ಆಸ್ಪತ್ರೆಗಳು ಸೇವೆಯನ್ನು ಉದ್ದೇಶವಾಗಿಸಿಕೊಳ್ಳಬೇಕು: ಸಚಿವ ದಿನೇಶ್ ಗುಂಡೂರಾವ್

Vasavi hospital
Published on

ಬೆಂಗಳೂರು: ಆಸ್ಪತ್ರೆಗಳು ಸೇವೆಯನ್ನು ಪ್ರಮುಖ ಉದ್ದೇಶವಾಗಿಟ್ಟುಕೊಂಡು ಜನರಿಗೆ ಸೇವೆ ನೀಡಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ನಗರದ ವಾಸವಿ ಆಸ್ಪತ್ರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ 3-ಟೆಸ್ಲಾ ಎಂಆರ್‌ಐ ಯಂತ್ರ ಮತ್ತು 128-ಸ್ಲೆ ಸ್ ಸ್ಕಾೃನರ್ ಉದ್ಘಾಟಿಸಿ ಅವರು ಮಾತನಾಡಿದರು.

ಸುಧಾರಿತ ವೈದ್ಯಕೀಯ ಉಪಕರಣಗಳನ್ನು ಪರಿಚಯಿಸುವ ಮೂಲಕ ವಾಸವಿ ಆಸ್ಪತ್ರೆ ಸಾಮಾಜಿಕ ಆರೋಗ್ಯ ಕಳಕಳಿ ಹಾಗೂ ತನ್ನ ಬದ್ಧತೆ ಸಾಭೀತುಪಡಿಸಿದೆ. ಕಾರ್ಪೊರೇಟ್ ಜಗತ್ತಿನಲ್ಲಿ ಅತ್ಯಾಧುನಿಕ ಉಪಕರಣಗಳೊಂದಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಕೈಗೆಟುಕುವ ದರದಲ್ಲಿ ನೀಡುತ್ತಿರುವ ವಾಸವಿ ಆಸ್ಪತ್ರೆಯ ಕಾರ್ಯ ವೈಖರಿ ಶ್ಲಾಘನೀಯವಾದದ್ದು ಎಂದ ಅವರು, ಕೇವಲ ಲಾಭವನ್ನೇ ನೋಡುವುದಕ್ಕಿಂತ ಸಮಾಜದ ಹಿತಕ್ಕಾಗಿ ಆಸ್ಪತ್ರೆಗಳು ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಇದೇ ವೇಳೆ ಕರೂರ್ ವೈಶ್ಯ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಬಿ. ರಮೇಶ್ ಬಾಬು ಅವರು, ಜಾಯಿಂಟ್ ರಿಪ್ಲೇಸ್‌ಮೆಂಟ್ ಸರ್ಜರಿಗಳಿಗಾಗಿ ಅಳವಡಿಸಿರುವ ಮ್ಯಾಕೋ ರೋಬೋಟಿಕ್ ಉಪಕರಣಗಳನ್ನು ಉದ್ಘಾಟಿಸಿ ಮಾತನಾಡಿದರು. ವಾಸವಿ ಆಸ್ಪತ್ರೆಯು ವಿಶ್ವಾಸಾರ್ಹ ಮಲ್ಟಿ-ಸ್ಪೆಷಾಲಿಟಿ ಸಂಸ್ಥೆಯಾಗಿ ಬೆಳೆದಿದ್ದು, ಕಡಿಮೆ ವೆಚ್ಚದಲ್ಲಿ ಉನ್ನತ ಶ್ರೇಣಿಯ ವೈದ್ಯಕೀಯ ಸೇವೆಯನ್ನು ಒದಗಿಸುವ ಮೂಲಕ ಎಲ್ಲಾ ವರ್ಗದ ಜನರಿಗೂ ಸೇವೆ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜ್ ಅವರು ವಾಸವಿ ಆಸ್ಪತ್ರೆಯ ಗ್ರಾಮಾಂತರ ಆಂಬ್ಯುಲೆನ್ಸ್ ಉಪಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ವಾಸವಿ ಆಸ್ಪತ್ರೆಯ ಅಧ್ಯಕ್ಷ ಸುಬ್ರಮಣ್ಯ ಗುಪ್ತಾ, ಚೇರ್‌ಮೆನ್ ಶ್ರೀನಿವಾಸ್ ಗುಪ್ತಾ ಮತ್ತು ವೈಸ್ ಚೇರ್‌ಮೆನ್ ಸುಬ್ಬರಾಜು ಹಾಗೂ ಇತರೆ ದಾನಿಗಳು ಮತ್ತು ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net