ರೋಚಕ ಘಟ್ಟದಲ್ಲಿ ಪರಿಷತ್​ ಫೈಟ್​: ಮತ ಎಣಿಕೆ ಆರಂಭ, ಬಸವರಾಜ ಹೊರಟ್ಟಿ ಸೇರಿ ಹಲವರ ಭವಿಷ್ಯ ನಿರ್ಧಾರ

JCB
Published on

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರ ಸೇರಿದಂತೆ ಮೇಲ್ಮನೆಯ ನಾಲ್ಕು ಕ್ಷೇತ್ರಗಳ ಮತ ಎಣಿಕೆ ಇಂದು ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಬಸವರಾಜ ಹೊರಟ್ಟಿ ಸೇರಿದಂತೆ ಹಲವರ ಭವಿಷ್ಯ ನಿರ್ಧಾರವಾಗಲಿದೆ.

ವಾಯವ್ಯ ಪದವೀಧರ ಕ್ಷೇತ್ರ, ವಾಯವ್ಯ ಶಿಕ್ಷಕರ ಕ್ಷೇತ್ರ ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರಗಳ ಮತ ಎಣಿಕೆ ಬೆಳಗಾವಿಯ ಜ್ಯೋತಿ ಪಿಯು ಕಾಲೇಜಿನಲ್ಲಿ ನಡೆಯುತ್ತಿದೆ. ದಕ್ಷಿಣ ಪದವೀಧರರ ಕ್ಷೇತ್ರದ ಮತ ಎಣಿಕೆ ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ಮ್ಯಾನೇಜ್​ವೆುಂಟ್ ಕಾಲೇಜಿನಲ್ಲಿ ನಡೆಯುತ್ತಿದೆ.

ಇಂದು ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರ ಬೀಳಲಿದೆ. ಒಂದು ವೇಳೆ ಮೊದಲ ಪ್ರಾಶಸ್ತ್ಯ ಮತದಲ್ಲಿ ನಿಗದಿತ ಗುರಿಯನ್ನು(ಕೋಟಾ) ಯಾವುದೇ ಅಭ್ಯರ್ಥಿ ತಲುಪಲು ಸಾಧ್ಯವಾಗದಿದ್ದರೆ ದ್ವಿತೀಯ ಪ್ರಾಶಸ್ತ್ಯ ಮತಗಳ ಎಣಿಕೆಯನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಈ ಮತ ಎಣಿಕೆ ಪ್ರಕ್ರಿಯೆ ವಿಳಂಬವಾದರೆ ಫಲಿತಾಂಶವೂ ತಡವಾಗಲಿದೆ.

ವಿಧಾನ ಪರಿಷತ್ತಿನ 2 ಶಿಕ್ಷಕರು ಹಾಗೂ 2 ಪದವೀಧರ ಕ್ಷೇತ್ರಗಳಿಗೆ ಸೋಮವಾರ ಚುನಾವಣೆ ನಡೆದಿದೆ. ನಾಲ್ಕು ಕ್ಷೇತ್ರಗಳಲ್ಲಿ ಒಟ್ಟು ಶೇ. 73.25 ಮತದಾನವಾಗಿದೆ. ಈ ಚುನಾವಣೆಯಲ್ಲಿ 45 ಪುರುಷ ಹಾಗೂ 4 ಮಹಿಳೆ ಸೇರಿ 49 ಮಂದಿ ಕಣದಲ್ಲಿದ್ದಾರೆ.

                                                               ---------------------

ಮೈಸೂರು: ವಿಧಾನ ಪರಿಷತ್ ದಕ್ಷಿಣ ಪದವೀಧರರ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ ಬುಧವಾರ ಬೆಳಗ್ಗೆ ನಗರದ ಮಹಾರಾಣಿ ಕಾಲೇಜಿನ ಎಣಿಕೆ ಕೇಂದ್ರದಲ್ಲಿ ಚಾಲನೆ ದೊರೆಯಿತು.

