

ಹನಗೋಡು: ಮಹಾಶಿವರಾತ್ರಿಯ ಜಾಗರಣೆ ಅಂಗವಾಗಿ ಬುಧವಾರ ರಾತ್ರಿಯಿಂದಲೇ ಹನಗೋಡು ಹೋಬಳಿಯ ವಿವಿಧ ದೇವಾಲಯಗಳಲ್ಲಿ ಜಾಗರಣೆ, ವಿಶೇಷಪೂಜೆ ನಡೆದರೆ, ಗುರುವಾರದಂದು ರಥೋತ್ಸವ, ಕೊಂಡೋತ್ಸವ, ದೇವರ ಉತ್ಸವ ಹಾಗೂ ಅನ್ನಸಂತರ್ಪಣೆ ವಿಜೃಂಭಣೆಯಿಂದ ಜರುಗಿದವು.
ರಾಮೇನಹಳ್ಳಿ ಬೆಟ್ಟದ ಮೇಲಿನ ಓಂಕಾರೇಶ್ವರ ದೇವರ ರಥೋತ್ಸವ, ಕಲ್ಲೂರಪ್ಪನಗುಡ್ಡದಲ್ಲಿ ಕೊಂಡೋತ್ಸವ, ಕೊಳುವಿಗೆ ರಾಮಲಿಂಗೇಶ್ವರ ದೇವಾಲಯದಲ್ಲಿ ಉತ್ಸವ, ಹೆಬ್ಬಾಳದ ಓಂಕಾರೇಶ್ವರ ದೇವಾಲಯದಲ್ಲಿ ಅನ್ನ ಸಂತರ್ಪಣೆ ಹಾಗೂ ಉತ್ಸವ ಸೇರಿದಂತೆ ಹನಗೋಡು ಹೋಬಳಿಯ ವಿವಿಧ ದೇವಾಲಯಗಳಲ್ಲಿ ಜಾಗರಣೆ, ವಿಶೇಷಪೂಜೆ ವಿವಿಧೆಡೆ ಅನ್ನಸಂತರ್ಪಣೆ ನಡೆದಿದೆ.
ಓಂಕಾರೇಶ್ವರ ರಥೋತ್ಸವ: ಹನಗೋಡು ಹೋಬಳಿಯ ರಾಮೇನಹಳ್ಳಿ ಬೆಟ್ಟದ ಮೇಲಿನ ಶ್ರೀ ಓಂಕಾರೇಶ್ವರಸ್ವಾಮಿಯ ರಥೋತ್ಸವವು ಬೆಟ್ಟದ ತಪ್ಪಲಿನಲ್ಲಿ ಗುರುವಾರ ಬೆಳಗ್ಗೆ 9.45 ಗಂಟೆಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಬುಧವಾರ ರಾತ್ರಿ ಬೆಟ್ಟದ ಮೇಲಿನ ದೇವಾಲಯದಲ್ಲಿ ವಿಶೇಷ ಹೋಮ, ಹವನ, ಭಜನೆಯೊಂದಿಗೆ ಭಕ್ತರು ಜಾಗರಣೆ ನಡೆಸಿದರು.
ಮುಡಿ ಹರಕೆ: ಬೆಟ್ಟದ ಮೇಲಿನ ದೇವಾಲಯಕ್ಕೆ ಭಕ್ತರು ಬೆಟ್ಟ ಹತ್ತಿ, ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಮಾಡಿ, ಭಕ್ತಿಭಾವ ಮೆರೆದರು. ಇದಕ್ಕೂ ಮೊದಲು ಹರಕೆ ಹೊತ್ತ ಮಂದಿ ಗ್ರಾಮದ ಬಳಿ ಇರುವ ಲಕ್ಷ್ಮಣತೀರ್ಥನದಿಯಲ್ಲಿ ತಲೆ ಮುಡಿಕೊಟ್ಟು ಬೆಟ್ಟ ಹತ್ತಿ, ಉರುಳುಸೇವೆ ಮಾಡಿ ಹರಕೆ ಸಲ್ಲಿಸಿದರು. ರಥೋತ್ಸವದಲ್ಲಿ ವಿವಿಧ ರಾಜಕೀಯ ಮುಖಂಡರು ಸೇರಿದಂತೆ ಸ್ಥಳಿಯ ಚುನಾಯಿತ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಜಾತ್ರೆಯಲ್ಲಿ ಕಂಡು ಬಂದ ವಿಶೇಷತೆಗಳು : ಜಾತ್ರೆಗೆ ಬಗೆ-ಬಗೆಯ ಹತ್ತಾರು ಸಿಹಿ ತಿಂಡಿ ಅಂಗಡಿಗಳು, ಕಡ್ಲೆ-ಪುರಿ ಅಂಗಡಿಗಳು, ಮಹಿಳೆಯರ ಶೃಂಗಾರ ಸಾಧನ, ಖರ್ಜೂರ, ಐಸ್ ಕ್ರೀಂ, ಕಾರಾಪುರಿ, ಮಕ್ಕಳ ಆಟಿಕೆ ಅಂಗಡಿಗಳು. ಕಬ್ಬಿನಹಾಲು ಜಾತ್ರೆಗೆ ಕಳೆಗಟ್ಟಿದ್ದವು
ಅನ್ನಸಂತರ್ಪಣೆ: ಜಾತ್ರಾ ಸಮಿತಿ ವತಿಯಿಂದ ಭಕ್ತರಿಗೆ ದಾನಿಗಳ ನೆರವಿನಿಂದ ಬೆಟ್ಟದ ತಪ್ಪಲಿನಲ್ಲಿ ಆಯೋಜಿಸಿದ್ದ ಅನ್ನ ಸಂತರ್ಪಣೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಭಕ್ತರು ಊಟ ಮಾಡಿದರು. ಜಾತ್ರೆಯಲ್ಲಿ ಹುಣಸೂರಿನ ಗಾಡಿಕಾರ್ಖಾನೆ ದಿ.ನಾರಾಯಣಸ್ವಾಮಿಯವರ ಸ್ಮರಣಾರ್ಥ ಎಂದಿನಂತೆ ಅವರ ಕುಟುಂಬದವರು ಹಾಗೂ ನಿಲುವಾಗಿಲು ಮತ್ತೆ ರಾಮೇನಹಳ್ಳಿ ಗೇಟ್‌ಗಳಲ್ಲಿ ಜಾತ್ರೆಗೆ ಆಗಮಿಸಿದ್ದ ಭಕ್ತರಿಗೆ ಮಜ್ಜಿಗೆ, ಪಾನಕ ನೀಡಿ ದಣಿವಾರಿಸಿದರು.
