ಜಿಲ್ಲೆಯಲ್ಲಿ ವೆರ್ಟನರಿ ಡಾಕ್ಟರ್ ವರಿ

vetrnary
Published on

ಶಂಕರ ಶರ್ಮಾ ಕುಮಟಾ

ವೈದ್ಯರ ಕೊರತೆಯಿಂದ ಜಿಲ್ಲೆಯ ಪಶು ವೈದ್ಯಕೀಯ ಕ್ಷೇತ್ರ ತೀವ್ರವಾಗಿ ಬಳಲುತ್ತಿದೆ. ಜತೆಗೆ ಇಲ್ಲಿನ ಯುವಕರು ಬಿವಿಎಸ್​ಸಿ ಪದವಿ ಪಡೆಯಲು ಹಿಂದೇಟು ಹಾಕುತ್ತಿರುವುದು ಭವಿಷ್ಯದಲ್ಲಿ ಈ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಮುನ್ಸೂಚನೆಯಿದೆ.

ಜಿಲ್ಲೆಯಲ್ಲಿ 3.36 ಲಕ್ಷ ದನ ಕರುಗಳು, 73 ಸಾವಿರ ಎಮ್ಮೆಗಳು ಸೇರಿ 4.10 ಲಕ್ಷ ಜಾನುವಾರುಗಳಿವೆ. ಅವುಗಳ ಅನಾರೋಗ್ಯ ಸಮಸ್ಯೆ ನಿಭಾಯಿಸಲು ಹಾಗೂ ಕೃತಕ ಗರ್ಭಧಾರಣೆಗೆ ಜಿಲ್ಲೆಯಲ್ಲಿ ಖಾಸಗಿ ಪಶು ವೈದ್ಯ ದವಾಖಾನೆಗಳು ಹಾಗೂ ವೈದ್ಯರ ಸಂಖ್ಯೆ ಕಡಿಮೆ. ಹೈನುಗಾರರು ಸರ್ಕಾರಿ ವ್ಯವಸ್ಥೆ ನಂಬಿಕೊಳ್ಳುವುದು ಅನಿವಾರ್ಯ. ಆದರೆ, ಇಲಾಖೆಯಲ್ಲಿ ಮುಕ್ಕಾಲು ಭಾಗ ಹುದ್ದೆಗಳು ಖಾಲಿ ಇದ್ದು ಸಮಸ್ಯೆ ಗಂಭೀರವಾಗಿದೆ.

ತೀವ್ರ ಕೊರತೆ: ಜಿಲ್ಲೆಯಲ್ಲಿ 114 ಸರ್ಕಾರಿ ಪಶು ವೈದ್ಯಕೀಯ ಸಂಸ್ಥೆಗಳಿವೆ. 114 ಪಶು ವೈದ್ಯಕೀಯ ಅಧಿಕಾರಿಗಳು ಕಾರ್ಯನಿರ್ವಹಿಸಬೇಕಿತ್ತು. ಆದರೆ, ಇರುವುದು 25 ಜನ ಮಾತ್ರ. 89 ಪಶು ವೈದ್ಯ ಹುದ್ದೆಗಳು ಖಾಲಿ ಇವೆ. ಒಬ್ಬ ವೈದ್ಯ ನಾಲ್ಕೈದು ಆಸ್ಪತ್ರೆಗಳ ಪ್ರಭಾವ ವಹಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಒಂದು ಆಸ್ಪತ್ರೆಗೆ ವೈದ್ಯರು ವಾರಕ್ಕೊಂದು ದಿನ ಭೇಟಿ ನೀಡುವುದೂ ಕಷ್ಟ ಎಂಬ ಪರಿಸ್ಥಿತಿ ಇದೆ. ಹಲವು ಆಸ್ಪತ್ರೆಗಳು ಬಾಗಿಲು ತೆರೆಯುವುದೇ ಅಪರೂಪವಾಗಿದೆ.

