

ಕಲಬುರಗಿ : ಹಿರಿಯ ಔಷಧ ವ್ಯಾಪಾರಿ ಹಾಗೂ ಸಮಾಜ ಸೇವಕರಾಗಿದ್ದ ವಿಜಯಕುಮಾರ ಸಾತನೂರಕರ್ (೬೮) ಭಾನುವಾರ ನಿಧನರಾದರು.
ಪತ್ನಿ, ಇಬ್ಬರು ಪುತ್ರರು,ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ. ಕಳೆದ ನಾಲ್ಕುವರೆ ದಶಕದಿಂದ ಸಾಮಾಜಿಕ ಕೆಲಸಗಳನ್ನು ಮಾಡಿಕೊಂಡಿದ್ದರು.ಮಾಜಿ ಸಚಿವ ಡಾ.ಎ.ಬಿ.ಮಲಕರಡ್ಡಿ ಅವರ ಆಪ್ತರಾಗಿದ್ದರು. ಔಷಧ ವ್ಯಾಪಾರಿಗಳ ಸಂಘಟನೆ ಬಲಗೊಳಿಸಿದ್ದರು.
ಕಳೆದ ೧೫ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಹಿಂದಷ್ಟೆ ಮರಳಿ ಕಲಬುರಗಿಗೆ ಕರೆ ತರಲಾಗಿತ್ತು.ಚಿಕಿತ್ಸೆ ಫಲಿಸದೆ ಇಲ್ಲಿನ ಕೋಠಾರಿ ಭವನ ಹಿಂಭಾಗದ ಸಾರಡಾ ಲೇಔಟ್‌ನಲ್ಲಿರುವ ನಿವಾಸದಲ್ಲಿ ಕೊನೆಯುಸಿರೆಳೆದರು.
ಸೋಮವಾರ ಬೆಳಗಿನ ಜಾವ ೮ ಗಂಟೆಯವರೆಗೂ ನಗರದ ಸಾರಡಾ ಲೇಔಟ್‌ನಲ್ಲಿರುವ ಮನೆಯಲ್ಲಿ ಪಾರ್ಥಿವ ಶರೀರ ಇರಿಸಲಾಗುತ್ತದೆ. ನಂತರ ಸ್ವಗ್ರಾಮ ಚಿತ್ತಾಪುರ ತಾಲೂಕಿನ ಸಾತನೂರ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ೧೧-೩೦ ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.
ಸುದ್ದಿ ಹರಡುತ್ತಲೇ ಅವರ ನಿವಾಸಕ್ಕೆ ಹಿತೈಷಿಗಳು ದೌಡಾಯಿಸಿ,ಕುಟುಂಬದವರಿಗೆ ಸಂತೈಸಿದರು. ಶಾಸಕರಾದ ಅಲ್ಲಮಪ್ರಭು ಪಾಟೀಲ್, ಡಾ.ಬಿ.ಜಿ.ಪಾಟೀಲ್, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಪಾಲಿಕೆ ಮಾಜಿ ಸದಸ್ಯ ಉಮೇಶ ಶೆಟ್ಟಿ, ಉದ್ಯಮಿ ಪದ್ಮನಾಭ ಕುರಂಜೂರು ಇತರರು ಸಂತಾಪ ವ್ಯಕ್ತಪಡಿಸಿದ್ದಾರೆ.