ಜಿಲ್ಲಾದ್ಯಂತ ಸಂಭ್ರಮದ ವಿಜಯದಶಮಿ

ಜಿಲ್ಲಾದ್ಯಂತ ಸಂಭ್ರಮದ ವಿಜಯದಶಮಿ
Published on

ಹಾಸನ; ನಗರದ ಸಾಲಗಾಮೆ ರಸ್ತೆಯ ಬನ್ನಿ ಮಂಟಪದಲ್ಲಿ ಗುರುವಾರ ಬನ್ನಿ ಕಡಿಯುವ ಮೂಲಕ ಐತಿಹಾಸಿಕ ವಿಜಯದಶಮಿ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಹಾಸನಾಂಬ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಸಾಗಿ ಬಂದ ನಗರ ದೇವತೆಗಳಾದ ನೀರುಬಾಗಿಲು ಆಂಜನೇಯ, ಸಿದ್ದೇಶ್ವರ, ಚನ್ನಕೇಶವ, ಮೈಲಾರಲಿಂಗ ಹಾಗು ಚಾಮುಂಡೇಶ್ವರಿಯನ್ನು ಬನ್ನಿಮಂಟಪ (ಮಾರನವಮಿ ಮಂಟಪ)ಕ್ಕೆ ತಂದು ಪೂಜಾ ವಿಧಿವಿಧಾನ ನೆರವೇರಿಸಲಾಯಿತು. ತಳವಾರ ವಂಶಸ್ಥರಾದ ನರಸಿಂಹರಾಜು ಅವರು ಸಂಪ್ರದಾಯದಂತೆ ಹತ್ತು ದಿನಗಳ ಕಾಲ ಉಪವಾಸವಿದ್ದು, ಪೂಜಾ ವಿಧಿಯಂತೆ ಬನ್ನಿತುಂಬಿ ನೆಟ್ಟಿದ್ದ ಬಾಳೆಕಂದಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ನಂತರ ಕತ್ತರಿಸಿದರು.

ಐದು ದೇವರಿಗೆ ನಮಸ್ಕರಿಸಿ ನಂತರ ಬಾಳೆ ಕಂದಿಗೆ ಪ್ರದಕ್ಷಿಣೆ ಹಾಕಿ ಬನ್ನಿ ಕತ್ತರಿಸುತ್ತಿದ್ದಂತೆ ಜನರು ಬನ್ನಿಎಲೆ ಬಾಚಿಕೊಳ್ಳಲು ಮುಗಿಬಿದ್ದರು. ಕತ್ತರಿಸಿದ ಬನ್ನಿಯನ್ನು ನೆರೆದಿದ್ದ ಎಲ್ಲ ಜನರಿಗೆ ಬನ್ನಿಯೊಂದಿಗೆ ಬಾಳೆಕಂದನ್ನು ಸಿಗಿದು ಪ್ರಸಾದ ಎಂದು ಹಂಚಲಾಯಿತು. ಬನ್ನಿಯನ್ನು ಮನೆ ಬಾಗಿಲಿನಲ್ಲಿ ಅಥವಾ ಮನೆಯಲ್ಲಿ ಇಟ್ಟಿಕೊಂಡರೆ ಯಾವ ದುಷ್ಟಶಕ್ತಿಯಿಂದಲೂ ಕೆಡುಕಾಗುವುದಿಲ್ಲ ಎಂಬುದು ಜನರ ನಂಬಿಕೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರಾದಾಯವಾಗಿದ್ದು, ನಾಡ ಹಬ್ಬವನ್ನು ನಗರದ ಜನರು ಭಕ್ತಿ, ಸಂಭ್ರಮದಿಂದ ಆಚರಿಸಿದರು.

ಅಚ್ಚುಕಟ್ಟು ಕಾರ್ಯಕ್ರಮ: ನಗರದ ಸಾಲಗಾಮೆ ರಸ್ತೆಯ ಬನ್ನಿ ಮಂಟಪದಲ್ಲಿ ಆಯೋಜಿಸಿದ್ದ ವಿಜಯದಶಮಿ ಅಚ್ಚುಕಟ್ಟಾಗಿ ನೆರವೇರಿತು. ಹಬ್ಬದ ಪ್ರಯುಕ್ತ ಮಂಟಪ ಆವರಣವನ್ನು ಶುಚಿಗೊಳಿಸಿ ದೇಗುಲಕ್ಕೆ ಬಣ್ಣ ಬಳಿಯಲಾಗಿತ್ತು. ಬನ್ನಿ ಎಲೆಗಾಗಿ ಜನರು ಒಬ್ಬರ ಮೇಲೊಬ್ಬರು ಮುಗಿಬೀಳುತ್ತಿದ್ದ ಹಿನ್ನೆಲೆಯಲ್ಲಿ ಸಂಭವನೀಯ ಅವಘಡ ತಪ್ಪಿಸಲು ಈ ಬಾರಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. ತಳವಾರ ವಂಶಸ್ಥರು ಹಾಗೂ ತಾಲೂಕು ಆಡಳಿತ ಅಧಿಕಾರಿಗಳಷ್ಟೆ ಸ್ಥಳದಲ್ಲಿ ಇದ್ದರಿಂದ ಜನದಟ್ಟಣೆ ತಪ್ಪಿತು. ಜತೆಗೆ ಎಲ್ಲರಿಗೂ ಬನ್ನಿ ಎಲೆ ತಲುಪಿಸಲಾಯಿತು. ನೂರಾರು ಮಹಿಳೆಯರು, ವೃದ್ಧರು ಭಕ್ತಿಯಿಂದ ದೇವರಿಗೆ ನಮಸ್ಕರಿಸಿದರು. ಧಾರ್ಮಿಕ ಕೈಂಕರ್ಯ ಮುಗಿಯುತ್ತಿದ್ದಂತೆ ಮೆರವಣಿಗೆ ಮೂಲಕ ದೇವರ ಮೂರ್ತಿಗಳು ತೆರಳಿದವು. ಜಿಲ್ಲಾಡಳಿತದ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net