ಜಿಲ್ಲೆಯಲ್ಲಿರುವ 15 ಸಹಾಯಕ ನಿರ್ದೇಶಕ ಹುದ್ದೆಗಳಲ್ಲಿ ಐವರು ಮಾತ್ರ ಕರ್ತವ್ಯದಲ್ಲಿದ್ದು, 10 ಹುದ್ದೆಗಳು ಖಾಲಿ ಇವೆ. ಸಹಾಯಕ ನಿರ್ದೇಶಕರು ಆಡಳಿತದ ಜತೆ ಪಶು ವೈದ್ಯಕೀಯ ಕಾರ್ಯವನ್ನೂ ಮಾಡಬೇಕಾದ ಅನಿವಾರ್ಯತೆ ಇದೆ. ಜಾನುವಾರು ಅಭಿವೃದ್ಧಿ ಅಧಿಕಾರಿಗಳಲ್ಲಿ 12 ರಲ್ಲಿ 7, ಜಾನುವಾರು ಅಧಿಕಾರಿಗಳ ಹುದ್ದೆ 11 ರಲ್ಲಿ 2, ಹಿರಿಯ ಪಶು ವೈದ್ಯಕೀಯ ಪರೀಕ್ಷಕರ 47 ಹುದ್ದೆಗಳಲ್ಲಿ 18, ಪಶು ವೈದ್ಯಕೀಯ ಪರೀಕ್ಷಕರ 75 ರಲ್ಲಿ 54, ಪಶು ವೈದ್ಯಕೀಯ ಸಹಾಯಕರ 70 ಹುದ್ದೆಗಳಲ್ಲಿ 39ಹುದ್ದೆಗಳು ಖಾಲಿ ಇವೆ. ಒಟ್ಟಾರೆ ಜಿಲ್ಲೆಯ ಪಶು ವೈದ್ಯಕೀಯ ಇಲಾಖೆಯಲ್ಲಿ 617 ಮಂಜೂರು ಹುದ್ದೆಗಳಿದ್ದರೆ ಅದರಲ್ಲಿ 445 ಖಾಲಿಯೇ ಇದೆ.

ಬಿವಿಎಸ್​ಸಿಗೆ ಜಿಲ್ಲೆಯವರ ಹಿಂದೇಟು: ಬೆಂಗಳೂರು, ಬೀದರ್, ಶಿವಮೊಗ್ಗ, ಹಾಸನ ಹಾಗೂ ಗದಗ ಜಿಲ್ಲೆಯಲ್ಲಿ ಪಶುವೈದ್ಯಕೀಯ ಪದವಿ ಕಾಲೇಜ್ ಇದೆ. ಪ್ರತಿ ವರ್ಷ ಕನಿಷ್ಠ 250 ಜನ ಬ್ಯಾಚುಲರ್ ಆಫ್ ವೆಟರ್ನರಿ ಸೈನ್ಸ್ (ಬಿವಿಎಸ್​ಸಿ) ಪದವಿ ಮುಗಿಸಿ ಹೊರ ಬರುತ್ತಿದ್ದಾರೆ. ಆದರೆ, ಜಿಲ್ಲೆಯ ಪ್ರತಿಭಾವಂತ ಯುವಕರು ಈ ಪದವಿ ಪಡೆಯಲು ಹಿಂಜರಿಯುತ್ತಿದ್ದಾರೆ. ಬಿವಿಎಸ್​ಸಿಗೆ ಖಾಸಗಿ ಕಾಲೇಜ್​ಗಳಿಲ್ಲ. ಇದ್ದ ಸರ್ಕಾರಿ ಕಾಲೇಜ್​ಗಳಲ್ಲಿ ಸೀಟುಗಳ ಸಂಖ್ಯೆಯೂ ಕಡಿಮೆ ಇದ್ದು, ಪ್ರವೇಶಕ್ಕೆ ತೀವ್ರ ಸ್ಪರ್ಧೆ ಇದೆ. ಜಿಲ್ಲೆಯ ಕೆಲವರಿಗೆ ಆಸಕ್ತಿ ಇದ್ದರೂ ಪ್ರವೇಶ ಸಿಗುತ್ತಿಲ್ಲ. ಇನ್ನು ಪದವಿ ಪಡೆದ ಹೊರ ಜಿಲ್ಲೆಗಳ ಸಾಕಷ್ಟು ಜನರಿದ್ದರೂ ಸರ್ಕಾರಿ ನೇಮಕಾತಿ ಬಹು ವರ್ಷದಿಂದ ಆಗಿಲ್ಲ.

ಈ ಜಿಲ್ಲೆ ಬೇಡ: ಬಿವಿಎಸ್​ಸಿ ಕಲಿತ ಪದವೀಧರರು ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲಸ ಮಾಡಲು ಇಚ್ಛಿಸುವುದಿಲ್ಲ. ಈಗ ಕಾರ್ಯನಿರ್ವಹಿಸುತ್ತಿರುವ 25 ವೈದ್ಯರ ಪೈಕಿ ಹೆಚ್ಚಿನವರು ಹೊರ ಜಿಲ್ಲೆಯವರಾಗಿದ್ದು, ಯಾವಾಗ ವರ್ಗಾವಣೆಯಾಗಿ ಸ್ವಂತ ಜಿಲ್ಲೆಗೆ ಹೋಗಬಹುದು ಎಂದು ಕಾಯುತ್ತಿದ್ದಾರೆ. ಇನ್ನು ಜಿಲ್ಲೆಯ ಮೂಲದ ಕೆಲ ಅಧಿಕಾರಿಗಳು ನಿವೃತ್ತಿಯಾದರೆ ಇಲಾಖೆ ಕೋಮಾಕ್ಕೆ ಹೋಗುವುದರಲ್ಲಿ ಸಂಶಯವಿಲ್ಲ.

