

ವಿರಾಜಪೇಟೆ:ತಾಲೂಕಿನ ಪಶು ಆಸ್ಪತ್ರೆಗಳಲ್ಲಿ ಕಾಯಂ ವೈದ್ಯರು ಸೇರಿದಂತೆ ಸಹಾಯಕರು ಮತ್ತು ಸಿಬ್ಬಂದಿ ಕೊರತೆ ಎದುರಾಗಿದ್ದು, ಇದರಿಂದ ಸಕಾಲದಲ್ಲಿ ಪಶುಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ.
ತಾಲೂಕಿನಲ್ಲಿ ಪಶು ಸಂಗೋಪನೆ ಪ್ರಮಾಣ ಕುಸಿಯುತ್ತಿದ್ದರೂ ಗ್ರಾಮೀಣ ಭಾಗಗಳಲ್ಲಿ ರೈತರು ಇಂದಿಗೂ ದನ ಹಾಗೂ ಎಮ್ಮೆಗಳನ್ನು ಸಾಕುತ್ತಿದ್ದಾರೆ. ಇದರೊಂದಿಗೆ ಆಡು, ಕುರಿ, ಮೇಕೆ, ನಾಯಿ, ಬೆಕ್ಕುಗಳಂತಹ ಸಾಕು ಪ್ರಾಣಿಗಳಿಗೆ ಆರೋಗ್ಯ ಸಮಸ್ಯೆ ಉಂಟಾದರೆ ಚಿಕಿತ್ಸೆಗಾಗಿ ಪಶು ಆಸ್ಪತ್ರೆಗೆ ಹೋದರೆ ಅಲ್ಲಿ ಸಿಬ್ಬಂದಿಯೇ ಇರುವುದಿಲ್ಲ.
ವಿರಾಜಪೇಟೆ ತಾಲೂಕಿನಲ್ಲಿ 2 ಪಶು ಆಸ್ಪತ್ರೆ, 6 ಪಶು ಚಿಕಿತ್ಸಾಲಯ, 3 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು ಒಟ್ಟು 11 ಚಿಕಿತ್ಸಾಲಯಗಳಿವೆ. ಇದಕ್ಕೆ ವೈದ್ಯರಿಂದ ಹಿಡಿದು ಡಿ ದರ್ಜೆ ನೌಕರರವರೆಗೆ ಒಟ್ಟು 48 ಸಿಬ್ಬಂದಿ ಬೇಕು. ಆದರೆ ವರ್ಗಾವಣೆ, ವಯೋನಿವೃತ್ತಿ ಕಾರಣದಿಂದ ಬಹುತೇಕ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಎದುರಾಗಿದೆ.
ಬೆರಳೆಣಿಕೆ ಸಿಬ್ಬಂದಿ: ತಾಲೂಕಿನ ಪಶು ಆಸ್ಪತ್ರೆಗಳಲ್ಲಿ ಕೇವಲ 8 ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿರಾಜಪೇಟೆ ಪಶು ಆಸ್ಪತ್ರೆಯಲ್ಲಿ 11 ಹುದ್ದೆಗಳ ಪೈಕಿ 5 ಸಿಬ್ಬಂದಿ, ಉಳಿದ 6 ಹುದ್ದೆಗಳು ಖಾಲಿ ಇದೆ. ಪಶು ಆಸ್ಪತ್ರೆ ಅಮ್ಮತ್ತಿಯಲ್ಲಿ 4 ಹುದ್ದೆಗಳ ಪೈಕಿ ಒಬ್ಬರು ಸಿಬ್ಬಂದಿ ಇದ್ದು, ಉಳಿದ 3 ಹುದ್ದೆ ಖಾಲಿ ಇದೆ. ಸಿದ್ದಾಪುರದಲ್ಲಿ 4ರ ಪೈಕಿ ಒಬ್ಬರು, ಪಾಲಿಬೆಟ್ಟದಲ್ಲಿ 4 ಹುದ್ದೆಗಳ ಪೈಕಿ ಒಬ್ಬ ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಪಶು ಚಿಕಿತ್ಸಾಲಯ ಕಾಕೋಟುಪರಂಬಿನಲ್ಲಿ 4 ಹುದ್ದೆಗಳ ಪೈಕಿ ಒಬ್ಬ ಸಿಬ್ಬಂದಿ, ಕೆದಮುಳ್ಳೂರಿನಲ್ಲಿ ನಾಲ್ಕು ಹುದ್ದೆಗಳ ಪೈಕಿ ಒಬ್ಬರ ಸಿಬ್ಬಂದಿ ಇದ್ದು, ಮೂರು ಖಾಲಿ ಇದೆ. ಪಶು ಚಿಕಿತ್ಸಾಲಯ ಕಡಂಗ, ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಹೊಸೂರು, ಬಿಟ್ಟಂಗಾಲ, ಕಣ್ಣಂಗಾಲದಲ್ಲಿ ಸಿಬ್ಬಂದಿಯೇ ಇಲ್ಲ. ಇದರಿಂದಾಗಿ ತಾಲೂಕಿನಾದ್ಯಂತ ಸೂಕ್ತ ಸಮಯದಲ್ಲಿ ಪಶುಗಳಿಗೆ ಚಿಕಿತ್ಸೆ ಕೊಡಿಸಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಕ್ಷೇತ್ರ ಕಾರ್ಯಕ್ಕೆ ಅಥವಾ ಸರ್ಕಾರಿ ಲಸಿಕಾ ಯೋಜನೆಗಳಿಗಾಗಿ ಇರುವಂತಹ ಸಿಬ್ಬಂದಿ ಮನೆ ಮನೆಗೆ ತೆರಳಿದರೆ ಆಸ್ಪತ್ರೆಗಳಲ್ಲಿ ಯಾರೂ ಇಲ್ಲದೆ ಪ್ರಾಣಿಗಳಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗುತ್ತಿಲ್ಲ.
ಕೊಡಗಿಗೆ ಬರುತ್ತಿಲ್ಲ ವೈದ್ಯರು: ಈ ಹಿಂದೆ ಕೊಡಗು ಜಿಲ್ಲೆಯಲ್ಲಿ ಕೆಲಸ ಮಾಡಲು ಆಸಕ್ತಿಯಿಂದ ವೈದ್ಯರು ಹಾಗೂ ಸಿಬ್ಬಂದಿ ಬರುತ್ತಿದ್ದರು. ಆದರೆ ಕೆಲ ವರ್ಷಗಳ ಹಿಂದೆ ಸಂಭವಿಸಿದ ಭೂ ಕುಸಿತದಿಂದ ಬಹುತೇಕ ಸಿಬ್ಬಂದಿ ಕೊಡಗಿನತ್ತ ಮುಖ ಮಾಡುತ್ತಿಲ್ಲ. ಒಂದು ವೇಳೆ ಕೊಡಗಿಗೆ ನಿಯೋಜನೆಗೊಂಡರೆ ಆದಷ್ಟು ಬೇಗ ಇಲ್ಲಿಂದ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ತಾಲೂಕಿನಲ್ಲಿ ಇಷ್ಟೊಂದು ಹುದ್ದೆಗಳು ಖಾಲಿ ಉಳಿದಿದೆ.
ಸಂಚಾರ ಚಿಕಿತ್ಸಾಲಯ ಸ್ತಬ್ಧ: ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಟೋಲ್ ಫ್ರೀ ಸಂಖ್ಯೆ 1962ಕ್ಕೆ ಕರೆ ಮಾಡಿ ಆಂಬುಲೆನ್ಸ್ ಸೌಲಭ್ಯ ಪಡೆದುಕೊಳ್ಳಬಹುದು. ಇದು ಆಸ್ಪತ್ರೆಯ ಸೇವಾ ಅವಧಿಯಲ್ಲಿ ಮಾತ್ರ ಲಭ್ಯವಿರುತ್ತದೆ. ವಿರಾಜಪೇಟೆ ತಾಲೂಕಿನಲ್ಲಿ ಸಂಚಾರ ಪಶು ಚಿಕಿತ್ಸಾಲಯ ಇದ್ದು, ವೈದ್ಯರ ಕೊರತೆ ಕಾರಣದಿಂದ ತುರ್ತು ಸಂದರ್ಭದಲ್ಲಿ ರೈತರ ಮನೆ ಬಾಗಿಲಿಗೆ ಹೋಗಿ ಶಸ್ತ್ರಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಚಾಲಕರು ಹಾಗೂ ಕಾಂಪೌಂಡರ್ ಇದ್ದು, ವೈದ್ಯರಿಲ್ಲದ ಕಾರಣಕ್ಕಾಗಿ ಈ ಯೋಜನೆ ಸದ್ಯದ ಮಟ್ಟಿಗೆ ವಿಫಲವಾಗಿದೆ. ಸಂಚಾರ ಶಸ್ತ್ರಚಿಕಿತ್ಸಾ ವಾಹನಕ್ಕೆ ವೈದ್ಯರು ನಿಯೋಜನೆಯಾದರೆ ಸದ್ಯಕ್ಕಿರುವಂತಹ ಒತ್ತಡ ಕಡಿಮೆಯಾಗುತ್ತದೆ. ಗ್ರಾಮೀಣ ಪ್ರದೇಶದ ಜಾನುವಾರುಗಳಿಗೆ ಇದರ ಮೂಲಕ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂಬುದು ಪಶು ಚಿಕಿತ್ಸಾಲಯದ ಸಿಬ್ಬಂದಿಯ ಅಭಿಪ್ರಾಯ.
