

ಹೈವೇ ಎಂಟ್ರಿ, ಎಕ್ಸಿಟ್‌ಗಳಲ್ಲಿ ಸಂಚಾರ ಅಸ್ತವ್ಯಸ್ತ ಕಂಡುಕಾಣದಂತಿರುವ ಪ್ರಾಧಿಕಾರ
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲೇ ಕೆಲವರು ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡುತ್ತಿದ್ದು, ಎಕ್ಸ್‌ಪ್ರೆಸ್ ಹೈವೇ ಎಂಟ್ರಿ ಹಾಗೂ ಎಕ್ಸಿಟ್‌ಗಳಲ್ಲಿ ಸಂಚಾರ ಸಮಸ್ಯೆ ತಲೆದೋರಿದೆ.
ತಾಲೂಕಿನಲ್ಲಿ ಹಾದುಹೋಗಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಯ ಬೈರಾಪಟ್ಟಣ ಹಾಗೂ ಸಂಕಲಗೆರೆ ಗೇಟ್ ಬಳಿ ಆಗಮನ ಮತ್ತು ನಿರ್ಗಮನ (ಎಕ್ಸಿಟ್ ಹಾಗೂ ಎಂಟ್ರಿ) ಅವಕಾಶ ಕಲ್ಪಿಸಲಾಗಿದೆ. ಆದರೆ, ಹೈವೇಯ ಈ ಎಂಟ್ರಿ ಹಾಗೂ ಎಕ್ಸಿಟ್ ಜಾಗದ ಎರಡೂ ಕಡೆ ಇರುವ ಸರ್ವಿಸ್ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡುತ್ತಿರುವುದು ಸುಗಮ ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿದೆ.
ಬೆಂಗಳೂರಿನಿಂದ ಮೈಸೂರಿನವರೆಗೂ ಎಕ್ಸ್‌ಪ್ರೆಸ್ ಹೈವೇಯಲ್ಲಿ ಒಳ ಹಾಗೂ ಹೊರಹೋಗಲು ಕೇವಲ ತಾಲೂಕು ಕೇಂದ್ರಗಳ ಬಳಿ ಹೈವೇ ಎಂಟ್ರಿ, ಎಕ್ಸಿಟ್ ಅವಕಾಶ ನೀಡಲಾಗಿದೆ. ಹೆದ್ದಾರಿಯ ಪ್ರಯಾಣಿಕರು ಟೀ, ಕಾಫಿ ಹಾಗೂ ತಿಂಡಿಗಾಗಿ ಈ ಎಕ್ಸಿಟ್ ಜಾಗಗಳನ್ನೇ ಅವಲಂಬಿಸುವ ಅನಿವಾರ್ಯತೆ ಇದೆ. ಇದರಿಂದಾಗಿ ಸಹಜವಾಗಿಯೇ ಹೆದ್ದಾರಿಗೆ ಸಂಪರ್ಕ ನೀಡುವ ಜಾಗಗಳ ಬಳಿ ಎರಡೂ ಕಡೆ ಹತ್ತಾರು ಹೋಟೆಲ್ ಹಾಗೂ ಇತರ ಅಂಗಡಿಗಳು ತಲೆಎತ್ತಿವೆ. ಅದರಲ್ಲೂ ತಾಲೂಕಿನ ಬೈರಾಪಟ್ಟಣ ಮತ್ತು ಸಂಕಲಗೆರೆ ಗೇಟ್ ಬಳಿಯ ಸರ್ವೀಸ್ ರಸ್ತೆಯಲ್ಲಿ ಹೆಚ್ಚಿನ ಹೋಟೆಲ್ಗಳು ಆರಂಭವಾಗಿದ್ದು, ಇದರಿಂದ ಈ ಜಾಗದಲ್ಲಿ ಹೈವೇಯಿಂದ ಸರ್ವೀಸ್ ರಸ್ತೆಗೆ ಬರುವ ವಾಹನಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಕಾಫಿ ಮತ್ತು ತಿಂಡಿಗಾಗಿ ಎಕ್ಸಿಟ್ ಸ್ಥಳಗಳಲ್ಲಿ ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಬರುವ ವಾಹನಗಳನ್ನು ರಸ್ತೆಯಲ್ಲೇ ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿದ್ದು, ಇದರಿಂದ ಪ್ರಯಾಣಿಕರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರಿಗೆ ಕಿರಿಕಿರಿಯಾಗುತ್ತಿದೆ. ಎಕ್ಸಿಟ್ ಬಳಿಯಲ್ಲಿರುವ ಅಂಗಡಿ ಮಾಲೀಕರು ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಂಡಿಲ್ಲದಿರುವುದೇ ಸಮಸ್ಯೆಗೆ ಕಾರಣ ಎನ್ನಲಾಗುತ್ತಿದ್ದು, ಇನ್ನಕೆಲ ಹೋಟೆಲ್ಗಳಲ್ಲಿ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಇದ್ದರೂ ಕೆಲ ವಾಹನ ಚಾಲಕರಿಗೆ ಪಾರ್ಕಿಂಗ್ ಮಾಡುವ ವ್ಯವಧಾನ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ.
