

ಬೆಂಗಳೂರು: ಇಂಡೋ- ಪಾಕ್ ಯುದ್ಧದ ಗೆಲುವು ಸಾಧಿಸಿದ ಸ್ಮರಣಾರ್ಥ ಪ್ರತಿ ವರ್ಷ ಡಿಸೆಂಬರ್ 16ರಂದು ಆಚರಿಸುವ ‘ವಿಜಯ ದಿನಸ್; ಅನ್ನು ಸೋಮವಾರ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಆಚರಿಸಲಾಯಿತು.
ಮಿಲಿಟರಿ ಸ್ಮಾರಕಕ್ಕೆ ಪುಸ್ಪನಮನ ಸಲ್ಲಿಸುವ ಮೂಲಕ ಹುತಾತ್ಮ ಯೋಧರನ್ನು ಸ್ಮರಿಸಲಾಯಿತು. ಈ ವೇಳೆ ವಂದೇ ಮಾತರಂ, ಭಾರತ್ ಮಾತಾಕಿ, ಅಮರ್ ರಹೇ ಅಮರ್ ರಹೇ.... ೋಷಣೆಗೆಗಳು ಮೊಳಗಿದವು.
ನಿವೃತ್ತ ಏರ್ ಕಮೋಡರ್ ಎಂ.ಕೆ. ಚಂದ್ರಶೇಖರ್, ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಅವರ ತಂದೆ ಶಿವರಾಜ್, ಹುತಾತ್ಮ ಯೋಧರ ಕುಟುಂಬ ಸದಸ್ಯರಾದ ಸಲ್ಮಾ ಗೌರಿ, ಆಶಾ ನಾಗೇಶ್ ಸೇರಿ ಹಲವರು ಪಾಲ್ಗೊಂಡಿದ್ದರು.
ಸರ್ಕಾರದ ವತಿಯಿಂದ ಒಳಾಡಳಿತ ಇಲಾಖೆ ಕಾರ್ಯದರ್ಶಿ ಎಸ್. ರವಿ, ಸೇನಾ ಅಧಿಕಾರಿಗಳಾದ ವಿಂಗ್ ಕಮಾಂಡರ್ ರಾಕೇಶ್, ಕರ್ನಲ್ ರಾಜೇಶ್ ಚೌದರಿ ಸೇರಿ ಹಲವು ಅಧಿಕಾರಿ ವರ್ಗವು ವಿಜಯ ದಿವಸ್‌ನಲ್ಲಿ ಪಾಲ್ಗೊಂಡು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.
ಪಾಕಿಸ್ತಾನದ ವಿರುದ್ಧದ ಗೆಲುವನ್ನು ದೇಶ ಮಹತ್ವದ ದಿನವನ್ನಾಗಿ ಆಚರಿಸುತ್ತಾ ಬರುತ್ತಿದೆ. 1999ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯದ ಗೌರವಾರ್ಥವಾಗಿ ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ ದಿನವನ್ನು ಆಚರಿಸಲಾಗುತ್ತದೆ. ಹಾಗೇ ಡಿಸೆಂಬರ್ 16ರಂದು 1971ರಲ್ಲಿನ ಪಾಕಿಸ್ತಾನದ ವಿರುದ್ಧದ ಗೆಲುವನ್ನು ‘ವಿಜಯ್ ದಿವಸ್’ ಆಚರಿಸುತ್ತಾ ಬರಲಾಗಿದೆ. ಈ ದಿನವು ಭಾರತೀಯ ಇತಿಹಾಸದಲ್ಲಿ ಅತ್ಯುನ್ನತ ಘಟ್ಟವಾಗಿದ್ದು, ದೇಶವು ಸಶಸ್ತ್ರ ಪಡೆಗಳ ಶೌರ್ಯ ಮತ್ತು ತ್ಯಾಗಕ್ಕೆ ಗೌರವ ಸಲ್ಲಿಸುವ ಮೂಲಕ ಸಂಭ್ರಮಿಸಲಾಗುತ್ತದೆ ಎಂದು ನಿವೃತ್ತ ಸೈನಿಕರು ಸ್ಮರಿಸಿದರು.