಿ ಒಟ್ಟು 3,99,039 ಮತಗಳನ್ನು ಪಡೆದಿದೆ. ಈ ಮೂಲಕ ಸುಮಾರು 1 ಲಕ್ಷ ವೋಟುಗಳನ್ನು ಹೆಚ್ಚುವರಿಯಾಗಿ ಪಡೆದುಕೊಂಡಿದ್ದು, ಹಿಂದಿನ ಸಾಧನೆಯನ್ನು ದಾಟಿದೆ.

ಇಬ್ಬರು ಕಾಂಗ್ರೆಸ್ ಅಭ್ಯರ್ಥಿ ಜಯಭೇರಿ

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಜಯಭೇರಿ ಬಾರಿಸಿರುವ ಇಬ್ಬರು ಅಭ್ಯರ್ಥಿಗಳು 1 ಲಕ್ಷದ ಗಡಿ ದಾಟಿದ್ದಾರೆ. ವಿಜಯನಗರ ಕ್ಷೇತ್ರದಲ್ಲಿ ಎಚ್.ಆರ್.ಗವಿಯಪ್ಪ 1,04,863 ಮತ್ತು ಕೂಡ್ಲಿಗಿಯಲ್ಲಿ ಡಾ.ಎನ್.ಟಿ.ಶ್ರೀನಿವಾಸ್ 1,04,753 ಮತಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಇನ್ನುಳಿದಂತೆ ಹಗರಿಬೊಮ್ಮನಹಳ್ಳಿಯಲ್ಲಿ 72,679, ಹೂವಿನಹಡಗಲಿ 71,756 ಹಾಗೂ ಹರಪನಹಳ್ಳಿಯಲ್ಲಿ 44,988 ಮತಗಳನ್ನು ಗಳಿಸಿದೆ.

ಈ ಬಾರಿ ಬಿಜೆಪಿಗಿಲ್ಲ ಮನ್ನಣೆ

ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಸೋತಿದೆ. ಕಳೆದ ಚುನಾವಣೆಯಲ್ಲಿ 2,80,886 ಮತಗಳನ್ನು ಗಳಿಸಿ ಎರಡನೇ ಸ್ಥಾನದಲ್ಲಿದ್ದ ಬಿಜೆಪಿಗೆ ಈ ಬಾರಿಯೂ ಹಿನ್ನಡೆಯಾಗಿದೆ. ಜಿಲ್ಲೆಯ ಐದೂ ಕ್ಷೇತ್ರಗಳು ಸೇರಿದಂತೆ ಒಟ್ಟು 2,78,118 ಮತಗಳನ್ನು ಪಡೆದಿದೆ.

ಜೆಡಿಎಸ್‌ಗೆ ಒಂದೇ ಸ್ಥಾನ

ಜಿಲ್ಲೆಯಲ್ಲಿ ಜೆಡಿಎಸ್ ಅಚ್ಚರಿ ಎಂಬಂತೆ ಒಂದು ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿದ್ದರೂ ಮತಗಳಿಕೆಯಲ್ಲಿ ಹಿಂದಿದೆ. ಕಳೆದ ಚುನಾವಣೆಯಲ್ಲಿ 1,24,127 ಮತಗಳನ್ನು ಗಳಿಸಿದ್ದು, ಈ ಸಲ 89,719ಕ್ಕೆ ತೃಪ್ತಿ ಪಟ್ಟಿದೆ. ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಗೆಲುವಿನ ಬಾವುಟ ಹಾರಿಸಿದ ಕೆ.ನೇಮಿರಾಜ್ ನಾಯ್ಕ ಅವರೊಬ್ಬರೇ 84,023 ಮತಗಳಿಸಿದ್ದಾರೆ. ಹಡಗಲಿಯಲ್ಲಿ ಜೆಡಿಎಸ್ 1848, ಹರಪನಹಳ್ಳಿ 711, ಕೂಡ್ಲಿಗಿ 3138 ಮತ ಗಳಿಸಿದ್ದು, ವಿಜಯನಗರದಲ್ಲಿ ಅಭ್ಯರ್ಥಿಯನ್ನೇ ಹಾಕಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net