ಉದ್ಯಾನನಗರಿಯಲ್ಲಿ ವರುಣಾರ್ಭಟ: 5 ದಿನ ಸಾಧಾರಣ ವರ್ಷಧಾರೆ

Rain-shower-3
Published on

ಬೆಂಗಳೂರು: ಕೆಲ ದಿನ ಕೊಂಚ ಬಿಡುವು ಕೊಟ್ಟಿದ್ದ ಮಳೆ ಸೋಮವಾರ ರಾಜಧಾನಿಯಲ್ಲಿ ಧಾರಾಕಾರವಾಗಿ ಸುರಿಯಿತು. ರಾಜ್ಯದಲ್ಲಿ ಮಳೆ ಣವಾಗಿದ್ದ ಬೆನ್ನಲ್ಲೇ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬಿಸಿಲು ವಾತಾವರಣ ಕಾಣಿಸಿಕೊಂಡಿತ್ತು. ಸಂಜೆ 4 ಗಂಟೆ ಬಳಿಕ ಮೋಡ ಕವಿದ ವಾತಾವರಣವಿತ್ತು. ಸಂಜೆ 5.10ಕ್ಕೆ ಶುರುವಾದ ಜೋರು ಮಳೆ ಮಧ್ಯರಾತ್ರಿವರೆಗೂ ಬಿತ್ತು.

ಕೋರಮಂಗಲ, ಮಡಿವಾಳ, ವಿಲ್ಸನ್​ ಗಾರ್ಡನ್​, ಡೇರಿ ಸರ್ಕಲ್​, ಜಕ್ಕೂರು, ಕೆ.ಆರ್​. ಮಾರುಕಟ್ಟೆ, ಮೆಜೆಸ್ಟಿಕ್​, ದಯಾನಂದನಗರ, ಜಯನಗರ, ಜೆ.ಪಿ.ನಗರ, ಬಸವನಗುಡಿ, ಕತ್ತರಿಗುಪ್ಪೆ, ಇಟ್ಟಮಡು, ನಾಯಂಡಹಳ್ಳಿ, ಮೈಸೂರು ರಸ್ತೆ, ಕೆಂಗೇರಿ, ವಿಜಯನಗರ, ಮಲ್ಲೇಶ್ವರ, ಯಶವಂತಪುರ, ಪೀಣ್ಯ, ಜಾಲಹಳ್ಳಿ ಕ್ರಾಸ್​, ಹೆಬ್ಬಾಳ ಸೇರಿ ನಗರದ ಹಲವು ಭಾಗಗಳಲ್ಲಿ ಸಂಜೆ ಸುಮಾರು ಮುಕ್ಕಾಲು ಗಂಟೆ ಕಾಲ ಬಿರುಸಾಗಿ ಸುರಿಯಿತು.

ಪರಿಣಾಮ ಕೆಲವೆಡೆ ಮುಖ್ಯರಸ್ತೆ ಜಲಾವೃತಗೊಂಡಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಮೇಲ್ಸುತುವೆಗಳಲ್ಲಿ ವಾಹನಗಳು ನಿಧಾನವಾಗಿ ಸಾಗಿದವು. ರಾಜಕಾಲುವೆಯಲ್ಲಿ ರಭಸದಿಂದ ನೀರು ಹರಿಯುತ್ತಿತ್ತು. ಕಾಮಗಾರಿ ನಡೆಸುತ್ತಿದ್ದ ಜಾಗದಲ್ಲಿ ನೀರು ನಿಂತಿರುವ ದೃಶ್ಯ ಕಂಡುಬಂತು. ಕೆಲವರು ಮಳೆಯಲ್ಲಿಯೇ ನೆನೆದುಕೊಂಡು ಹೋಗುತ್ತಿದ್ದರೆ, ಇನ್ನೂ ಕೆಲವರು ಬಸ್​ನಿಲ್ದಾಣ, ಮರದ ಕೆಳಗಡೆ ನಿಂತು ಆಶ್ರಯ ಪಡೆದರು.

ಬೆಳ್ಳಂದೂರು, ಮಾರತ್ತಹಳ್ಳಿ, ವಿಶ್ವೇಶ್ವರಪುರ, ಎಚ್​ಎಸ್​ಆರ್​ಲೇಔಟ್​, ರಾಮೋಹಳ್ಳಿ, ಚಾಮರಾಜಪೇಟೆ, ಅಡಕಮಾರನಹಳ್ಳಿ, ಚೋಳನಾಯಕನಹಳ್ಳಿಯಲ್ಲಿ ಸರಾಸರಿ 10 ಮಿಮೀ ವರ್ಷಧಾರೆಯಾಯಿತು. ನಗರದಲ್ಲಿ ಮುಂದಿನ ಐದು ದಿನ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ. ಕೆಲವೆಡೆ ತುಸು ಬಿರುಸಾಗಿ ಸುರಿದರೆ ಇನ್ನೂ ಕೆಲವೆಡೆ ಸಾಧಾರಣ ಪ್ರಮಾಣದಲ್ಲಿ ಗಾಳಿಸಹಿತ ಮಳೆಯಾಗಲಿದೆ. ಮುಂದಿನ 2 ದಿನ ಮೋಡ ಕವಿಡ ವಾತಾವರಣ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಡಿ.ಸೆ ಮತ್ತು 21 ಡಿ.ಸೆ. ಇರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ವಾಡಿಕೆಗಿಂತ ಅಧಿಕ

ಈ ಬಾರಿ ನಗರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಜೂ 1ರಿಂದ ಆ.5ರವರೆಗೆ 185 ಮಿಮೀ ಮಳೆಯಾಗಬೇಕಿತ್ತು. ಆದರೆ, 245 ಮಿಮೀ ಬಿದ್ದಿದ್ದು, ವಾಡಿಕೆಗಿಂತ ಶೇ.32 ಅಧಿಕ. ಜೂನ್​ನಲ್ಲಿ 71 ಮಿಮೀ ಮಳೆ ಬದಲಾಗಿ 138 ಮಿಮೀ ಸುರಿಯುವ ಮೂಲಕ ಶೇ.93 ವಾಡಿಕೆಗಿಂತ ಹೆಚ್ಚು ಬಿದ್ದಿತ್ತು. ಜುಲೈನಲ್ಲಿ 94 ಮಿಮೀ ಮಳೆಯಾಗಬೇಕಿತ್ತು. ಆದರೆ, 78 ಮಿಮೀ ಸುರಿದಿದ್ದು, ವಾಡಿಕೆಗಿಂತ ಶೇ.17ರಷ್ಟು ಕಡಿಮೆ. ಆ.1ರಿಂದ ಆ.5ರವರೆಗೆ ಒಟ್ಟು 20 ಮಿಮೀ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿರುವ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net