ಮಾನವೀಯತೆ ದೃಷ್ಟಿಯಿಂದ ಕೆಲಸ
ವಿರಾಜಪೇಟೆಯ ಪಶು ಆಸ್ಪತ್ರೆಯ ಸಿಬ್ಬಂದಿ ಕರ್ತವ್ಯದ ಸಮಯದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿಲ್ಲ. ಇದರೊಂದಿಗೆ ಬೆಳಗಿನ ಜಾವ ಕರ್ತವ್ಯಕ್ಕೆ ಹಾಜರಾಗುವ ಮೊದಲು ಹಾಗೂ ಸಂಜೆ ಕೆಲಸ ಮುಗಿದ ಬಳಿಕ ತುರ್ತು ಸಂದರ್ಭ ರೈತರ ಮನೆಗೆ ಬಳಿಗೆ ಹೋಗಿ ಚಿಕಿತ್ಸೆ ನೀಡುವ ಅನಿವಾರ್ಯತೆ ಇರುವ ಸಿಬ್ಬಂದಿಗೆ ಎದುರಾಗಿದೆ. ಸರ್ಕಾರಿ ರಜೆ ಹಾಗೂ ಭಾನುವಾರವೂ ಕೆಲಸ ಮಾಡುವಂತಹ ಒತ್ತಡ ಇದೆ.
ಪ್ರತಿ ವರ್ಷ ಸರ್ಕಾರದ ವತಿಯಿಂದ ನಡೆಸಲಾಗುವ ಚರ್ಮಗಂಟು ರೋಗ ಹಾಗೂ ಕಾಲುಬಾಯಿ ಜ್ವರ ನಿರ್ಬಂಧ ಲಸಿಕೆಯನ್ನು ಹಾಕುವ ಸಂದರ್ಭ ಎಲ್ಲ ಸಿಬ್ಬಂದಿ ಕ್ಷೇತ್ರ ಕಾರ್ಯಕ್ಕೆ ಹೋಗುವುದರಿಂದ ಲಸಿಕೆ ನೀಡುವ ಎರಡು ತಿಂಗಳು ಆಸ್ಪತ್ರೆಗಳ ನಿರ್ವಹಣೆ ಸವಾಲಿನ ಕೆಲಸವಾಗುತ್ತಿದೆ.
ಕೆಲವೆಡೆ ಸುಸಜ್ಜಿನ ಕಟ್ಟಡಗಳಿವೆ. ಔಷಧ ದಾಸ್ತಾನು ಇದೆ. ಆದರೆ ಜಾನುವಾರುಗಳನ್ನು ಪರೀಕ್ಷಿಸಿ ಔಷಧ ಕೊಡುವವರು ಯಾರು ಇಲ್ಲ. ಇದರಿಂದ ಸರ್ಕಾರದ ಯೋಜನೆಗಳನ್ನು ಸರಿಯಾದ ಸಮಯದಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ. ಸದ್ಯದ ಮಟ್ಟಿಗಾದರೂ ಪ್ರತಿ ಆಸ್ಪತ್ರೆಯಲ್ಲಿ ಒಬ್ಬರು ಸಿಬ್ಬಂದಿ ನೇಮಕಗೊಂಡರೂ ರೈತರಿಗೆ ಅಲ್ಪ ಮಟ್ಟಿನ ಮಾಹಿತಿ ಹಾಗೂ ವೈದ್ಯರ ಮಾರ್ಗದರ್ಶನದ ಮೇರೆಗೆ ಒಂದಷ್ಟು ಔಷಧೋಪಚಾರಗಳನ್ನು ನೀಡಲು ಸಾಧ್ಯವಾಗುತ್ತದೆ.