ಪ್ರಾದೇಶಿಕ ಆಯುಕ್ತ ಪ್ರಕಾಶ್ ಹಾಗೂ ನಾಲ್ಕು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಬೆಳಗ್ಗೆ 7.30 ಕ್ಕೆ ಸ್ಟ್ರಾಂಗ್ ರೂಂನಿಂದ ಮತಗಟ್ಟೆಗಳನ್ನು ಹೊರ ತೆಗೆಯಲಾಯಿತು. ಮತಗಟ್ಟೆಗಳಲ್ಲಿರುವ ಮತಪತ್ರಗಳನ್ನು ಒಂದೆಡೆ ಸುರಿದು ಮಿಶ್ರಣ ಮಾಡಿ ತಲಾ 25 ಮತಪತ್ರಗಳನ್ನು ಒಳಗೊಂಡ ಬಂಡಲ್ ಕಟ್ಟುವ ಕಾರ್ಯ ನಡೆಯುತ್ತಿದೆ. ಮಧ್ಯಾಹ್ನ ವರೆಗೆ ಬಂಡಲ್ ಕಟ್ಟುವ ಕಾರ್ಯ ನಡೆಯುವ ಸಾಧ್ಯತೆ ಇದ್ದು, ನಂತರ ಮತ ಎಣಿಕೆ ನಡೆಯಲಿದೆ. ಎಣಿಕೆ ಕೇಂದ್ರಕ್ಕೆ ಜೆಡಿಎಸ್ ಅಭ್ಯರ್ಥಿ ಎಚ್.ಕೆ. ರಾಮು ಆಗಮಿಸಿ ಎಣಿಕೆ ಕಾರ್ಯಕ್ಕೆ ಕೈಗೊಂಡಿರುವ ಸಿದ್ಧತೆ ಪರಿಶೀಲಿಸಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಇನ್ನೂ ಆಗಮಿಸಿಲ್ಲ.

                                                            -----------------------

ಬೆಳಗಾವಿ: ವಿಧಾನ ಪರಿಷತ್ತಿನ ಮತ ಎಣಿಕೆ ಕೇಂದ್ರಕ್ಕೆ ವಾಯವ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಹಣಮಂತ‌‌ ನಿರಾಣಿ ಬೆಳಗ್ಗೆ ಆಗಮಿಸಿದರು.

ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರ ಸಮ್ಮುಖದಲ್ಲಿ ಮತ ಎಣಿಕೆ ಕೇಂದ್ರ ಸ್ಟ್ರಾಂಗ್​ ರೂಂ ತೆರೆಯಲಾಗಿದೆ.‌ ಮತಪೆಟ್ಟಿಗೆಗಳನ್ನು ಜೋಡಿಸುವ ಕಾರ್ಯ ಆರಂಭವಾಗಿದೆ. ಇಂದು ಸಂಜೆಯವರೆಗೆ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಾದ ಬಿಜೆಪಿ ಬಸವರಾಜ ಹೊರಟ್ಟಿ, ಅರುಣ ಶಹಾಪುರ, ಹಣಮಂತ‌ ನಿರಾಣಿ ಹಾಗೂ ಕಾಂಗ್ರೆಸ್ ನ ಪ್ರಕಾಶ ಹುಕ್ಕೇರಿ ಘಟಾನುಘಟಿಗಳ ಹಣೆಬರಹ ನಿರ್ಧಾರವಾಗಲಿದೆ. ತಮ್ಮ‌ ನೆಚ್ಚಿನ ನಾಯಕ ಫಲಿತಾಂಸ ವೀಕ್ಷಿಸಲು ಬೆಳಗಾವಿ ನಗರದ ಜ್ಯೋತಿ ಕಾಲೇಜಿನ ಆವರಣ ಮುಂಭಾಗಕ್ಕೆ ಹುಬ್ಬಳ್ಳಿ ಧಾರವಾಡ, ಬೆಳಗಾವಿ ವಿಜಯಪುರ, ಬಾಗಲಕೋಟೆ ಸೇರಿದಂತೆ ವಿವಿಧ ತಾಲೂಕುಗಳಿಂದ ಬೆಂಬಲಿಗರು ಆಗಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net