ವರುಣನ ಆರ್ಭಟ, ಜನಜೀವನ ಅಸ್ತವ್ಯಸ್ತ

23-hvr-03b
Published on

ಹಾವೇರಿ: ಜಿಲ್ಲೆಯಾದ್ಯಂತ ವರುಣನ ಆರ್ಭಟ ಹೆಚ್ಚಾಗಿದೆ. ನದಿಗಳಲ್ಲಿನ ಹರಿವು ಹೆಚ್ಚಿ 20ಕ್ಕೂ ಅಧಿಕ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಮಾಸೂರ-ಶಿಕಾರಿಪುರ, ನಾಗನೂರ-ಕೂಡಲ, ಹಾವೇರಿ-ಹಾನಗಲ್ಲ, ದೇವಗಿರಿ-ಕಳಸೂರ ಸೇರಿ ಹಲವು ಗ್ರಾಮಗಳ ಸಂಪರ್ಕ ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಹಾನಗಲ್ಲ ತಾಲೂಕಿನಲ್ಲಿ 5 ಗ್ರಾಮಗಳ ಜನರನ್ನು ಸ್ಥಳಾಂತರಿಸಲು ಸಿದ್ಧತೆ ನಡೆದಿದೆ. ರಟ್ಟಿಹಳ್ಳಿ ತಾಲೂಕಿನಲ್ಲಿ ಕುಮದ್ವತಿ ನದಿಯ ಹರಿವು ಹೆಚ್ಚಳದಿಂದ ತಿಪ್ಪಾಯಿಕೊಪ್ಪ ಗ್ರಾಮದ ಸೇತುವೆ ಮುಳಗಡೆಯಾಗಿ ಮಾಸೂರ- ಶಿಕಾರಿಪುರ ಸಂಚಾರ ಸ್ಥಗಿತಗೊಂಡಿದೆ.

ಬೈರನಪಾದದ ಬಳಿ ಇರುವ ತುಂಗ ಭದ್ರಾ ನದಿಯಿಂದ ಹಿರೇಕೆರೂರ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜಾಗುವ ಸುಣ್ಣದ ಕಾಲುವೆಯಲ್ಲಿ ಅಳವಡಿಸಿರುವ ಪೈಪ್​ಲೈನ್ ಮಳೆಯ ನೀರಿನ ರಭಸಕ್ಕೆ ಒಡೆದು ಹೋಗಿದ್ದು, ಹಿರೇಕೆರೂರ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಅಕ್ಕಿಆಲೂರ-ಅರೇಲಕ್ಮಾಪುರ, ಅಕ್ಕಿಆಲೂರ- ಕುಂಟನಹೊಸಳ್ಳಿ ರಸ್ತೆಗಳು ಜಲಾವೃತಗೊಂಡಿವೆ. ಅಕ್ಕಿಆಲೂರಿನಲ್ಲಿ ಕೆಲವರ ಮನೆಯ ನೆಲಮಹಡಿಯಲ್ಲಿ ನೀರು ನುಗ್ಗಿದೆ. ಹಾನಗಲ್ಲ ತಾಲೂಕು ಚಿಕ್ಕೇರಿಹೊಸಳ್ಳಿ ಭಾಗಶಃ ಜಲಾವೃತವಾಗಿದೆ.

