VIDEO| BMTC ಬಸ್​ನಿಂದ ಸರಣಿ ಅಪಘಾತ; ಬೈಕ್​-ಕಾರು ಜಖಂ, ಇಬ್ಬರಿಗೆ ಗಂಭೀರ ಗಾಯ

BMTC Accident
Published on

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಬಿಎಂಟಿಸಿ ಬಸ್ಸೊಂದು ಕಾರು, ಬೈಕುಗಳಿಗೆ ಗುದ್ದಿ ಸರಣಿ ಅಪಘಾತ ಮಾಡಿರುವ ಘಟನೆ ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆಯಲ್ಲಿ ನಡೆದಿದೆ. ಬಸ್​ನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆಯಾಗಿದ್ದು, ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸೋಮವಾರ (ಆಗಸ್ಟ್​ 12) ಬೆಳಗ್ಗೆ 9.25ರ ಸುಮಾರಿಗೆ ಹೆಬ್ಬಾಳ ಫ್ಲೈಓವರ್ ಮೇಲೆ ನಿಧಾನ ಗತಿಯಲ್ಲಿ ಏರ್​ಪೋರ್ಟ್​​ನಿಂದ ಹೆಚ್ಎಸ್ಆರ್ ಲೇಔಟ್ ಕಡೆ ಬಸ್​​ ಹೋಗುತ್ತಿತ್ತು. ಇದೇ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್​ ಮುಂಬದಿ ನಿಂತಿದ್ದ ನಾಲ್ಕು ಬೈಕ್​ಗಳು ಹಾಗೂ 4 ಕಾರಿಗೆ ಡಿಕ್ಕಿ ಹೊಡೆದಿದೆ. ಬಸ್​ ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆಯಲ್ಲಿ ಸವಾರರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬಿಎಂಟಿಸಿ ವೋಲ್ವೋ ಬಸ್ ಸಂಖ್ಯೆ KA-57F-1794 ಎಂದು ಗುರುತಿಸಲಾಗಿದೆ. ಇದರಿಂದ ಒಬ್ಬ ವಾಹನ ಸವಾರನ ಕಾಲಿಗೆ ತೀವ್ರವಾಗಿ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೋರ್ವ ಬೈಕ್​ ಸವಾರನ ಆರೋಗ್ಯ ಸ್ಥಿತಿ ಇನ್ನಷ್ಟೇ ತಿಳಿಯಬೇಕಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಾಗೂ ಬಿಎಂಟಿಸಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಇದಕ್ಕೆ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿವೆ. ಕೆಲವರು ವಾಹನ ಸವಾರರು ಓವರ್‌ಟೇಕ್ ಮಾಡಿದ್ದಾರೆ ಎಂದು ಹೇಳಿದರೆ, ಇನ್ನೂ ಕೆಲವರು ಬಿಎಂಟಿಸಿ ಬಸ್‌ ಚಾಲಕನದ್ದೇ ತಪ್ಪು ಎಂದಿದ್ದಾರೆ. ಇನ್ನೂ ಕೆಲವರು ಟ್ರಾಫಿಕ್ ಜಾಮ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net