ವರುಣದೇವನ ಕೃಪೆಗೆ ರೈತರು ಸಂತಸ

18 ಗುರುಗುಂಟಾ ಫೋಟೋ 05
ಗುರುಗಂಟಾ ಹೋಬಳಿ ವ್ಯಾಪ್ತಿಯ ಜಮೀನೊಂದರಲ್ಲಿ ಬೆಳೆದ ಬೆಳೆ.
Published on

ಗುರುಗುಂಟಾ: ಹೋಬಳಿ ವ್ಯಾಪ್ತಿ ಗುರುವಾರ ರಾತ್ರಿ ಸುರಿದ ಮಳೆಯಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ.

ಮುಂಗಾರು ಆರಂಭದಲ್ಲಿ ಉತ್ತಮ ಮಳೆ ಬಂದಿದ್ದರಿಂದ ರೈತರು ಭೂಮಿ ಹದಗೊಳಿಸಿ ಬಿತ್ತನೆ ಮಾಡಿದ್ದರು. ಆದರೆ, ಮತ್ತೆ ಮಳೆ ಕೈಕೊಟ್ಟಿದ್ದರಿಂದ ರೈತರಲ್ಲಿ ದುಗುಡ ಹೆಚ್ಚಾಯಿತು. ಪ್ರತಿ ಹೆಕ್ಟೇರ್‌ಗೆ 20 ರಿಂದ 25 ಸಾವಿರ ರೂ. ನಷ್ಟವಾಗುವ ಭೀತಿಯಲ್ಲಿ ರೈತರಿದ್ದರು. ಆದರೆ, ಮೊನ್ನೆ ಸುರಿದ ಮಳೆಯಿಂದ ಬೆಳೆಗಳಿಗೆ ಕಳೆ ಬಂದಿದ್ದು, ಕೃಷಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಕೃಷಿ ಇಲಾಖೆ ಮಾಹಿತಿಯಂತೆ ಗುರುಗುಂಟಾ ಹೋಬಳಿಯಲ್ಲಿ ಮಳೆಯಾಶ್ರಿತ 10,991 ಹೆಕ್ಟೇರ್ ಪೈಕಿ ತೊಗರಿ 5119 ಹೆ., ಸಜ್ಜೆ-ಜೋಳ 2158 ಹೆ., ಸೂರ್ಯಕಾಂತಿ 226 ಹೆ., ಹತ್ತಿ 417 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ.

115 ಮಿಮೀ ಸಾಮಾನ್ಯ ಮಳೆಯಾಗಬೇಕಿತ್ತು. ಆದರೆ 94 ಮಿಮೀ ಮಳೆ ಬಿದ್ದಿದ್ದು, 18 ಮಿಮೀ ಕೊರತೆ ಕಾಡುತ್ತಿದೆ. ಮಳೆಗಾಗಿ ಹೋಬಳಿ ವ್ಯಾಪ್ತಿಯ ರೈತಾಪಿ ವರ್ಗ ವಿವಿಧ ರೀತಿಯಲ್ಲಿ ದೇವರಿಗೆ ಪೂಜೆಗಳು ಕೈಗೊಂಡಿದ್ದರು. ಇದೀಗ ವರುಣ ಕೃಪೆ ತೋರಿರುವುದು ರೈತರ ಖುಷಿಗೆ ಕಾರಣವಾಗಿದೆ.

ಹೋಬಳಿಯಲ್ಲಿ ವಾಡಿಕೆಗಿಂತ ಶೇ.18 ಮಳೆ ಕೊರತೆಯಾಗಿದೆ. ಗುರುವಾರ ರಾತ್ರಿ ಸುರಿದ ಮಳೆ ರೈತರ ಮೊಗದಲ್ಲಿ ತುಸು ಖುಷಿ ತರಿಸಿದೆ. ಈ ಹಂಗಾಮಿನಲ್ಲಿ ಡಿಎಪಿ ರಸಗೊಬ್ಬರ ಅಭಾವವಿರುವುದರಿಂದ ಅದರ ಬದಲಿಗೆ ಎನ್‌ಪಿಕೆ ಕಾಂಪ್ಲೆಕ್ಸ್ ಗೊಬ್ಬರ ರೈತರು ಬಳಸಬೇಕು.

ಶಿವರಾಜ ರಾಠೋಡ್

ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಗುರುಗುಂಟಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net