

ತುಮಕೂರು: ಜಿಲ್ಲೆಯ ಎಲ್ಲಾ ಹತ್ತು ತಾಲೂಕುಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿ ಪಡಿಸಲಾಗಿರುವ 50 ಅಮೃತ ಸರೋವರಗಳ ಅಂಗಳದಲ್ಲಿ ಸ್ವಾತಂತ್ರೊೃೀತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸುವ ಮೂಲಕ ವಿಶಿಷ್ಟವಾಗಿ ಸ್ವಾತಂತ್ರೃ ದಿನ ಆಚರಿಸಲಾಯಿತು.
ಹರಳೂರು ಗ್ರಾಪಂನ ದಿಣ್ಣೇಪಾಳ್ಯದ ಅಮೃತ ಸರೋವರ ಅಂಗಳದಲ್ಲಿ ಜಿಪಂ ಸಿಇಒ ಜಿ.ಪ್ರಭು ಸಮ್ಮುಖದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದ ನಿವೃತ್ತ ಸೇನಾನಿ ಧ್ವಜಾರೋಹಣ ನೇರವೇರಿಸಿದರು. ನಂತರ ವಸುಧೆಗೆ ವಂದನೆ ಕಾರ್ಯಕ್ರಮದಡಿ ವಿವಿಧ ಬಗೆಯ ಸಸಿಗಳನ್ನು ನೆಟ್ಟು ನೀರೆರೆ ಯಲಾಯಿತು. ದೇಶದ ಸ್ವಾತಂತ್ರ್ಯ ಮತ್ತು ರಕ್ಷಣೆಗಾಗಿ ದುಡಿದ, ಮಡಿದ ವೀರರ ಸವಿನೆನಪಿಗಾಗಿ ನಿರ್ಮಿಸಲಾಗಿದ್ದ ಶೀಲಾಫಲಕ್ಕಕ್ಕೆ ಗೌರವಾರ್ಪಣೆ ಸಲ್ಲಿಸಲಾಯಿತು. ಅಲ್ಲದೆ, ಸಭೆಯಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಪಂಚಪ್ರಾಣ ಶಪಥವನ್ನು ಬೋಧಿಸಲಾಯಿತು. ಜಿಲ್ಲೆಯ ಎಲ್ಲಾ 330 ಗ್ರಾಮ ಪಂಚಾಯಿತಿಗಳಲ್ಲಿ ‘ನನ್ನ ಮಣ್ಣ, ನನ್ನ ದೇಶ’ ಅಭಿಯಾನದ ಭಾಗವಾಗಿ ವಿಶೇಷವಾಗಿ ಸ್ವಾತಂತ್ರೊೃೀತ್ಸವ ಆಚರಿಸಲಾಯಿತು.
ಹರಳೂರಿನ ದಿಣ್ಣೇಪಾಳ್ಯದ ಅಮೃತಸರೋವರದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ನಿವೃತ್ತ ಸೇನಾನಿ ಬಿ.ಎಚ್.ಮೂರ್ತಿ, ಸ್ವಾತಂತ್ರ್ಯ ಬೆಲೆಕಟ್ಟಲಾರದ ಅತೀ ಅಮೂಲ್ಯವಾದದು. ಅದನ್ನು ಅತ್ಯಂತ ಜವಾಬ್ದಾರಿಯುತವಾಗಿ ಪ್ರತಿಯೊಬ್ಬರು ಕಾಪಾಡಿಕೊಳ್ಳಬೇಕು. ಪ್ರತಿಕ್ಷಣವೂ ನಮ್ಮ ದೇಶದ ಗಡಿಯನ್ನು ಕಾಯುತ್ತಿರುವ ಯೋಧರು ಹೊರಗಿನ ಶತ್ರುಗಳನ್ನು ಹಿಮ್ಮೆಟ್ಟಿಸುತ್ತಿದ್ದಾರೆ. ಅದೇ ರೀತಿ ಆಂತರಿಕವಾಗಿ ನಮ್ಮ ದೇಶದೊಳಗೆ ಪೊಲೀಸ್ ವ್ಯವಸ್ಥೆಯು ರಕ್ಷಣಾ ಕಾರ್ಯವನ್ನು ಕೈಗೊಳ್ಳುತ್ತಿದೆ ಎಂದರು.
ಹರಳೂರು ಗ್ರಾಪಂ ಅಧ್ಯಕ್ಷೆ ಎನ್.ಮೇಘ, ಉಪಾಧ್ಯಕ್ಷ ಕೃಷ್ಣಯ್ಯ, ಉಪ ಕಾರ್ಯದರ್ಶಿ ಅಭಿವೃದ್ಧಿ ಜಿ.ಎನ್. ನರಸಿಂಹಮೂರ್ತಿ, ತಾಪಂ ಇಒ ಮಂಜುನಾಥ್, ಯೋಜನಾಧಿಕಾರಿ ಲೋಕೇಶ್, ಪಿಡಿಒ ಶಂಕರ್, ಜಿಲ್ಲಾ ಐಇಸಿ ಸಂಯೋಜಕ ಉಮೇಶ್ ಹುಲಿಕುಂಟೆ, ತಾಲೂಕು ಐಇಸಿ ಸಂಯೋಜಕ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಅಮೃತ ಸ್ವಾತಂತ್ರೊೃೀತ್ಸವ ಹಿನ್ನೆಲೆಯಲ್ಲಿ ನನ್ನ ಮಣ್ಣು ನನ್ನ ದೇಶ ಅಭಿಯಾನದಡಿ ಜಿಲ್ಲೆಯ ಎಲ್ಲಾ ಗ್ರಾಪಂಗಳಲ್ಲಿ, ಅಮೃತ ಸರೋವರ ಅಂಗಳಲ್ಲಿ ವಿಶೇಷವಾಗಿ ಸ್ವಾತಂತ್ರೃ ದಿನ ಸಂಭ್ರಮ ಆಚರಿಸಲಾಗಿದೆ. ಮಣ್ಣು ಸಂಗ್ರಹಿಸುವ, ಸ್ವಾತಂತ್ರ್ಯ ಹೋರಾಟಗಾರರಿಗೆ, ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತವರ ಸೈನಿಕರ ಕುಟುಂಬದವರನ್ನು ಸನ್ಮಾನಿಸುವ ಕಾರ್ಯಕ್ರಮ, ಶಿಲಾಫಲಕಗಳಿಗೆ ಗೌರವಾರ್ಪಣೆ, ವಸುಧೆಗೆ ವಂದನೆ ಅಡಿ ಗಿಡ ನೆಡುವ , ಪಂಚಪ್ರಾಣ ಪ್ರತಿಜ್ಞಾವಿಧಿ ಬೋಧನೆ, ಧ್ವಜ ವಂದನೆ ನಡೆಸಲಾಗಿದೆ. ಜಿ.ಪ್ರಭು ಜಿಪಂ ಸಿಇಒ