

ಕನಕಪುರ : ನಗರದ ರೂರಲ್ ಕಾಲೇಜ್ ವಿದ್ಯಾರ್ಥಿಗಳು ಮಡಕೇರಿಯಲ್ಲಿ ಧೂಮಪಾನ-ಮದ್ಯಪಾನ ಮಾಡಿ ಮೋಜು ಮಸ್ತಿ ಮಾಡಿದ್ದು, ಈ ಬಗ್ಗೆ ಮಕ್ಕಳ ಹಕ್ಕುಗಳ ಆಯೋಗದಲ್ಲಿ ದೂರು ದಾಖಲಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ರೂರಲ್ ಕಾಲೇಜಿನಿಂದ ಪ್ರವಾಸಕ್ಕೆಂದು ಮಡಿಕೇರಿಗೆ ತೆರಳಿ ವಾಪಸ್ಸಾಗುತ್ತಿದ್ದ ವೇಳೆ ಉಪನ್ಯಾಸಕರು ಸೇರಿ ವಿದ್ಯಾರ್ಥಿಗಳು ಮೋಜು-ಮಸ್ತಿ ಮಾಡಿ, ಅಮಲಿನ ವಾತಾವರಣ ಸೃಷ್ಟಿಸಿರುವ ವಿಡಿಯೋ ವೈರಲ್ ಆಗಿದೆ. ನಗರದ ರೂರಲ್ ಪದವಿ ಪೂರ್ವ ಕಾಲೇಜಿನಿಂದ ಅ.5ರಂದು ವಿದ್ಯಾರ್ಥಿಗಳು ಪ್ರವಾಸಕ್ಕೆಂದು ತೆರಳಿದ್ದರು. ಪ್ರವಾಸ ಮುಗಿಸಿಕೊಂಡು ವಾಪಸ್ಸು ಬರುವ ವೇಳೆ ಕಾಲೇಜಿನ ಉಪನ್ಯಾಸಕರಾದ ವಿಶ್ವನಾಥ್, ಆರ್.ಲಕ್ಷ್ಮೀಶ್ ಹಾಗೂ ಎಚ್.ಎನ್.ನಾಗೇಶ್ ಎಂಬುವವರು ಅ.9ರಂದು ರಾತ್ರಿ ಮಡಿಕೇರಿ ಸಮೀಪದ ಹೋಟೆಲ್‌ನಲ್ಲಿ ವಸತಿಗಾಗಿ ಕೊಠಡಿ ವ್ಯವಸ್ಥೆ ಮಾಡಿದ್ದರು. ಮಧ್ಯರಾತ್ರಿಯ ವೇಳೆ ಮಧ್ಯಪಾನ ಮಾಡಿದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ನೃತ್ಯ ಮಾಡಿ ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ. ಇದನ್ನು ಕೆಲವರು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಉಪನ್ಯಾಸಕರೇ ಅನುಚಿತವಾಗಿ ವರ್ತಿಸಿದ್ದಾರೆಂದು ಹೇಳಲಾಗಿದೆ. ಈ ಸಂಬಂಧ ಕೆಲ ವಿದ್ಯಾರ್ಥಿಗಳು ಉಪನ್ಯಾಸಕಿಯರಾದ ಉಷಾರಾಣಿ, ಮಂಜುಶ್ರೀ, ಕವಿತಾ ಅವರ ಬಳಿ ದೂರು ನೀಡಿದ್ದರೂ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಪ್ರವಾಸದಿಂದ ವಾಪಸ್ಸು ಬಂದ ಕೆಲ ನೊಂದ ವಿದ್ಯಾರ್ಥಿಗಳು ರಾಜ್ಯ ಮಹಿಳಾ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆಂದು ತಿಳಿದು ಬಂದಿದೆ.
ಈ ಸಂಬಂಧ ಮಕ್ಕಳ ಹಕ್ಕುಗಳ ಆಯೋಗವು ಅ.15 ರಂದು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ನೋಟೀಸ್ ನೀಡಿ ಈ ನೊಂದ ವಿದ್ಯಾರ್ಥಿಗಳ ಅರ್ಜಿಯ ಕುರಿತು ಕ್ರಮ ಕೈಗೊಂಡು, 7 ದಿನಗಳೊಳಗಾಗಿ ವರದಿ ನೀಡುವಂತೆ ಸೂಚಿಸಿದ್ದಾರೆ.
ನಮ್ಮ ಕಾಲೇಜಿನಲ್ಲಿ ಪ್ರವಾಸಕ್ಕೆಂದು ತೆರಳಿದ ಉಪನ್ಯಾಸಕರು ಹಾಗೂ ಸಂಸ್ಥೆಯಿಂದ ಹೊರಹಾಕಿದ ಉಪನ್ಯಾಸಕರ ಗುಂಪುಗಳು ತಮ್ಮವೈಯಕ್ತಿಕ ದುರುದ್ದೇಶದಿಂದ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕಾಲೇಜಿನ ಪ್ರಾಂಶುಪಾಲರು ತನಿಖೆ ಮಾಡಿ ವರದಿ ನೀಡಿದಾಗ ತಪ್ಪುಕಂಡು ಬಂದಲ್ಲಿ ನಮ್ಮ ವ್ಯಾಪ್ತಿಗೆ ಸಂಬಂಧಿಸಿದಂತೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಕಾಲೇಜಿನಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸದೆ ಕಾಲಹರಣ ಮಾಡುವ ಕೆಲವರನ್ನು ಬೇರೆ ಶಾಖೆಗಳಿಗೆ ವರ್ಗಾವಣೆ ಮಾಡಲಾಗಿದೆ. ಇಂತಹವರು ಕಾಲೇಜಿಗೆ ಕೆಟ್ಟ ಹೆಸರು ತರಲು ಈ ರೀತಿ ವರ್ತಿಸಿದ್ದಾರೆ.- ಶ್ರೀಕಂಠು, ಅಧ್ಯಕ್ಷ ರೂರಲ್ ಎಜುಕೇಷನ್ ಸೊಸೈಟಿ