

ಯಲ್ಲಾಪುರ :ಹಳಿಯಾಳ ಪಟ್ಟಣದಲ್ಲಿನ ಬೀದಿ ನಾಯಿಗಳನ್ನು ಹಿಡಿಸಿದ ಅಲ್ಲಿನ ಪುರಸಭೆ ಯಲ್ಲಾಪುರ ಸಮೀಪ ತಂದು ಬಿಟ್ಟಿರುವುದು ಇಲ್ಲಿನ ಜನರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಸುಮಾರು 100 ಬೀದಿ ನಾಯಿಗಳನ್ನು ಟಾಟಾ ಏಸ್ ವಾಹನದಲ್ಲಿ ತುಂಬಿಸಿಕೊಂಡು ರಾಷ್ಟ್ರೀಯ ಹೆದ್ದಾರಿಯ ಪಕ್ಕ ಯಲ್ಲಾಪುರದ ಹಳಿಯಾಳ ಕ್ರಾಸ್ ಸಮೀಪದ ಒಳ ರಸ್ತೆಯಲ್ಲಿ ಬಿಡಲಾಗಿದೆ.
10 ನಾಯಿಗಳನ್ನಷ್ಟೆ ಸಾಗಿಸಬಹುದಾಗಿದ್ದ ಟಾಟಾ ಏಸ್ ವಾಹನದಲ್ಲಿ 80 ರಿಂದ 100 ನಾಯಿಗಳನ್ನು ಹಿಂಸಾತ್ಮಕವಾಗಿ ಸಾಗಿಸಲಾಗಿದೆ. ಅದರಲ್ಲಿ ಕೆಲವು ನಾಯಿಗಳು ರೋಗಗ್ರಸ್ತವಾಗಿವೆ.
ಅರಣ್ಯದ ಪ್ರಾಣಿಗಳಿಗೆ ಯಾವುದೇ ರೋಗ ಸೋಂಕು ಹರಡಬಾರದು ಎನ್ನುವ ಕಾರಣಕ್ಕೆ ಅರಣ್ಯದಂಚಿನ ಸಾಕು ನಾಯಿಗಳು ಇನ್ನಿತರ ಜಾನುವಾರುಗಳಿಗೆ ವ್ಯಾಕ್ಸಿನೇಷನ್ ಮಾಡಿಸಲಾಗುತ್ತದೆ. ಆದರೆ ಬೀದಿಗಳಲ್ಲಿ ಸುತ್ತಿ ತಿನ್ನುವ ನಾಯಿಗಳನ್ನು ಅರಣ್ಯ ಪ್ರದೇಶದಲ್ಲಿ ಬಿಟ್ಟಾಗ ಸೋಂಕು ಇದ್ದಲ್ಲಿ ಅರಣ್ಯದ ಪ್ರಾಣಿಗಳಿಗೆ ಹರಡುವ ಭೀತಿಯೂ ಇದೆ.
ಯಲ್ಲಾಪುರ ತಾಲೂಕಿನಲ್ಲಿ ಇತ್ತೀಚೆಗೆ ಚಿರತೆ, ಹುಲಿ ಇತರ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ನಾಯಿಗಳು ಕಾಡುಪ್ರಾಣಿಗಳಿಗೆ ಆಹಾರವಾಗುವ ಅಪಾಯವಿದೆ. ಕಾಡಿನ ಸುತ್ತಮುತ್ತ ಇರುವ ಊರುಗಳಿಗೆ ಬೀದಿನಾಯಿಗಳು ಹೋಗಿ ಸಮಸ್ಯೆ ಉಂಟು ಮಾಡಬಹುದೆಂಬ ಆತಂಕವೂ ಎದುರಾಗಿದೆ.
ಸ್ಪಷ್ಟನೆ ಕೇಳಿ ನೋಟಿಸ್:ಹಳಿಯಾಳ ಪಟ್ಟಣದಲ್ಲಿರುವ ಬೀದಿನಾಯಿಗಳನ್ನು ಹಿಂಸಾತ್ಮಕವಾಗಿ ಹಿಡಿದು ಸಾಗಣೆ ಮಾಡಿ ಕಾಡಿನಲ್ಲಿ ಬಿಟ್ಟಿರುವ ಕುರಿತು ಬೆಂಗಳೂರಿನಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯವಾಣಿಗೆ ಹಳಿಯಾಳ ಪಟ್ಟಣದ ಸ್ಥಳೀಯ ನಿವಾಸಿಗರು ಕರೆ ಮಾಡಿ ದೂರು ನೀಡಿದ್ದಾರೆ. ನಾಯಿಗಳನ್ನು ಹಿಂಸಾತ್ಮಕವಾಗಿ ಹಿಡಿದು ಸಾಗಾಣಿಕೆ ಮಾಡಿ ಕಾಡಿನಲ್ಲಿ ಬಿಟ್ಟಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಬೀದಿ ನಾಯಿಗಳಿಗೆ ಮತ್ತು ದನಗಳಿಗೆ ಸ್ಥಳೀಯ ಆಡಳಿತದ ವತಿಯಿಂದ ನೀರು ಮತ್ತು ಆಹಾರವನ್ನು ಒದಗಿಸಿ ಅವುಗಳಿಗೆ ಆಶ್ರಯ ನೀಡಬೇಕು. ಆದರೆ ಹಳಿಯಾಳ ಪುರಸಭೆ ಅಮಾನವೀಯತೆಯಿಂದ ನಡೆದುಕೊಂಡಿರುವ ಬಗೆಗೆ ದೂರಿನಲ್ಲಿ ಆಕ್ಷೇಪಿಸಲಾಗಿದೆ. ಬೆಂಗಳೂರು ಕಚೇರಿಯಿಂದ ಹಳಿಯಾಳ ಪಶು ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಪಡೆದು, ವರದಿ ನೀಡುವಂತೆ ಆದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅತ್ಯಂತ ಕ್ರೂರವಾಗಿ ನಾಯಿಗಳನ್ನು ಅರಣ್ಯಕ್ಕೆ ಸಾಗಿಸಿರುವ ಕುರಿತು ಹಳಿಯಾಳದ ಪಶುವೈದ್ಯಾಧಿಕಾರಿಗಳು ಪುರಸಭೆಗೆ ಸ್ಪಷ್ಟನೆ ಕೇಳಿ ನೋಟಿಸ್ ನೀಡಿದ್ದಾರೆ.
ಹಳಿಯಾಳದ ಪತ್ರಕರ್ತ ಯೋಗರಾಜ ಎಸ್ ಕೆ ಅವರು ಮನೇಕಾ ಗಾಂಧಿಯವರ ಪೀಪಲ್ ಫಾರ್ ಅನಿಮಲ್ ಮತ್ತು ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾಗೆ ದೂರಿದ್ದಾರೆ.
"ಬೀದಿನಾಯಿಗಳನ್ನು ಯಲ್ಲಾಪುರದ ಕಾಡಿನಲ್ಲಿ ಬಿಟ್ಟಿರುವ ಬಗೆಗೆ ಗಮನಕ್ಕೆ ಬಂದಿದೆ. ಈ ಕುರಿತು ಹಳಿಯಾಳದ ಪುರಸಭೆಯಲ್ಲಿ ವಿಚಾರಿಸಿ ಸೂಕ್ತ ಕ್ರಮಕ್ಕೆ ಮುಂದಾಗುತ್ತೇವೆ" ಎಸ್.ಜಿ.ಹೆಗಡೆ, ಡಿಸಿಎಫ್ ಯಲ್ಲಾಪುರ
|