ಜಿಲ್ಲೆಯ ರಾಣೆಬೆನ್ನೂರು, ಹಿರೇಕೆರೂರು, ರಟ್ಟಿಹಳ್ಳಿ, ಹಾನಗಲ್ಲ ಹಾಗೂ ಹಾವೇರಿ ತಾಲೂಕಿನಲ್ಲಿ ಮಳೆ ಅಬ್ಬರ ಹೆಚ್ಚಿದ್ದು, ಹಾನಗಲ್ಲ ತಾಲೂಕಿನ ಹಿರೇಕಣಗಿ ಗ್ರಾಮದ ಮನೆಯೊಳಗೆ ನೀರು ನುಗ್ಗಿದೆ. ರಟ್ಟಿಹಳ್ಳಿ ತಾಲೂಕಿನ ಮಾಸೂರು ರಸ್ತೆಯಲ್ಲೂ ನೀರಿನ ತುಂಬಿದೆ. ಹಿರೇಕೆರೂರು ತಾಲೂಕಿನ ಶಿರಗುಂಬಿಯಲ್ಲಿ ರಸ್ತೆ ಹಾಗೂ ಜಮೀನಿಗೆ ಹಳ್ಳದ ನೀರು ನುಗ್ಗಿದೆ. ಯಾರೂ ನದಿಗಳ ಕಡೆ ಹೋಗದಂತೆ ಗ್ರಾಮಗಳಲ್ಲಿ ಡಂಗುರ ಸಾರಲಾಗುತ್ತಿದೆ.

ಜಿಲ್ಲೆಯಲ್ಲಿ 92 ಮನೆ ಕುಸಿತ

ನಿರಂತರ ಮಳೆಗೆ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಹಾಗೂ ಶುಕ್ರವಾರ ಬೆಳಗಿನ ಅವಧಿಯಲ್ಲಿ 92ಕ್ಕೂ ಅಧಿಕ ಮನೆಗಳು ಕುಸಿತವಾಗಿವೆ. ಅದರಲ್ಲಿ ಹಾನಗಲ್ಲ ತಾಲೂಕಿನಲ್ಲಿಯೇ 25ಕ್ಕೂ ಅಧಿಕ ಮನೆಗಳು ಕುಸಿದಿವೆ. ಮನೆ ಕುಸಿದು ಮೂರು ಜನರು ಸಣ್ಣಪುಟ್ಟ ಗಾಯಗೊಂಡ ಘಟನೆ ಹಾವೇರಿ ತಾಲೂಕಿನ ಹೊಸಕಿತ್ತೂರು ಗ್ರಾಮದಲ್ಲಿ ನಡೆದಿದೆ. ಮಲ್ಲಮ್ಮ ಸಂತಂಗೇರ ಎಂಬುವರಿಗೆ ಸೇರಿದ ಮನೆ ಬಿದ್ದಿದೆ. ಸವಣೂರ ತಾಲೂಕು ಕಳಸೂರ ಗ್ರಾಮದಲ್ಲಿ ವಸಂತ ಶಿವಪ್ಪ ಜಾಗಟೇರವರ ಎಂಬುವರ ಮನೆಯೂ ಕುಸಿದಿದೆ.

ತಾಲೂಕುವಾರು ಸಹಾಯವಾಣಿ

ಅತಿವೃಷ್ಟಿ ಹಾಗೂ ಪ್ರವಾಹದಿಂದ ತೊಂದರೆಯಾದರೆ ಸಾರ್ವಜನಿಕರು ಸಂರ್ಪಸಲು ತಾಲೂಕುವಾರು ಸಹಾಯವಾಣಿ ತೆರೆಯಲಾಗಿದೆ. ಹಾವೇರಿ ಜಿಲ್ಲಾಧಿಕಾರಿಯಲ್ಲಿ ಸಹಾಯವಾಣಿ ಸಂಖ್ಯೆ 08375-249102, ಹಾವೇರಿ ತಹಸೀಲ್ದಾರ್ ಕಚೇರಿ 08375-232445, ರಾಣೆಬೆನ್ನೂರ 08373-260449, ಬ್ಯಾಡಗಿ 08375-228428, ಹಿರೇಕೆರೂರ 08376-282231, ರಟ್ಟಿಹಳ್ಳಿ 9008692647, ಸವಣೂರ 08378-241626, ಶಿಗ್ಗಾಂವಿ 8147050299, ಹಾನಗಲ್ಲ 08379-262241

ಕುಮದ್ವತಿ ನದಿ ನೀರು ನುಗ್ಗಿ ಗುಡಿಸಲು ನಿವಾಸಿಗಳಿಗೆ ತೊಂದರೆ

ರಾಣೆಬೆನ್ನೂರ: ಮಳೆಯಿಂದ ನಗರ ಸೇರಿ ತಾಲೂಕಿನಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ.

