

ಓದಿನಷ್ಟೆ ಆದ್ಯತೆ ಆಟೋಟಗಳಿಗೂ ಕೊಡಿ : ರವಿ ಮಲಶೆಟ್ಟಿ, ಆರತಿ ಮಲಶೆಟ್ಟಿ ಸಲಹೆ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕ್ರೀಡೆಗಳಲ್ಲಿ ಭಾಗಿಯಾಗುವುದರಿಂದ ದೈಹಿಕವಾಗಿ ಸದೃಢರಾಗುವುದರ ಜತೆಗೆ ಮಾನಸಿಕ ಶಕ್ತಿಯು ವೃದ್ಧಿಯಾಗಲಿದೆ.ಹೀಗಾಗಿ ಓದಿನಷ್ಟೆ ಒತ್ತನ್ನು ಆಟೋಟಗಳಿಗೂ ನೀಡುವುದು ಅಗತ್ಯವಾಗಿದೆ ಎಂದು ವೇದಾ ಪಬ್ಲಿಕ್ ಶಾಲೆಯ ಶ್ರೀ ಬಸವಣ್ಣಪ್ಪ ಏಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ರವಿ ಮಲಶೆಟ್ಟಿ ಮತ್ತು ಸಂಸ್ಥಾಪಕ ಪ್ರಾಚಾರ್ಯರಾದ ಆರತಿ ಮಲಶೆಟ್ಟಿ ಹೇಳಿದರು.
ನಗರದ ಸೇಡಂ ರಸ್ತೆಯ ಆಜಾದಪುರದ ರಾಮದೇವ ನಗರದಲ್ಲಿರುವ ವೇದಾ ಪಬ್ಲಿಕ್ ಸಿಬಿಎಸ್‌ಇ ಸ್ಕೂಲ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಕ್ರೀಡೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ, ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ. ಕ್ರೀಡಾಸ್ಪೂರ್ತಿ, ಛಲ ನಮ್ಮನ್ನು ಗುರಿ ತಲುಪುವಂತೆ ಮಾಡಲಿದೆ ಎಂದರು.
ಕಾರ್ಯದರ್ಶಿ ರವಿ ಮಲಶೆಟ್ಟಿ ಮಾತನಾಡಿ, ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಅಗತ್ಯವಿರುವ ಎಲ್ಲ ಮೂಲ ಸೌಕರ್ಯಗಳು ಇವೆ. ಕಲಬುರಗಿಯಲ್ಲಿ ಹೆಚ್ಚಿನ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಸಂಸ್ಥಾಪಕಿ ಹಾಗೂ ಪ್ರಾಚಾರ್ಯರಾದ ಆರತಿ ಪಾಟೀಲ್ ಮಲಶೆಟ್ಟಿ ಮಾತನಾಡಿ, ಮಕ್ಕಳು ಜೀವನದಲ್ಲಿ ಸಾಧನೆ ಮಾಡಲು ಪ್ರೇರಣೆಯಾಗುವಂತ ಶಿಕ್ಷಣದ ಜತೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಪ್ರತಿಯೊಂದು ಹಂತದಲ್ಲಿ ಎಲ್ಲ ತೆರನಾದ ಕಲಿಕೆ ಹಾಗೂ ಆಟೋಟಗಳನ್ನು ಕಲಿಸುವ ಮೂಲಕ ಮಕ್ಕಳ ಸಮಗ್ರ ಪ್ರಗತಿಗೆ ಶ್ರಮಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿರುವ ವಿಜಯವಾಣಿ ದಿನಪತ್ರಿಕೆ ಸ್ಥಾನಿಕ ಸಂಪಾದಕ ಬಾಬುರಾವ ಯಡ್ರಾಮಿ ಕ್ರೀಡಾಕೂಟ ಉದ್ಘಾಟಿಸಿ, ಕಲ್ಯಾಣ ಕರ್ನಾಟಕ ಮಕ್ಕಳು ಆಗಾಧವಾದ ಶಕ್ತಿ ಮತ್ತು ಅಸಾಧಾರಣ ಪ್ರತಿಭೆ ಹೊಂದಿದ್ದಾರೆ.ನಿರ್ಲಕ್ಷÈತನ, ಮೈಗಳ್ಳತನ ಮಾಡದೆ ನಿರಂತರ ಕಲಿಕೆ ಹಾಗೂ ಪ್ರಯತ್ನ ಮಾಡುವ ಮೂಲಕ ಸಾಧಕರಾಗಬೇಕು. ವೇದಾ ಪಬ್ಲಿಕ್ ಶಾಲೆ ದಶಕದಲ್ಲಿ ಮಾದರಿಯಾಗಿ ಬೆಳೆದು, ಶೈಕ್ಷಣಿಕ ಪ್ರಗತಿಗೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದರು.