ಕೊಳುವಿಗೆಯಲ್ಲಿ ಶ್ರೀರಾಮಲಿಂಗೇಶ್ವರ ಉತ್ಸವ; ನಾಗರಹೊಳೆ ರಾಷ್ಟೀಯ ಉದ್ಯಾನವನದಂಚಿನ ಕೊಳುವಿಗೆಯ ಲಕ್ಷ್ಮಣತೀರ್ಥ ನದಿ ದಂಡೆಯಲ್ಲಿರುವ ಚೋಳರ ಕಾಲದ ಶ್ರೀರಾಮಲಿಂಗೇಶ್ವರ ದೇವಾಲಯದಲ್ಲಿ ಬುಧವಾರ ರಾತ್ರಿ ಇಡೀ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು, ಗುರುವಾರ ಮುಂಜಾನೆ ದೇವರ ಉತ್ಸವ, ಕೊಂಡೋತ್ಸವ ನಡೆಯಿತು. ಮಧ್ಯಾಹ್ನ ಅನ್ನದಾಸೋಹ ನೆರವೇರಿತು. ಸುತ್ತ ಮುತ್ತಲ ಗ್ರಾಮಸ್ಥರು ಹಾಗೂ ಕಾಡಂಚಿನ ಹಾಡಿಗಳಿಂದ ಸಾವಿರಾರು ಮಂದಿ ಜಾತ್ರಾಮಹೋತ್ಸವದಲ್ಲಿ ಭಾಗವಹಿಸಿದ್ದರು. ಜಾತ್ರೆಗಾಗಮಿಸಿದ್ದ ಭಕ್ತರಿಗೆ ಅನ್ನದಾಸೋಹ ನಡೆಯಿತು.
ಕಲ್ಲೂರಪ್ಪನ ಬೆಟ್ಟದಲ್ಲಿ ಕೊಂಡೋತ್ಸವ: ಹನಗೋಡಿಗೆ ಸಮೀಪದ ಮಾದಳ್ಳಿಯ ಕಲ್ಲೂರಪ್ಪನಬೆಟ್ಟದಲ್ಲಿ ಕಲ್ಲುಬಂಡೆಗಳ ನಡುವೆ ವಿರಾಜಮಾನವಾಗಿರುವ ಕಲ್ಲೂರೇಶ್ವರಸ್ವಾಮಿಗೆ ಶಿವರಾತ್ರಿ ಹಬ್ಬದಂದು ವಿಶೇಷ ಪೂಜೆ ನಡೆಯಿತು. ಜಾಗರಣೆ ಅಂಗವಾಗಿ ಇಡೀ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಗುರುವಾರ ಬೆಳಗ್ಗೆ ದೀವಟಿಕೆ ಉತ್ಸವ, ಕೊಂಡೋತ್ಸವ ನಡೆಯಿತು. ಜಾಗರಣೆಯ ಪ್ರಯುಕ್ತ ಪ್ರಸಾದ ಹಾಗೂ ಅನ್ನ ದಾಸೋಹ ನಡೆಯಿತು. ಎಲ್ಲ ದೇವಾಲಯಗಳಿಗೂ ವಿವಿಧ ರಾಜಕೀಯ ಮುಖಂಡರು ಭೇಟಿ ನೀಡಿ ದೇವರ ದರ್ಶನ ಪಡೆದರು.
ಆಯಾಯ ಗ್ರಾ.ಪಂ. ಆಧ್ಯಕ್ಷರು ಹಾಗೂ ಸದಸ್ಯರು ಮತ್ತು ದೇವಾಲಯಗಳ ಸೇವಾ ಪದಾಧಿಕಾಗಳು ಭಾಗವಹಿಸಿದ್ದರು.
ಎಲ್ಲೆಡೆ ಗ್ರಾಮಾಂತರ ಪೊಲೀಸ್ ಇನ್‌ಸ್ಪೆಕ್ಟರ್ ಎನ್.ಮುನಿಯಪ್ಪ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.