ವರುಣನ ಆಟ ನೇಗಿಲಯೋಗಿ ಪರದಾಟ

gadde
ಅಕಾಲಿಕ ಮಳೆಯಿಂದ ಗದ್ದೆಯಲ್ಲೇ ಉಳಿದ ಕಟಾವಿಗೆ ಸಿದ್ಧವಾದ ಪೈರು.
Published on

ಹರಿಪ್ರಸಾದ್ ನಂದಳಿಕೆ ಕಾರ್ಕಳ ಕಷ್ಟಪಟ್ಟು ಬೆಳೆದ ಭತ್ತದ ಪೈರು ಇನ್ನೇನು ಮನೆಯಂಗಳ ಸೇರಲು ಸಿದ್ಧವಾಗಿದ್ದು, ಆದರೆ ವಾರದಿಂದ ಸುರಿಯುತ್ತಿರುವ ಸತತ ಮಳೆಯಿಂದ ಪೈರು ಗದ್ದೆಯಲ್ಲೇ ಉಳಿಯುವಂತಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಇಲ್ಲವೆಂಬಂತೆ ಇದು ರೈತನ ಚಿಂತೆಯನ್ನು ಇಮ್ಮಡಿಗೊಳಿಸಿದೆ. ಅವಿಭಜಿತ ದ.ಕ. ಹಾಗೂ ಉಡುಪಿ ಜಿಲ್ಲಾದ್ಯಂತ ಸಾವಿರಾರು ಎಕರೆಯಲ್ಲಿ ಮಾಡಿದ ಭತ್ತದ ಕೃಷಿಯನ್ನೇ ನಂಬಿಕೊಂಡಿರುವ ರೈತರು ಇದೀಗ ಅಕಾಲಿಕ ಮಳೆಯಿಂದಾಗಿ ಕಂಗಾಲಾಗಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ, ಕಾರ್ಕಳ, ಕಾಪು ಹಾಗೂ ಮಂಗಳೂರಿನ ಕೆಲವೊಂದು ಗ್ರಾಮೀಣ ಭಾಗದ ಗದ್ದೆಯಲ್ಲಿ ಬೆಳೆದ ಪೈರು ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ. ಮಳೆಗಾಲ ಆರಂಭದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ಬಿತ್ತನೆ ಕಾರ್ಯಕ್ಕೆ ವಿಳಂಬವಾಗಿತ್ತು. ಬಳಿಕ ಬಿತ್ತನೆ ಕಾರ್ಯ ನಡೆದರೂ ಸುರಿದ ಮಳೆಯಿಂದ ಬಿತ್ತಿದ ಬೀಜ ನೀರುಪಾಲಾಗಿತ್ತು. ಜತೆಗೆ ಪ್ರಕೃತಿ ವಿಕೋಪಗಳಿಂದ ನೂರಾರು ಹೆಕ್ಟೇರ್ ಪ್ರದೇಶಗಳಿಗೂ ಹಾನಿಯಾಗಿತ್ತು. ಉಳಿದ ಭತ್ತ ಕಟಾವುಗೊಳಿಸಲು ರೈತರು ಮುಂದಾಗುತ್ತಿದ್ದಂತೆ ಮತ್ತೊಮ್ಮೆ ಮಳೆ ಸುರಿದು ಅಡ್ಡಿಯಾಗಿದೆ.

ರೈತರಿಗೆ ಆರ್ಥಿಕ ಸಂಕಷ್ಟ

ಸತತ ಮಳೆ ಕಾರಣದಿಂದ ಹೊರ ರಾಜ್ಯಗಳಿಂದ ಬಂದ ಕಟಾವು ಯಂತ್ರಗಳು ಸ್ಥಳೀಯ ಮೈದಾನದಲ್ಲಿ, ಹೆದ್ದಾರಿ ಪಕ್ಕದಲ್ಲಿ, ಪೆಟ್ರೋಲ್ ಬಂಕ್‌ಗಳಲ್ಲಿ ಲಂಗಾರು ಹಾಕಿವೆ. ಭತ್ತದ ಬೆಳೆ ಕೈಕೊಟ್ಟಿದ್ದರಿಂದ ಅನೇಕ ರೈತರು ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿದ್ದು, ಕೃಷಿಗಾಗಿ ಮಾಡಿದ ಸಾಲ ತೀರಿಸಲು ಹರಸಾಹಸ ಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ಕೃಷಿ ಇಲಾಖೆ ಸಹಿತ ವಿವಿಧ ಮೂಲಗಳಿಂದ ನೆರವಿನ ನಿರೀಕ್ಷೆಯಲ್ಲಿ ರೈತರಿದ್ದಾರೆ.

ಕಳೆದ ವಾರದಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಕಟಾವಿಗೆ ಸಿದ್ಧವಾದ ಪೈರು ಮಳೆ ನೀರಿಗೆ ಆಹುತಿಯಾಗಿದೆ. ದೀಪಾವಳಿ ಕಳೆಯುತ್ತಿದ್ದಂತೆ ಬಹುತೇಕ ಕಡೆಗಳಲ್ಲಿ ಕಟಾವು ಕಾರ್ಯ ಆರಂಭವಾಗುತ್ತದೆ. ಆದರೆ ಈ ಬಾರಿ ಮಳೆಯಿಂದ ಮತ್ತಷ್ಟು ವಿಳಂಬವಾಗಿ ಪೈರು ಗದ್ದೆಯಲ್ಲೇ ಉಳಿಯುವಂತಾಗಿದೆ. ಜಗನ್ನಾಥ್ ಶೆಟ್ಟಿ, ಕೃಷಿಕ ಬಿತ್ತನೆ ಮಾಡುವ ಸಂದರ್ಭ ಮಳೆಯಿಂದ ಇಾಕಷ್ಟು ಎಕರೆ ಕೃಷಿಗೆ ಹಾನಿಯಾಗಿತ್ತು. ಇದೀಗ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಕಟಾವಿಗೂ ತೊಂದರೆಯಾಗಿದೆ. ಹೀಗಾಗಿ ಮನೆಯಂಗಳ ಸೇರಬೇಕಾಗಿದ್ದ ಫಸಲು ಗದ್ದೆಯಲ್ಲೇ ಬಾಕಿಯಾಗಿದೆ. ವಸಂತ್ ಪೂಜಾರಿ, ಕೃಷಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net