

ಬೆಂಗಳೂರು: ಮಾನವನ ಜೀವನ ಮತ್ತು ಪ್ರಕೃತಿಯ ನಡುವಿನ ಸಮತೋಲನದಲ್ಲಿ ಪ್ರಾಣಿಗಳು ಮಹತ್ವದ ಪಾತ್ರ ವಹಿಸುತ್ತವೆ. ಹಾಗಾಗಿ ಬಹುತೇಕರಿಗೆ ಸಾಕುಪ್ರಾಣಿಗಳು ಮನೆಯ ಅವಿಭಾಜ್ಯ ಅಂಗವಾಗಿವಾಗಿರುತ್ತವೆ. ನಾಯಿ, ಬೆಕ್ಕು, ಪಕ್ಷಿಗಳು, ಕುದುರೆ, ಹಸು ಹೀಗೆ ತಮ್ಮ ನೆಚ್ಚಿನ ಪ್ರಾಣಿಗಳನ್ನು ಮನೆಯಲ್ಲಿ ಸಾಕುತ್ತಾರೆ. ಕೆಲವರು ಅವಶ್ಯಕತೆಗಳಿಗಾಗಿ ಇವನ್ನು ಸಾಕಿದರೆ, ಇನ್ನೂ ಕೆಲವರಿಗೆ ಇದು ಹವ್ಯಾಸ. ಅದೇನೇ ಇರಲಿ ಮನೆಯಲ್ಲಿ ಸಾಕುಪ್ರಾಣಿಗಳಿದ್ದರೆ ಪ್ರೀತಿ ಮತ್ತು ಹರ್ಷದ ಸಂಕೇತ ಎಂದರೆ ತಪ್ಪಾಗಲಾರದು. ಮನೆಗಳಲ್ಲಿ ಪ್ರಾಣಿಗಳನ್ನು ಸಾಕುವಾಗ ಕೆಲವೊಂದು ವಾಸ್ತು ಸಲಹೆಗಳನ್ನು ಪಾಲಿಸಬೇಕಾಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು. ಈ ನಿಟ್ಟಿನಲ್ಲಿ ಮನೆಗಳಲ್ಲಿ ಪ್ರಾಣಿಗಳು ಯಾವ ಜಾಗದಲ್ಲಿದ್ದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಲಿದೆ ಎಂಬ ಬಗ್ಗೆ ಕೆಲವು ಸಲಹೆಗಳನ್ನೂ ನೀಡಿದ್ದಾರೆ.
ಉತ್ತರ ಅಥವಾ ಪೂರ್ವ ಉತ್ತಮ
ನಾಯಿ ಸಾಕುವವರು ಅವುಗಳನ್ನು ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇರಿಸಬೇಕು. ಇದರಿಂದ ಪ್ರಾಣಿಗಳು ಮನೆಯಲ್ಲಿ ಸಂತೋಷದಿಂದ ಇರುತ್ತವೆ. ಮನೆಯವರ ಜೊತೆಗೆ ಉತ್ತಮ ರೀತಿಯಲ್ಲಿ ವರ್ತಿಸುತ್ತವೆ. ಆಗ್ನೇಯ ಮತ್ತು ನೈರುತ್ಯ ಜಾಗದಲ್ಲಿ ಇರಿಸಿದರೆ ಪ್ರಾಣಿಗಳು ಕೆಟ್ಟ ನಡವಳಿಕೆಯನ್ನು ಸೂಚಿಸುತ್ತವೆ. ನೀವೇನಾದರೂ ನಿಮ್ಮ ಮನೆಯಲ್ಲಿ ಕಪ್ಪು ನಾಯಿಯನ್ನು ಇಟ್ಟುಕೊಂಡಿದ್ದರೆ ಇದು ರಾಹು, ಕೇತು ಮತ್ತು ಶನಿ ಗ್ರಹಗಳ ದುಷ್ಪರಿಣಾಮವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಅಕ್ವೇರಿಯಂ ಎಲ್ಲಿರಬೇಕು?
ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಅಕ್ವೇರಿಯಂ ಇರಿಸುವುದು ಹವ್ಯಾಸವಾಗಿದೆ. ಮೀನುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಅದೃಷ್ಟ, ಸಮೃದ್ಧಿ ಮತ್ತು ಉತ್ತಮ ಆರೋಗ್ಯ ಹೊಂದಬಹುದಾಗಿದೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಮೀನು ಸಾಕುವವರು ಅಕ್ವೇರಿಯಂ ಅನ್ನು ಈಶಾನ್ಯ ಅಥವಾ ಪೂರ್ವ-ದಕ್ಷಿಣ ದಿಕ್ಕಿನಲ್ಲಿ ಇರಿಸಬೇಕು. ಇದರಿಂದ ದುಷ್ಟಶಕ್ತಿಗಳನ್ನು ದೂರವಿಡಲು ಸಹಕಾರಿಯಾಗುತ್ತದೆ. ಮನೆಯಲ್ಲಿ ವಾಸಿಸುವವರಲ್ಲಿ ಆತಂಕ ಹಾಗೂ ಖಿನ್ನತೆ ಕಡಿಮೆ ಮಾಡುತ್ತದೆ. ಅಕ್ವೇರಿಯಂ ಜತೆಗೆ ನೀವೇನಾದರೂ ಆಮೆ ಸಾಕಬೇಕೆಂದು ಬಯಸಿದರೆ ಅದನ್ನು ಉತ್ತರದಿಕ್ಕಿನಲ್ಲಿ ಇಟ್ಟರೆ ಉತ್ತಮ ಲಿತಾಂಶ ದೊರೆಯುತ್ತದೆ.
ಗೋವುಗಳಿಗೆ ವಾಯುವ್ಯ- ಪೂರ್ವ ಶ್ರೇಷ್ಠ
ಭಾರತೀಯ ಸಂಸ್ಕೃತಿಯಲ್ಲಿ ಹಸುಗಳಿಗೆ ಉತ್ತಮ ಸ್ಥಾನವಿದೆ. ಅಲ್ಲದೆ ಹಸುಗಳು ಶುಭದ ಸಂಕೇತವೂ ಆಗಿದೆ. ಆದರೆ ನಗರ ಪ್ರದೇಶಗಳಲ್ಲಿ ಹಸುಗಳನ್ನು ಕಟ್ಟುವುದು ಬಹಳ ಕಡಿಮೆ. ಆದಾಗಿಯೂ ಮನೆಯಲ್ಲಿ ಹಸು ಸಾಕುವುದೇ ಆದರೆ ಅವುಗಳನ್ನು ವಾಯುವ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಕಟ್ಟಿಹಾಕಬೇಕು. ಇದರಿಂದ ನಿಮ್ಮ ಮನೆಯಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ.
ಪಕ್ಷಿಗಳ ಪಂಜರ ಎಲ್ಲಿರಬೇಕು?
ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಪಕ್ಷಿಗಳನ್ನು ಸಾಕುವುದು ಹೆಚ್ಚು. ವಾಸ್ತು ಶಾಸದ ಪ್ರಕಾರ, ಮನೆಯಲ್ಲಿ ಗಿಳಿ ಸಾಕುವುದರಿಂದ ಉತ್ತಮ ಆರೋಗ್ಯ ಮತ್ತು ಪ್ರೀತಿ ತರುತ್ತದೆ. ಅದೃಷ್ಟವೂ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಗಿಳಿಗಳನ್ನು ಯಾವಾಗಲೂ ಉತ್ತರದಿಕ್ಕಿನಲ್ಲಿ ಇರುವಂತೆ ನೋಡಿಕೊಳ್ಳಬೇಕು. ಇದಲ್ಲದೆ ಇತರೆ ಪ್ರೀತಿಯ ಪಕ್ಷಿಗಳು ಸಹ ಅದೃಷ್ಟ ಎಂದು ಹೇಳಲಾಗುತ್ತದೆ. ಅವುಗಳ ಪಂಜರವನ್ನು ವಾಯುವ್ಯ, ಈಶಾನ್ಯ ಅಥವಾ ಪೂರ್ವದಿಕ್ಕಿನಲ್ಲಿಯೂ ಇಡಬಹುದು.
ಕುದುರೆಗಳನ್ನು ಎಲ್ಲಿ ಕಟ್ಟಬೇಕು?
