

ತುಮಕೂರು: ವೀರಶೈವ-ಲಿಂಗಾಯತ ಸಂಘಟನ ವೇದಿಕೆ ವತಿಯಿಂದ ಕೊಡ ಮಾಡುವ 2024 ರಾಷ್ಟ್ರೀಯ ಪಶಸ್ತಿಯಾದ ವೀರಭದ್ರ ಪ್ರಶಸ್ತಿಗೆ ಭಾಜನರಾಗಿರುವ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರಿಗೆ ಡಿ. 12 ರಂದು ದೆಹಲಿಯ ಪ್ರಗತಿ ಮೈದಾನದಲ್ಲಿರುವ ಭಾರತ್ ಮಂಟಪದಲ್ಲಿ ಪ್ರದಾನ ಮಾಡಲಾಗುವುದು ಎಂದು ವೇದಿಕೆಯ ಎಸ್. ಸೋಮಶೇಖರ್ ಗಾಂಧಿ ತಿಳಿಸಿದರು.
ದೆಹಲಿಯ ಭಾರತ್ ಮಂಟಪದಲ್ಲಿ ಡಿ. 12 ರಂದು ಸಂಜೆ 5 ಗಂಟೆಗೆ ವೀರಭದ್ರ ಜಯಂತಿಯನ್ನು ಆಚರಿಸುವ ಮೂಲಕ ಕೇಂದ್ರ ಸಚಿವ ಸೋಮಣ್ಣ ಅವರಿಗೆ ಈ ರಾಷ್ಟ್ರಿಯ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿಂದು ಹೇಳಿದರು.
ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ಪ್ರಹ್ಲಾದ್ ಜೋಷಿ, ಶೋಭಕರಂದ್ಲಾಜೆ ಸೇರಿದಂತೆ ಕೇಂದ್ರ ಸಚಿವರುಗಳು, ರಾಜ್ಯದ ಸಂಸದರು ಭಾಗವಹಿಸಲಿದ್ದಾರೆ ಎಂದರು.
ಸಮಾಜಕ್ಕಾಗಿ ಸೇವೆ ಮಾಡುತ್ತಿರುವವರನ್ನು ಗುರುತಿಸಿ ವೇದಿಕೆ ವತಿಯಿಂದ ಈ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತಿದೆ. ನಮ್ಮ ವೇದಿಕೆ ವತಿಯಿಂದ ಎಲ್ಲ ಜಾತಿ, ವರ್ಗದವರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ ಎಂದು ಅವರು ತಿಳಿಸಿದರು.
ತುಮಕೂರಿನ ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಶಿವಗಂಗೆಯ ಮೇಲಣಗವಿ ಮಠಾಧ್ಯಕ್ಷರು, ಹುಬ್ಬಳ್ಳಿಯ ಮೂರು ಸಾವಿರ ಮಠಾಧ್ಯಕ್ಷರು ಸೇರಿದಂತೆ ರಾಜ್ಯದ 100ಕ್ಕೂ ಅಧಿಕ ಮಠಾಧೀಶರುಗಳು ವೀರಭದ್ರ ಜಯಂತಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಈಗಾಗಲೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರಭಾಕರ ಕೋರೆ, ಇಸ್ರೋ ಸಂಸ್ಥೆಯ ಎಸ್. ಸೋಮನಾಥ್ ಸೇರಿದಂತೆ ಹಲವರಿಗೆ ವೀರಭದ್ರ ಪಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿದೆ. ಈ ವರ್ಷ ಕೇಂದ್ರ ಸಚಿವ ವಿ. ಸೋಮಣ್ಣನವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸತ್ಕರಿಸಲಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಸಚಿವ ಸೋಮಣ್ಣನವರು ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾಗುವ ಮೂಲಕ ಕಳೆದ 40 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಹಂತ ಹಂತವಾಗಿ ಬೆಳೆದು ಬಂದಿದ್ದಾರೆ. ಎರಡು ಬಾರಿ ಪಾಲಿಕೆಯ ಸದಸ್ಯರಾಗಿ, ಬನ್ನಿಪೇಟೆ ವಿಧಾನಸಭಾ ಕ್ಷೇತ್ರದಿಂದ 3 ಬಾರಿ ಗೆದ್ದು ಶಾಸಕರಾಗಿ, ಜೆ.ಹೆಚ್. ಪಟೇಲ್ ರವರ ಸಚಿವ ಸಂಪುಟದಲ್ಲಿ ಬಂಧಿಖಾನೆ ಸಚಿವರಾಗಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ, ಸಚಿವರಾಗಿ ಅತ್ಯುತ್ತಮವಾಗಿ ಕೆಲಸ ಮಾಡಿ ಒಳ್ಳೆಯ ಕೆಲಸಗಾರರೆಂದು ಗುರುತಿಸಿಕೊಂಡಿದ್ದಾರೆ. ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದ ಸೋಮಣ್ಣ ಅವರು 18ನೇ ಲೋಕಸಭೆಗೆ ತುಮಕೂರು ಕ್ಷೇತ್ರದಿಂದ ಸಂಸದರಾಗಿ ಗೆದ್ದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವರಾಗಿದ್ದಾರೆ. ಇವರ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಹೇಶ್ವರಮೂರ್ತಿ, ಕೆ.ಆರ್. ಲಿಂಗರಾಜು ಉಪಸ್ಥಿತರಿದ್ದರು.