

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಶನಿವಾರ ಒಂದೂವರೆ ಗಂಟೆಗೂ ಹೆಚ್ಚು ಕಾಲ ಜೋರು ಮಳೆ ಸುರಿದಿದ್ದು, ಬಿಸಿಲ ಬೇಗೆಯಿಂದ ಬಸವಳಿದಿದ್ದ ಭಕ್ತರು ತಂಪು ಅನುಭವ ಪಡೆದರು.
ಮ.ಬೆಟ್ಟದಲ್ಲಿ ಬೆಳಗ್ಗೆ ಬಿಸಿಲಿನ ತಾಪಮಾನ ಹೆಚ್ಚಾಗಿತ್ತು. ಮಧ್ಯಾಹ್ನದ ಹೊತ್ತಿಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. 3 ಗಂಟೆಯಲ್ಲಿ ಆರಂಭವಾದ ಜೋರು ಮಳೆ ಸುಮಾರು ಒಂದೂವರೆ ಗಂಟೆ ಸುರಿಯಿತು. ಎರಡನೇ ಶನಿವಾರ ಹಾಗೂ ಭಾನುವಾರ ರಜೆ ಹಿನ್ನೆಲೆ ಹೆಚ್ಚಿನ ಭಕ್ತರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಬಿರು ಬಿಸಿಲಿನ ನಡುವೆಯೂ ಹರಕೆ, ಉತ್ಸವಾದಿ ಸೇವೆ ಹಾಗೂ ಪೂಜೆ ಕೈಂಕರ್ಯದಲ್ಲಿ ತೊಡಗಿದ್ದರು. ಮಧ್ಯಾಹ್ನದ ಬಳಿಕ ಉತ್ತಮ ಮಳೆಯಾದ್ದರಿಂದ ಭಕ್ತರು ತಂಪು ಅನುಭವ ಪಡೆದರು. ಹೆಚ್ಚಿನ ಭಕ್ತರು ರಂಗಮಂದಿರ, ರಾಜಗೋಪುರದ ಬಳಿ ಅಳವಡಿಸಿರುವ ಶಾಮಿಯಾನದ ಬಳಿ ಆಶ್ರಯ ಪಡೆದರು.
ಇನ್ನು ಮ.ಬೆಟ್ಟ ಭಾಗದ ಜಮೀನುಗಳಲ್ಲಿ ಕೆಲವರು ಬಿತ್ತನೆ ಮಾಡಿದ್ದರು. ಕಳೆದ ಒಂದು ವಾರದಿಂದಲೂ ಮಳೆಯಾಗಿರಲಿಲ್ಲ. ಇದರಿಂದ ಪೈರುಗಳು ಬಿಸಿಲಿನ ತಾಪಕ್ಕೆ ಒಣಗುತ್ತಿದ್ದವು. ಆದರೆ ಶನಿವಾರ ಉತ್ತಮ ಮಳೆಯಾದ್ದರಿಂದ ಪೈರುಗಳಿಗೆ ಜೀವಕಳೆ ಬಂದಂತಾಗಿದೆ. ರೈತರಲ್ಲಿ ಖುಷಿ ವ್ಯಕ್ತವಾಗಿದೆ. ಮಳೆಯಾದ ದೃಶ್ಯವನ್ನು ಭಕ್ತರೊಬ್ಬರು ಸೆರೆ ಹಿಡಿದು ಶ್ರೀ ಮಲೆಮಹದೇಶ್ವರ ಸ್ವಾಮಿ ದಕ್ಷಿಣ ದ್ವಾರ ಹನೂರು ಕ್ಷೇತ್ರ ಫೇಸ್‌ಬುಕ್ ಖಾತೆಯಲ್ಲಿ ಹರಿ ಬಿಟ್ಟು ಖುಷಿ ವ್ಯಕ್ತಪಡಿಸಿದ್ದಾರೆ.