

ಬೆಂಗಳೂರು: ಇತ್ತೀಚೆಗೆ ಕನ್ನಡದಲ್ಲಿ ವಿಮರ್ಶೆಗೆ ಜಾಗ ಇಲ್ಲದಂತಾಗಿದೆ. ಆದರೆ ವಿಮರ್ಶೆ ಇಲ್ಲದೆ ಸಾಹಿತ್ಯ ಬೆಳವಣಿಗೆ ಸಾಧ್ಯವಿಲ್ಲ. ಸೃಜನಶೀಲ ಸಾಹಿತ್ಯಕ್ಕೆ ವಿಮರ್ಶೆ ಅತ್ಯಗತ್ಯ ಎಂದು ಸಾಹಿತಿ ವಿವೇಕ ಶಾನಭಾಗ ಹೇಳಿದ್ದಾರೆ.
ವೀರಲೋಕ ಪ್ರಕಾಶನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ನುಡಿ ಮಿಲನ’ ಕಾರ್ಯಕ್ರಮದಲ್ಲಿ ಕೇಶವ ಮಳಗಿ ಸಂಪಾದಿಸಿರುವ ‘ಕುಸುರೆಳ್ಳು’ ಹಾಗೂ ಕನ್ನಡ, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳ ‘ಕಥಾ ಸಂಕ್ರಾಂತಿ’ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚೆಗೆ ಸಾಹಿತ್ಯ ಕೃತಿಗಳ ವಿಮರ್ಶೆಗಳು ಅಷ್ಟಾಗಿ ಬರುತ್ತಿಲ್ಲ. ಆದರೆ ಬರವಣಿಗೆಯ ಕೌಶಲ ವೃದ್ಧಿಗೆ ವಿಮರ್ಶೆಗಳ ಓದು ಅತ್ಯಗತ್ಯ. ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಕಥೆಗಳನ್ನು ಮಾದರಿ ಕಥೆಗಳೆಂದು ಸ್ವೀಕರಿಸಬಾರದು. ಹಿಂದೆಲ್ಲ ಕಥಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡದವರೂ ನಂತರದಲ್ಲಿ ದೊಡ್ಡ ಕಥೆಗಾರರಾಗಿ ಹೆಸರಾಗಿರುವ ಉದಾಹರಣೆಗಳಿವೆ ಎಂದರು.
ಕೇಶವ ಮಳಗಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಥಾ ಸ್ಪರ್ಧೆಗಳಲ್ಲಿ ಹಣ ನೋಡುತ್ತಿದ್ದೇವೆ. ಹಾಗೆಂದು ದೊಡ್ಡ ಮೊತ್ತದ ನಗದು ಬಹುಮಾನ ಇದ್ದರಷ್ಟೇ ಉತ್ತಮ ಕಥೆಗಳು ಬರುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಬರಹ, ವಿಮರ್ಶೆ ಮಾತ್ರವಲ್ಲದೆ ಕನ್ನಡದಲ್ಲಿ ಅನುವಾದಕರನ್ನು ಹುಡುಕುವುದು ಕಷ್ಟ ಎಂದು ಹೇಳಿದರು.
ವೀರಲೋಕ ಪ್ರಕಾಶನದ ವೀರಕಪುತ್ರ ಶ್ರೀನಿವಾಸ್ ಮಾತನಾಡಿ, ‘ವೀರಲೋಕ’ದಿಂದ ಹೊರ ರಾಜ್ಯಗಳಲ್ಲಿಯೂ ಪುಸ್ತಕಗಳ ಬಿಡುಗಡೆಗೆ ಯೋಜನೆ ರೂಪಿಸಲಾಗುತ್ತಿದೆ. ಅನ್ಯ ಭಾಷೆಗಳಿಗೆ ಕನ್ನಡದ ಪುಸ್ತಕಗಳನ್ನು ಅನುವಾದಿಸಿ, ಪ್ರಕಟಿಸುವ ಕಾರ್ಯ ಸಾಗಿದೆ ಎಂದರು.
ಇಂಗ್ಲಿಷ್ ಲೇಖಕಿ ಕಾವೇರಿ ನಂಬೀಸನ್, ಅನುವಾದಕರಾದ ಸುಧಾಕರನ್ ರಾಮಂತಳಿ ಹಾಗೂ ಅಶೋಕ್ ಪಿನ್ನಮನೇನಿ ಇತರರಿದ್ದರು.