ಸಮಸ್ಯೆಗೆ ಪರಿಹಾರವೇನು ?

  • ಎಂಬಿಬಿಎಸ್ ವೈದ್ಯರ ನೇಮಕಾತಿ ಮಾದರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಪಶು ವೈದ್ಯರ ನೇಮಕಾತಿಗೆ ಸರ್ಕಾರ ಮುಂದಾಗಬೇಕು.
  • ಮೈತ್ರಿ ಎಂಬ ಯೋಜನೆಯಲ್ಲಿ ಎಸ್​ಎಸ್​ಎಲ್​ಸಿ ಮುಗಿಸಿದ ನಿರುದ್ಯೋಗಿ ಯುವಕರಿಗೆ ಜಾನುವಾರುಗಳ ಕೃತಕ ಗರ್ಭಧಾರಣೆ ಮತ್ತು ಪ್ರಾಥಮಿಕ ಚಿಕಿತ್ಸೆಯ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 120 ಕ್ಕೂ ಅಧಿಕ ಜನ ತರಬೇತಿ ಪಡೆದರೂ ಕಾರ್ಯನಿರ್ವಹಿಸುತ್ತಿರುವವರು 50 ಜನ ಮಾತ್ರ.ಈ ಯೋಜನೆಗೆ ಇನ್ನಷ್ಟು ಉತ್ತೇಜನ ನೀಡಬೇಕು.
  • ಖಾಸಗಿಯಾಗಿ ಪಶು ವೈದ್ಯಕೀಯ ಆಸ್ಪತ್ರೆ, ಕ್ಲಿನಿಕ್ ತೆರೆಯಲು ಉತ್ತೇಜನ ನೀಡಬೇಕು.

ಕಾಯ್ದೆ ತಂದರೆ ಸಾಕೇ?: ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದೆ ಸಂತೋಷ. ಆದರೆ, ಗೋವುಗಳ ಚಿಕಿತ್ಸೆಗೆ ಬೇಕಾದ ಕನಿಷ್ಠ ಸೌಲಭ್ಯ ನೀಡಲು ಹಿಂದೇಟು ಹಾಕುತ್ತಿದೆ ಎಂಬುದು ಜಿಲ್ಲೆಯ ಗೋ ಪಾಲಕರ ಬೇಸರ. ಮೇವಿನ ಬೆಲೆ ಹೆಚ್ಚಿದೆ. ಹೋಬಳಿಗೊಬ್ಬ ಪಶು ವೈದ್ಯರೂ ಇಲ್ಲ. ಜಾನುವಾರಿಗೆ ಜ್ವರ ಬಂದರೆ ವೈದ್ಯರನ್ನು ವಾರವಾದರೂ ಕರೆಸುವುದು ಕಷ್ಟ. ಇಂಥ ಹಲವು ಸಮಸ್ಯೆಯಿಂದ ದಿನದಿಂದ ದಿನಕ್ಕೆ ಮನೆಯಲ್ಲಿ ಗೋವು ಸಾಕುವವರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಇಳಿಯುತ್ತಿದೆ ಎನ್ನುತ್ತಾರೆ ಶಿರಸಿಯ ಕೃಷಿಕ ಸುಬ್ರಾಯ ಹೆಗಡೆ.

ಜಿಲ್ಲೆಯಲ್ಲಿ ಸಾಕಷ್ಟು ಪಶು ವೈದ್ಯರ ಹುದ್ದೆಗಳ ಕೊರತೆ ಇದೆ. ಇದ್ದಷ್ಟೇ ವೈದ್ಯರನ್ನು ಪ್ರೇರೇಪಿಸಿ ಶಕ್ತಿಮೀರಿ ಸೇವೆ ನೀಡಲು ಶ್ರಮಿಸುತ್ತಿದ್ದೇವೆ. ಈ ಸಮಸ್ಯೆ ಬಗೆಹರಿಸಲು ಬಗ್ಗೆ ಇಲಾಖೆಗೆ ಪತ್ರ ಬರೆಯಲಾಗಿದೆ. ನೇಮಕಾತಿ ಮಾಡಿಕೊಡುವಂತೆ ಇಲಾಖೆ ಸಚಿವರಿಗೂ ಮನವಿ ಮಾಡಲಾಗಿದೆ. ಡಾ.ನಂದಕುಮಾರ ಪೈ , ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net