

* ಪುರಸಭೆ ಅಧಿಕಾರಿಗಳ ವಿರುದ್ಧ ನಾಗರಿಕರ ಆಕ್ರೋಶ
ಎಂ.ಎಸ್.ಸಿದ್ದಲಿಂಗೇಶ್ವರ ಮಾಗಡಿ
ಪಟ್ಟಣದಲ್ಲಿ ತರಕಾರಿ, ಸೊಪ್ಪು ಮಾರುಕಟ್ಟೆ ಇಲ್ಲದೆ ಕೆಂಪೇಗೌಡ ವೃತ್ತದ ರಸ್ತೆಯ ಮಧ್ಯದಲ್ಲೇ ಮಾರಾಟ ಮಾಡುವಂತಾಗಿದೆ.
ಮಾಗಡಿ ತಾಲೂಕಿನಲ್ಲಿ ಶೇ.80ಕ್ಕೂ ಹೆಚ್ಚು ಮಂದಿ ವ್ಯವಸಾಯ, ಹೈನುಗಾರಿಕೆ ನಂಬಿ ಜೀವನ ನಡೆಸುತ್ತಾರೆ. ಆದರೆ, ರೈತರು ಬೆಳೆದ ತರಕಾರಿ, ಸೊಪ್ಪು, ಹಣ್ಣು, ಹೂ ಮಾರಾಟ ಮಾಡಲು ಸಮರ್ಪಕ ಮಾರುಕಟ್ಟೆ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲಿ ಮಾರಾಟ ಮಾಡುವಂತಾಗಿದೆ. ಇದರಿಂದ ರಸ್ತೆಯಲ್ಲಿನ ಧೂಳು, ಮಣ್ಣು, ಕೆಸರೆಲ್ಲವೂ ತರಕಾರಿಗೆ ಸೇರುವಂತಾಗಿದೆ.
ರಸ್ತೆಯಲ್ಲಿ ವಾಹನ ಸಂದಣಿ ಹೆಚ್ಚಿದ್ದು, ಈ ವೇಳೆ ರೈತರು ಸ್ವಲ್ಪಯಾಮಾರಿದರೂ ಪ್ರಾಣಾಪಾಯ ಸಂಭವಿಸುವ, ಸಂಭವಿಸಿರುವ ಸಾಕಷ್ಟು ಉದಾಹರಣೆ ಇವೆ. ಕಷ್ಟ ಪಟ್ಟು ಸಾಲ, ಸೊಲ ಮಾಡಿ ಬೆಳೆ ಬೆಳೆದರು ನೆಮ್ಮದಿಯಿಂದ ಮಾರಾಟ ಮಾಡಲು ಆಗದೆ ರೈತರು ಸಂಕಷ್ಟ ಎದುರಿಸುಂತಾಗಿದೆ.
ಪಟ್ಟಣದ ಕೋಟೆ ರಸ್ತೆ, ಬಿಡಿಸಿಸಿ ಬ್ಯಾಂಕ್ ರಸ್ತೆ ಬದಿಗಳಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದವರನ್ನು ಪುರಸಭೆ ತೆರವುಗೊಳಿಸಿದ ನಂತರ ಎಸ್ಬಿಐ ಬ್ಯಾಂಕ್ ಮುಂಭಾಗ, ಕೆಂಪೇಗೌಡ ವೃತ್ತದಲ್ಲಿ ಮಾರಾಟ ಮಾಡಲಾಗುತ್ತಿದೆ. ಬಹುತೇಕ ರೈತರು ರಸ್ತೆ ಮಧ್ಯದಲ್ಲೆ ತರಕಾರಿ ಇಟ್ಟುಕೊಂಡಿರುವುದರಿಂದ ವಾಹನ ಸವಾರರಿಗೆ ಕಿರಿ ಕಿರಿ ಉಂಟಾಗಿದೆ.
ಇಲ್ಲಿಯೇ ಎಸ್ಬಿಎಂ ಬ್ಯಾಂಕ್ ಇರುವುದರಿಂದ ಬ್ಯಾಂಕ್ಗೆ ಬರುವ ಗ್ರಾಹಕರು, ತರಕಾರಿ ಖರೀದಿ ಮಾಡಲು ಬರುವವರು ವಾಹನಗಳನ್ನು ಎಲ್ಲೆಂದರಲ್ಲೇ ಪಾರ್ಕಿಂಗ್ ಮಾಡುವುದರಿಂದ ವಾಹನ ಸಂದಣಿ ಹೆಚ್ಚಾಗಿ ತಿರುಗಾಡಲು ನರಕಯಾತನೆ ಅನುಭವಿಸುವಂತಾಗಿದೆ. ಈ ವೇಳೆ ತರಕಾರಿಯ ಮೇಲೆ ವಾಹನದ ಚಕ್ರ ಹರಿದರೆ ಗಂಟೆಗಟ್ಟಲೆ ಜಗಳಮಾಡುವುದು ಸಾಮಾನ್ಯವಾಗಿದೆ.