ತಾಲೂಕಿನಲ್ಲಿ ಕುಮದ್ವತಿ ನದಿ ಉಕ್ಕಿ ಹರಿಯುತ್ತಿದ್ದು, ಚಿಕ್ಕಮಾಗ ನೂರ-ಹಿರೇಮಾಗನೂರ ಹಾಗೂ ನಂದಿಹಳ್ಳಿ-ಅಂತರವಳ್ಳಿ ಸಂಪರ್ಕ ಸೇತುವೆಗಳು ಸಂಪೂರ್ಣ ಮುಳಗಿ ಹೋಗಿವೆ. ಇದರಿಂದ ಈ ನಾಲ್ಕು ಗ್ರಾಮಗಳು ಸೇರಿ ಸುತ್ತಲಿನ ಗ್ರಾಮಗಳಿಗೂ ಸಂಪರ್ಕ ಕಡಿತಗೊಂಡಿದೆ. ತುಮ್ಮಿನಕಟ್ಟಿ, ಕುಪ್ಪೇಲೂರ, ಕುದರಿಹಾಳ, ಊದಗಟ್ಟಿ, ದೇವರಗುಡ್ಡ, ಕಾಕೋಳ ಹಾಗೂ ನಗರ ಪ್ರದೇಶ ಸೇರಿ ಶುಕ್ರವಾರ ಒಟ್ಟು 15 ಮನೆಗಳಿಗೆ ಭಾಗಶಃ ಹಾನಿಯಾಗಿವೆ. ಚಿಕ್ಕಮಾನಗೂರ ಗ್ರಾಮದ ರುದ್ರವ್ವ ಬಳಿಗಾರ, ಮಂಜಪ್ಪ ಚಲವಾದಿ ಎಂಬುವರ ಮನೆ ಸಂಪೂರ್ಣ ಕುಸಿದು ಬಿದ್ದಿವೆ. ಮನೆ ಗೋಡೆ ಹಾಗೂ ಮೇಲ್ಛಾವಣಿ ಕುಸಿದು ಬಿದ್ದಿದ್ದರಿಂದ ತುಮ್ಮಿನಕಟ್ಟಿ, ಕುಪ್ಪೇಲೂರ, ಚಿಕ್ಕಮಾಗನೂರ ಭಾಗದಲ್ಲಿ ಜನರು ಅಕ್ಕಪಕ್ಕದ ಮನೆಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಗುಡಿಸಲು ನಿವಾಸಿಗಳಿಗೆ ತೊಂದರೆ: ನಂದಿಹಳ್ಳಿ, ಕುಪ್ಪೇಲೂರ, ಲಿಂಗದಹಳ್ಳಿ, ಮುಷ್ಟೂರು, ಮಣಕೂರ ಗ್ರಾಮಗಳಲ್ಲಿ ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯದಿಂದ ಕಬ್ಬು ಕಟಾವು ಸೇರಿ ಇತರ ಕೃಷಿ ಕೆಲಸ ಮಾಡಿಕೊಂಡಿದ್ದ ನಿವಾಸಿಗಳು ಗುಡಿಸಲು ನಿರ್ವಿುಸಿಕೊಂಡಿದ್ದರು. ಆದರೆ, ಕುಮದ್ವತಿ ನದಿ ನೀರು ಗುಡಿಸಲುಗಳಿಗೆ ನುಗ್ಗಿದೆ. ಇದರಿಂದ ಗುಡಿಸಲು ನಿವಾಸಿಗಳ ಅಡುಗೆ ಪಾತ್ರೆಗಳು, ಬಟ್ಟೆ ಹಾಗೂ ಹಾಸಿಗೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಆದ್ದರಿಂದ ಗುಡಿಸಲು ನಿವಾಸಿಗಳು ಪರದಾಡುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net