ತರಕಾರಿ ವಹಿವಾಟು, ಎಪಿಎಂಸಿ ಇಕ್ಕಟ್ಟು

22-hvr-05 Mallikarjun Haveri
Published on

ಹಾವೇರಿ: ಕೋವಿಡ್ ಹಿನ್ನೆಲೆಯಲ್ಲಿ ಸ್ಥಳೀಯ ಎಪಿಎಂಸಿಯಲ್ಲಿ ಸಗಟು ತರಕಾರಿ ವಹಿವಾಟು ನಡೆಸಲು ಜಿಲ್ಲಾಡಳಿತದಿಂದ ವಿಶಾಲವಾದ ಜಾಗ ನೀಡಬೇಕು. ಮಾರ್ಗಸೂಚಿ ಪಾಲನೆಗೆ ಸಿಬ್ಬಂದಿ, ಮಾಸ್ಕ್, ಸ್ಯಾನಿಟೈಸರ್ ಒದಗಿಸಬೇಕು ಎಂದು ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಒತ್ತಾಯಿಸಿದರು.

ನಗರದ ಎಪಿಎಂಸಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರೊನಾ ಹಾಗೂ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವ ಪರಿಣಾಮ ಎಪಿಎಂಸಿಯ ಆದಾಯ ಕುಸಿತಗೊಂಡಿದೆ. ಹೊರಗುತ್ತಿಗೆ ಆಧಾರದ ಸಿಬ್ಬಂದಿ ನೇಮಕ ಕಷ್ಟಕರ. ಅಲ್ಲದೆ, ಎಪಿಎಂಸಿಗೆ 25 ಮಂಜೂರಾತಿ ಹುದ್ದೆಗಳಿದ್ದು, ಅದರಲ್ಲಿ 5 ಜನ ಮಾತ್ರ ಕರ್ತವ್ಯದಲ್ಲಿದ್ದಾರೆ. ಇನ್ನು 8 ಜನರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದೆ. ಇನ್ನಷ್ಟು ಹೊರಗುತ್ತಿಗೆ ಸಿಬ್ಬಂದಿ ನೇಮಕ ಮಾಡಿಕೊಂಡರೆ ಎಪಿಎಂಸಿ ಆದಾಯದಲ್ಲಿಯೇ ಅವರಿಗೆ ವೇತನ ನೀಡಬೇಕು. ಆದರೆ, ಆದಾಯದಲ್ಲಿ ಕುಸಿತವಾಗಿರುವುದರಿಂದ ಎಪಿಎಂಸಿಯಿಂದ ಸಿಬ್ಬಂದಿ ನೇಮಕ ಅಸಾಧ್ಯ. ಇರುವ ಅಲ್ಪ ಸಿಬ್ಬಂದಿಯಿಂದ ಕರೊನಾ ಮಾರ್ಗಸೂಚಿ ಅನುಸರಿಸಿ ಮಾರುಕಟ್ಟೆಯಲ್ಲಿ ವಹಿವಾಟು ನಡೆಸಲು ಸಾಧ್ಯವಾಗುತ್ತಿಲ್ಲ ಎಂದರು.

ಶನಿವಾರ, ಭಾನುವಾರ ಮಾರುಕಟ್ಟೆ ಬಂದ್: ಈ ಸಮಯದಲ್ಲಿ ಜನರ ಆರೋಗ್ಯ ಕಾಪಾಡುವುದು ಅವಶ್ಯವಾಗಿದ್ದು, ಇದಕ್ಕಾಗಿ ಸರ್ಕಾರ ಸೂಚಿಸಿದಂತೆ ಏ. 24ರ ಶನಿವಾರ ಹಾಗೂ ಭಾನುವಾರದಿಂದ ಸಗಟು ಕಾಯಿಪಲ್ಲೆ ಹರಾಜು ಹಾಗೂ ಕಾಳುಕಡಿ ಮಾರುಕಟ್ಟೆಯನ್ನು ಸ್ಥಗಿತಗೊಳಿಸಲು ತೀರ್ವನಿಸಲಾಗಿದೆ. ಒಂದೊಮ್ಮೆ ಜಿಲ್ಲಾಡಳಿತ ಪರಸ್ಪರ ಅಂತರ ಕಾಯ್ದು ತರಕಾರಿ ವಹಿವಾಟು ನಡೆಸಲು ವಿಶಾಲವಾದ ಜಾಗ, ಸಿಬ್ಬಂದಿ, ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಿದರೆ ತರಕಾರಿ ಸಗಟು ಹರಾಜು ಮಾರುಕಟ್ಟೆಯನ್ನು ತೆರೆಯಲಾಗುವುದು ಎಂದರು.