ಮಳೆ, ಗಾಳಿ, ಚಳಿ ಎನ್ನದೆ ನಿರಂತರವಾಗಿ ಹರಿಯುವ ಒಳಚರಂಡಿ ತ್ಯಾಜ್ಯದ ಮಧ್ಯೆ ರಸ್ತೆಯಲ್ಲೆ ಕುಳಿತು ತರಕಾರಿ ಸೊಪ್ಪು, ಮಾರಾಟ ಮಾಡುವಂತಾಗಿದೆ. ಮಾಗಡಿಯ ತರಕಾರಿ, ಸೊಪ್ಪಿಗೆ ರಾಜ್ಯಮಟ್ಟದಲ್ಲಿ ಹೆಸರಿದ್ದರೂ ಮಾರಾಟ ಮಾಡುವ ಸ್ಥಳ ಗಬ್ಬುನಾರುತ್ತಿದೆ ಎಂಬುದು ತರಕಾರಿ ಮಾರಾಟಗಾರರ ಆರೋಪವಾಗಿದೆ. ಇದು ಎಂದಿಗೆ ಮುಕ್ತಿ ಸಿಗುತ್ತದೆ ಕಾದುನೋಡಬೇಕಿದೆ. ಪಟ್ಟಣದ ಪುರಸಭೆಯ ತರಕಾರಿ ಅಂಗಡಿ ಮಳಿಗೆ, ಪಿಎಲ್ಡಿ ಬ್ಯಾಂಕ್, ಪೊಲೀಸ್ ಠಾಣೆಗಳನ್ನು ತೆರವುಗೊಳಿಸಿ ದೊಡ್ಡ ಮಟ್ಟದಲ್ಲಿ ತರಕಾರಿ ಮಾರುಕಟ್ಟೆ ನಿರ್ಮಿಸುವುದಾಗಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು. ಆದರೆ ಇಲ್ಲಿಯವರೆಗೂ ಕಾರ್ಯರೂಪಕ್ಕೆ ಬಂದಿಲ್ಲ ಎಂಬುದು ನಾಗರಿಕರ ಆರೋಪವಾಗಿದೆ.
ರಸ್ತೆಯ ಬದಿಯಲ್ಲಿ ತರಕಾರಿ ಮಾರಾಟ ಮಾಡುವಂತೆ ಪುರಸಭೆ ಅಧಿಕಾರಿಗಳು ತಿಳಿಸಿದರೂ, ಅಧಿಕಾರಿಗಳ ಮಾತಿಗೆ ಕಿಮ್ಮತ್ತು ನೀಡದೆ ರಸ್ತೆಯಲ್ಲೆ ಮಾರಾಟ ಮಾಡುತ್ತಾರೆ. ಈ ವೇಳೆ ಸಂಬಂಧಪಟ್ಟವರ ಕಣ್ಣಿಗೆ ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ. ತರಕಾರಿ ಮಾರಾಟಗಾರರಿಗೆ ಅನುಕೂಲ ಕಲ್ಪಿಸಲು ಮಾಗಡಿ ಯೋಜನಾ ಪ್ರಾಧಿಕಾರದಿಂದ ಕೋಟ್ಯಂತರ ರೂ. ಖರ್ಚು ಮಾಡಿ ಪೊಲೀಸ್ ಠಾಣೆ ಮುಂಭಾಗ ಮಾರುಕಟ್ಟೆ ನಿರ್ಮಿಸಲಾಗಿದೆ. ಹೆಚ್ಚು ಮಂದಿ ತರಕಾರಿ ಮಾರಾಟಗಾರರಿದ್ದು, ಈ ಪೈಕಿ ಬಹುತೇಕ ಮಂದಿಗೆ ವಿತರಣೆ ಮಾಡಲು ಸಾಧ್ಯವಾಗದ ಕಾರಣ ತರಕಾರಿ ಮಾರುಕಟ್ಟೆ ನಿರ್ಮಿಸಿ 3 ವರ್ಷಗಳೆ ಕಳೆದರೂ ಲೋಕಾರ್ಪಣೆ ಮಾಡದೆ ಸರ್ಕಾರದ ಹಣಕ್ಕೆ ಬೆಲೆ ಇಲ್ಲದಂತಾಗಿದೆ ಎಂಬುದು ರೈತರ ಆರೋಪವಾಗಿದೆ.
ಮೊದಲನೆ ಹಂತದಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ತರಕಾರಿ ಮಾರುಕಟ್ಟೆ ನಿರ್ಮಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ಮಾರುಕಟ್ಟೆ ನಿರ್ಮಿಸಿದ ನಂತರ ತರಕಾರಿ ಮಾರಾಟಗಾರರಿಗೆ ಅಲ್ಲಿ ಅನುಕೂಲ ಕಲ್ಪಿಸಲಾಗುವುದು.ರಮ್ಯಾ ನರಸಿಂಹಮೂರ್ತಿ, ಅಧ್ಯಕ್ಷೆ, ಪುರಸಭೆ