ಬೈರಾಪಟ್ಟಣ ಹಾಗೂ ಸಂಕಲಗೆರೆ ಗೇಟ್ ಬಳಿ ಸಮಸ್ಯೆ ಹೆಚ್ಚಿದ್ದು, ಸಂಕಲಗೆರೆ ಗೇಟ್‌ನ ಬಳಿ ರಜಾದಿನ ಹಾಗೂ ಪ್ರತಿನಿತ್ಯದ ಊಟ ಹಾಗೂ ತಿಂಡಿಯ ಸಮಯದಲ್ಲಿ ಹೆಚ್ಚಿನ ವಾಹನಗಳು ರಸ್ತೆಯಲ್ಲಿ ನಿಲ್ಲುತ್ತವೆ. ಈ ಬಗ್ಗೆ ಸಂಚಾರಿ ಪೊಲೀಸರಾಗಲಿ, ಹೈವೇ ಗಸ್ತು ಸಿಬ್ಬಂದಿಯಾಗಲಿ ತಲೆಕೆಡಿಸಿಕೊಳ್ಳುತ್ತಿಲ್ಲ. ಅಲ್ಲದೇ ಸದರಿ ಜಾಗಗಳಿಗೆ ಸಂಬಂಧಿಸಿದ ಮಳೂರು ಹಾಗೂ ಮತ್ತೀಕೆರೆ ಗ್ರಾಪಂ ಅಧಿಕಾರಿಗಳೂ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಸರ್ವೀಸ್ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದಲ್ಲದೇ ವಿರುದ್ಧ ದಿಕ್ಕಿನ ಸಂಚಾರವೂ ಹೆಚ್ಚಾಗಿದೆ. ಹೆದ್ದಾರಿಯಲ್ಲಿ ಬೆಂಗಳೂರು ಕಡೆಯಿಂದ ಬರುವ ತಾಲೂಕಿನ ವಾಹನ ಸವಾರರು, ಬೈರಾಪಟ್ಟಣ ಬಳಿ ಎಕ್ಸಿಟ್ ಪಡೆದು ವಿರುದ್ಧ ದಿಕ್ಕಿನಲ್ಲಿ ಚನ್ನಪಟ್ಟಣ ಕಡೆಗೆ ಸಂಚಾರ ಮಾಡುತ್ತಾರೆ. ಇದರಿಂದ ಸರ್ವೀಸ್ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ಸೇರಿ ಇನ್ನಿತರ ವಾಹನಗಳ ಸಂಚಾರಕ್ಕೆ ತಡೆಯುಂಟುಮಾಡುತ್ತಿದೆ. ಇಲ್ಲಿ ಎಕ್ಸಿಟ್ ಪಡೆಯುವ ವಾಹನಗಳು ಬೈರಾಪಟ್ಟಣದಲ್ಲಿರುವ ಅಂಡರ್ ಪಾಸ್ ಬಳಸಿ, ನಗರದ ಕಡೆ ಹೋದರೆ ಈ ಸಮಸ್ಯೆ ನಿವಾರಣೆಯಾಗಲಿದೆ. ಆದರೆ, ಸುತ್ತಬೇಕಾಗುತ್ತದೆ ಎಂಬ ಕಾರಣಕ್ಕೆ ವಿರುದ್ಧ ದಿಕ್ಕಿನಲ್ಲೇ ಸಂಚರಿಸುವವರ ಸಂಖ್ಯೆ ಹೆಚ್ಚಾಗಿದೆ.