ಕುದುರೆ ಸಾಕುವುದು ಸಾಮಾನ್ಯ ಜನರಿಗೆ ಸಾಧ್ಯವಾಗದು. ಆರ್ಥಿಕವಾಗಿ ಉಳ್ಳವರು ಕುದುರೆ ಬಗ್ಗೆ ಗೀಳು ಹೊಂದಿರುವವರು ಸಾಕುತ್ತಾರೆ. ಕುದುರೆಗಳು ಪ್ರತಿಷ್ಠೆ, ಧೈರ್ಯ, ಅಧಿಕಾರ ಮತ್ತು ಸ್ವಾತಂತ್ರ್ಯದ ಸಂಕೇತ. ಕುದುರೆಗಳನ್ನು ಹೊಂದಿರುವವರು ಜೀವನದಲ್ಲಿ ಎಲ್ಲಾ ಹಂತಗಳಲ್ಲೂ ಯಶಸ್ವಿಯಾಗುತ್ತಾರೆ ಎಂದು ಹೇಳಲಾಗುತ್ತದೆ. ಕುದುರೆಗಳನ್ನು ಯಾವಾಗಲೂ ಮನೆಯ ಪಶ್ಚಿಮ ಅಥವಾ ವಾಯುವ್ಯ ದಿಕ್ಕಿನಲ್ಲಿ ಇರುವಂತೆ ನೋಡಿಕೊಳ್ಳಬೇಕು.
ಪ್ರತ್ಯೇಕ ವಾಸ, ಆಹಾರ
ಹಿಂದೆಲ್ಲ ಸಾಕುಪ್ರಾಣಿಗಳಿಗೆ ಪ್ರತ್ಯೇಕ ವಾಸ ಹಾಗೂ ಆಹಾರ ಅಂತೇನು ಇರಲಿಲ್ಲ. ಮನೆಯವರು ಉಂಡು ಬಿಟ್ಟ ಆಹಾರವನ್ನೇ ನೀಡಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಮುದ್ದಿನ ಪ್ರಾಣಿಗಳನ್ನು ಮನೆ ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಯಿಂದ ನೋಡಿಕೊಳ್ಳಲಾಗುತ್ತಿದೆ. ಅದಕ್ಕಾಗಿ ಪ್ರತ್ಯೇಕ ವಾಸ ಸ್ಥಳ ನಿರ್ಮಾಣ ಮಾಡುವುದರ ಜತೆಗೆ ಪ್ರತ್ಯೇಕವಾಗಿ ಆಹಾರ ತಯಾರಿಸಲಾಗುತ್ತದೆ. ಇಂದು ಮಾರುಕಟ್ಟೆಗಳಲ್ಲಿ ಸಾಕು ಪ್ರಾಣಿಗಳಿಗಾಗಿಯೇ ಸಿದ್ಧ ಆಹಾರಗಳು ಲಭ್ಯವಿದೆ. ಹಾಗೇನಾದರೂ ಅವುಗಳು ಅನಾರೋಗ್ಯಕ್ಕೆ ಈಡಾದರೆ ವೈದ್ಯರಲ್ಲಿ ಚಿಕಿತ್ಸೆ ಸಹ ಕೊಡಿಸಲಾಗುತ್ತದೆ. ಸಾಕುಪ್ರಾಣಿಗಳನ್ನು ಇಂದಿನ ಯುಗದಲ್ಲಿ ಮನೆಯ ಒಬ್ಬ ಸದಸ್ಯನಂತೆ ನೋಡಿಕೊಳ್ಳಲಾಗುತ್ತಿದೆ. ಹಾಗಾಗಿ ಅವುಗಳನ್ನು ಮನೆಯ ಯಾವ ಯಾವ ಸ್ಥಳದಲ್ಲಿ ಇರಿಸಿದರೆ ಉತ್ತಮ ಎಂಬುದನ್ನು ತಿಳಿದು ಅದರಂತೆ ಅವುಗಳ ವಾಸಸ್ಥಳವನ್ನು ನಿರ್ಮಿಸಿದರೆ ಉತ್ತಮವಾದ ಅಭಿವೃದ್ಧಿ ಕಾಣಬಹುದು ಎನ್ನುತ್ತಾರೆ ವಾಸ್ತು ತಜ್ಞರು.