ವಿವಿಧ ತಂಡಗಳ ವಿದ್ಯಾರ್ಥಿಗಳಿಂದ ನಾಯಕರಾದ ಶರಣ ಮತ್ತು ಕಾವ್ಯಾ ನೇತೃತ್ವದಲ್ಲಿ ಆಕರ್ಷಕ ಪಥ ಸಂಚಲನ ಜರುಗಿತು. ಖೋಖೋ, ಕಬ್ಬಡ್ಡಿ, ರನ್ನಿಂಗ್, ಥ್ರೋಬಾಲ್, ರಿಂಗ್ ಗೇಮ್ ಸೇರಿದಂತೆ ಎಲ್‌ಕೆಜಿಯಿಂದ ೧೦ನೇ ತರಗತಿವರೆಗಿನ ಮಕ್ಕಳ ವಿವಿಧ ಆಟೋಟಗಳು ದಿನವಿಡಿ ಜರುಗಿದವು. ಮಕ್ಕಳ ಸಡಗರ ಸಂಭ್ರಮ ಮೇಳೈಸಿತ್ತು.ನಂತರ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಂಯೋಜಕಿ ಶೈಲಜಾ ಪಾಟೀಲ್, ಶಿಕ್ಷಕರಾದ ಜಯಶ್ರೀ,ರೇಣುಕಾ, ಅನ್ನಪೂರ್ಣ, ಜಯಂತ್ ಇತರರಿದ್ದರು.
ಕ್ರೀಡೆಗಳು ವಿದ್ಯಾರ್ಥಿಗಳ ಆತ್ಮವಿಶ್ವಾಸ ವೃದ್ಧಿಸಲು ಪೂರಕವಾಗಿವೆ. ಸ್ಪರ್ಧಾತ್ಮಕ ಮನೋಭಾವನೆ ಬೆಳೆದು ಸಾಧನೆ ಮಾಡಲು ಮಕ್ಕಳಲ್ಲಿ ಛಲ ಮೂಡಿಸುತ್ತದೆ.ಹೈಟೆಕ್ ತಂತ್ರಜ್ಞಾನ ಬಳಸಿಕೊಂಡು ಮಕ್ಕಳಿಗೆ ಪಾಠ ಮಾಡುವುದರ ಜತೆಗೆ ಅವರನ್ನು ಕ್ರೀಡೆ ಸೇರಿದಂತೆ ಎಲ್ಲ ತೆರನಾದ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸುವಂತೆ ಮಾಡಿ ಸಮಗ್ರ ಪರಿಪೂರ್ಣರಾಗಿಸಲು ಶಿಕ್ಷಕರು ಒತ್ತು ನೀಡಿ ಕೆಲಸ ಮಾಡುತ್ತಿದ್ದಾರೆ.
| ಆರತಿ ಮಲಶೆಟ್ಟಿ ವೇದಾ ಪಬ್ಲಿಕ್ ಶಾಲೆಯ ಸಂಸ್ಥಾಪಕ ಪ್ರಾಚಾರ್ಯರು
----