ಜಾನುವಾರು ಮಾರುಕಟ್ಟೆಯೂ ಸ್ಥಗಿತ: ಕರೊನಾ ನಿಯಂತ್ರಣದ ಉದ್ದೇಶದಿಂದ ಮುಂದಿನ 2 ಗುರುವಾರಗಳಂದು (ಏ. 29, ಮೇ 6) ಜಾನುವಾರು ಮಾರುಕಟ್ಟೆಯನ್ನು ಸ್ಥಗಿತಗೊಳಿಸಲಾಗುವುದು. ರೈತರು ಸಹಕರಿಸಬೇಕು. ಈ ಗುರುವಾರ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳು ಮಾರುಕಟ್ಟೆಗೆ ಬಂದು ರಸ್ತೆಯಲ್ಲಿಯೇ ಮಾರಾಟ ಮಾಡುವ ಸ್ಥಿತಿ ನಿರ್ವಣವಾಗಿತ್ತು. ಅಲ್ಲದೆ, ಪರಸ್ಪರ ಅಂತರ, ಮಾಸ್ಕ್ ಧರಿಸದೇ ಇದ್ದರಿಂದ ಕರೊನಾ ವೈರಸ್ ತೀವ್ರವಾಗಿ ಹರಡುವ ಆತಂಕ ಮೂಡಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಮಿತಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಎಪಿಎಂಸಿ ಕಾರ್ಯದರ್ಶಿ ಪರಮೇಶ್ವರ ನಾಯಕ ಮಾತನಾಡಿ, ಸರ್ಕಾರ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಯನ್ನು ನಾವು ಪಾಲಿಸಲೇಬೇಕಿದೆ. ಆ ಹಿನ್ನೆಲೆಯಲ್ಲಿ ವಾರಾಂತ್ಯದ ಎಲ್ಲ ವ್ಯಾಪಾರ ಬಂದ್ ಮಾಡಲಾಗುತ್ತಿದೆ. ಶನಿವಾರ ಮತ್ತು ಭಾನುವಾರ ಎಪಿಎಂಸಿಯಲ್ಲಿ ಯಾವುದೇ ಚಟುವಟಿಕೆ ನಡೆಸಲು ಅವಕಾಶವಿಲ್ಲ ಎಂದರು.

ಬಳಿಕ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಕಾಳುಕಡಿ, ಹೂವು, ಹಣ್ಣು, ತರಕಾರಿ ವ್ಯಾಪಾರಸ್ಥರೊಂದಿಗೆ ಸಭೆ ನಡೆಸಿದರು. ಎಲ್ಲೆಡೆ ಕರೊನಾ ವ್ಯಾಪಿಸುತ್ತಿದ್ದು, ಜೀವ ಉಳಿಸಿಕೊಳ್ಳುವುದು ಮುಖ್ಯವಾಗಿದೆ. ಅದಕ್ಕಾಗಿ ಸರ್ಕಾರದ ಸೂಚನೆಯನ್ನು ಎಲ್ಲರೂ ಪಾಲಿಸಬೇಕು. ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವ ಮೂಲಕ ಕರೊನಾ ತಡೆಗಟ್ಟಲು ಎಲ್ಲರೂ ಶ್ರಮಿಸೋಣ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ರಮೇಶ ಚಾವಡಿ, ಮಾಜಿ ಉಪಾಧ್ಯಕ್ಷೆ ವನಜಾಕ್ಷಿ ಬಾಳಿ, ಸದಸ್ಯರಾದ ರುದ್ರೇಶ ಚಿನ್ನಣ್ಣನವರ, ವಿ.ಜಿ. ಬಣಕಾರ, ರಾಮು ಮಾಳಗಿ, ಕೃಷ್ಣರೆಡ್ಡಿ ಮೈದೂರ, ಚನ್ನಬಸಪ್ಪ ಕೋಡಿಹಳ್ಳಿ, ವರ್ತಕರ ಸಂಘದ ಅಧ್ಯಕ್ಷ ಪಿ.ಡಿ. ಶಿರೂರ, ಜಿ.ಕೆ. ಹೂಗಾರ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಕರ್ಜಗಿ ಹೋಬಳಿಯ ಯತ್ತಿನಹಳ್ಳಿ ಗ್ರಾಮದ ಸರ್ವೆ ನಂ. 83ರಲ್ಲಿ 16 ಎಕರೆ 02 ಗುಂಟೆ ಸರ್ಕಾರಿ ಜಮೀನಿದ್ದು, ಅದನ್ನು ಎಪಿಎಂಸಿಗೆ ಸರ್ಕಾರ ನಿಗದಿಪಡಿಸಿದ ದರದಲ್ಲಿ ನೀಡಬೇಕು. ಈ ಜಾಗದಲ್ಲಿ ಜಾನುವಾರು, ಕುರಿ-ಮೇಕೆಗಳ ವಹಿವಾಟು ನಡೆಸಲು ಅನುಕೂಲವಾಗಲಿದೆ. ಸದ್ಯ ಹಾನಗಲ್ಲ ರಸ್ತೆಯಲ್ಲಿರುವ ಜಾನುವಾರು ಮಾರುಕಟ್ಟೆಯಲ್ಲಿ ಅಗ್ನಿಶಾಮಕ ಠಾಣೆಗೆ ಜಾಗ ನೀಡಲಾಗಿದೆ. ಅಲ್ಲದೆ, ಸೈಲೋ ಘಟಕ ನಿರ್ವಿುಸಲಾಗಿದೆ. ಜಾನುವಾರುಗಳಿಗೆ ಇದರಿಂದ ಜಾಗದ ಕೊರತೆಯೂ ಹೆಚ್ಚಾಗಿದೆ. ಅಲ್ಲದೆ, ಹಾವೇರಿ ನಗರಕ್ಕೆ ಹೊಂದಿಕೊಂಡಿರುವುದರಿಂದ ವಾಹನ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಯತ್ತಿನಹಳ್ಳಿಯ ಜಾಗದಲ್ಲಿ ಜಾನುವಾರು ಮಾರುಕಟ್ಟೆ ಸ್ಥಾಪನೆಯಿಂದ ಯತ್ತಿನಹಳ್ಳಿ ಭಾಗವು ಅಭಿವೃದ್ಧಿ ಹೊಂದಲಿದೆ. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಲಾಗಿದೆ.| ಮಲ್ಲಿಕಾರ್ಜುನ ಹಾವೇರಿ, ಅಧ್ಯಕ್ಷರು ಎಪಿಎಂಸಿ ಹಾವೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net